ಎನ್‌ಐಎ ಅಧಿಕಾರಿಗಳಿಂದ ಮತ್ತೆ ಶೋಧ

7

ಎನ್‌ಐಎ ಅಧಿಕಾರಿಗಳಿಂದ ಮತ್ತೆ ಶೋಧ

Published:
Updated:

ರಾಮನಗರ: ನಗರದಲ್ಲಿ ಬಂಧಿತನಾದ ಶಂಕಿತ ಉಗ್ರ ಮೊಹಮ್ಮದ್ ಜಹೀದುಲ್‌ ಇಸ್ಲಾಂ ಹಾಗೂ ಆತನ ಸಂಬಂಧಿಕರು ತಂಗಿದ್ದ ಮನೆಗಳಿಗೆ ಬುಧವಾರ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮತ್ತೆ ಭೇಟಿ ನೀಡಿ ಶೋಧ ಮುಂದುವರಿಸಿದರು. ಇವರ ಜತೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯ ಸಿಬ್ಬಂದಿಯೂ ಇದ್ದರು ಎನ್ನಲಾಗಿದೆ.

ಶಂಕಿತ ಉಗ್ರನನ್ನು ವಶಕ್ಕೆ ಪಡೆದಿರುವ ಎನ್‌ಐಎ ತಂಡ ಈಗಾಗಲೇ ಆತನನ್ನು ಪಾಟ್ನಾದತ್ತ ಕರೆದೊಯ್ಯುತ್ತಿದೆ. ಇತ್ತ ಇನ್ನೊಂದು ಅಧಿಕಾರಿಗಳ ತಂಡವು ರಾಮನಗರದಲ್ಲಿನ ಚಲನವಲನಗಳ ಮೇಲೆ ನಿಗಾ ವಹಿಸಿದೆ. ಆರೋಪಿಯ ಪತ್ನಿ ಬಳಿ ಇದೆ ಎನ್ನಲಾದ ಲ್ಯಾಪ್‌ಟಾಪ್‌ ಸಲುವಾಗಿ ಅವರ ಬೆನ್ನಿಗೆ ಬಿದ್ದಿದೆ.

ಬುಧವಾರ ಟ್ರೂಪ್‌ಲೈನ್‌ ಪ್ರದೇಶದಲ್ಲಿನ ಆರೋಪಿ ಮನೆಯಲ್ಲಿ ಅಧಿಕಾರಿಗಳು ಸತತ ಮೂರು ತಾಸು ಕಾಲ ಶೋಧ ಮುಂದುವರಿಸಿದರು. ಇದಲ್ಲದೆ ಟಿಪ್ಪು ನಗರದಲ್ಲಿ ಆರೋಪಿಯ ಭಾವಮೈದುನ ಹಸನ್ ತಂಗಿದ್ದ ಮನೆ ಹಾಗೂ ಅವರ ಅತ್ತೆ ತಂಗಿದ್ದ ಮನೆಯನ್ನೂ ಶೋಧಿಸಿದರು ಎಂದು ತಿಳಿದುಬಂದಿದೆ.

ಎನ್‌ಐಎ ಅಧಿಕಾರಿಗಳು ಸ್ಥಳೀಯ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದಾರೆ. ಆದರೆ ಎಲ್ಲೂ ಗುಟ್ಟು ಬಿಟ್ಟುಕೊಡದಂತೆ ಪೊಲೀಸರಿಗೆ ತಾಕೀತು ಮಾಡಲಾಗಿದೆ.

ಉಗ್ರ ಮತ್ತು ಆತನ ಸಂಬಂಧಿಕರು ಇಲ್ಲಿ ವಾಸವಿದ್ದರು ಎನ್ನುವ ಸಂಗತಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ದಶಕದ ಹಿಂದೆ ಚನ್ನಪಟ್ಟಣದಲ್ಲಿ ಕಚ್ಚಾ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಕೆಲವು ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು. ಅದರ ವಿಚಾರಣೆ ಇನ್ನೂ ನಡೆಯುತ್ತಿದೆ. ಅದನ್ನು ಹೊರತುಪಡಿಸಿ ಸದ್ಯ ಇಲ್ಲಿ ಅಂತಹ ಚಟುವಟಿಕೆಗಳು ವರದಿಯಾಗಿರಲಿಲ್ಲ.

ಇಸ್ಲಾಂ ನಿಕಟವರ್ತಿ ಅದಿಲ್‌ ಬಂಧನ

ಬೆಂಗಳೂರು: ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಪೊಲೀಸರು ದಂಡು ಪ್ರದೇಶದ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಮತ್ತೊಬ್ಬ ಉಗ್ರ ಆದಿಲ್‌ ಅಲಿಯಾಸ್‌ ಅಸದುಲ್ಲಾ (29) ಎಂಬಾತನನ್ನು ಬಂಧಿಸಿದ್ದಾರೆ.

ಆದಿಲ್‌, ರಾಮನಗರದಲ್ಲಿ ಭಾನುವಾರ ಬಂಧಿತನಾಗಿರುವ ಮೊಹಮ್ಮದ್‌ ಜಹಿದುಲ್‌ ಇಸ್ಲಾಂ ಅಲಿಯಾಸ್‌ ಕೌಸರ್‌ನ ಬಲಗೈ ಬಂಟ ಎಂದು ಎನ್‌ಐಎ ಹೇಳಿದೆ. ಈತನಿಂದ ಮೂರು ಮೊಬೈಲ್‌ ಸೆಟ್‌, ಬ್ಯಾಂಕ್‌ ಪಾವತಿ ಚೀಟಿ, ಬಂಗಾಳಿ ಭಾಷೆಯಲ್ಲಿ ಬರೆದಿರುವ ಟಿಪ್ಪಣಿಗಳು, ಸ್ಪೋಟಕಗಳನ್ನು ಸಿದ್ಧಪಡಿಸುವ ರಾಸಾಯನಿಕ ಸೂತ್ರಗಳನ್ನು ಒಳಗೊಂಡ ನೋಟ್‌ ಪುಸ್ತಕ ವಶಪಡಿಸಿಕೊಂಡಿದ್ದಾರೆ.

ಪಶ್ಚಿಮ ಬಂಗಾಳ ಮುರ್ಷಿದಾಬಾದ್‌ ಜಿಲ್ಲೆಯ ಎಲಿಸಬಾದ್‌ ಗ್ರಾಮದ ನಿವಾಸಿ ಲಾಲ್‌ಜನ್‌ ಶೇಖ್‌ ಎಂಬುವವರ ಪುತ್ರನಾದ ಆದಿಲ್‌ನನ್ನು ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಆನಂತರ ಪಟ್ನಾ ನ್ಯಾಯಾಲಯದಲ್ಲಿ ಹಾಜರುಪಡಿಸಲು ಅನುಮತಿ ಪಡೆಯಲಾಯಿತು.

ಕೇರಳ ಮಲ್ಲಪುರಂ ಬಾಂಗ್ಲಾ ಕಾರ್ಮಿಕರ ಕ್ಯಾಂಪ್‌ನಲ್ಲಿ ಈ ತಿಂಗಳ ಮೂರರಂದು ಬಂಧಿತರಾದ ಇಬ್ಬರು ಬಾಂಗ್ಲಾ ಪ್ರಜೆಗಳು ಕೊಟ್ಟ ಸುಳಿವಿನ ಮೇಲೆ ರಾಮನಗರದಲ್ಲಿ ಎನ್‌ಐಎ ಕಾರ್ಯಾಚರಣೆ ನಡೆಸಿ, ಇಸ್ಲಾಂನನ್ನು ಬಂಧಿಸಿದೆ.

ಈತನ ಬಳಿ ಟ್ಯಾಬ್‌, ಮೊಬೈಲ್‌, ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಸ್ಲಾಂ ಬಂಧನವಾಗುತ್ತಿದ್ದಂತೆ ಪತ್ನಿ, ಕುಟುಂಬದ ಇತರ ಸದಸ್ಯರು ಪರಾರಿಯಾಗಿದ್ದಾರೆ. ಬುದ್ಧಗಯಾ ಸ್ಪೋಟ ಪ್ರಕರಣದಲ್ಲಿ ಇದುವರೆಗೆ ಏಳು ಜನರನ್ನು ಬಂಧಿಸಿದಂತಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !