‘ಮಗವಿನ ಸರ್ವತೋಮುಖ ಬೆಳವಣಿಗೆ ಅವಶ್ಯಕ’

7
ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮ

‘ಮಗವಿನ ಸರ್ವತೋಮುಖ ಬೆಳವಣಿಗೆ ಅವಶ್ಯಕ’

Published:
Updated:
Deccan Herald

ರಾಮನಗರ: ಆರೋಗ್ಯವಂತ ನಾಗರಿಕ ಸಮಾಜ ಕಟ್ಟುವ ನಿಟ್ಟಿನಲ್ಲಿ ಶಿಶುವಿನ ಸರ್ವತೋಮುಖ ಬೆಳವಣಿಗೆ ಅತಿ ಮುಖ್ಯವಾಗಿದೆ. ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಪ್ರಮುಖವಾಗಿರುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಪ್ರಕಾಶ್ ಎಲ್. ನಾಡಿಗೇರ್‌ ಹೇಳಿದರು.

ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಪೌಷ್ಠಿಕ ಆಹಾರ ಸೇವಿಸುವ ಮೂಲಕ ತಮ್ಮ ಆರೋಗ್ಯದತ್ತ ಹೆಚ್ಚು ಕಾಳಜಿ ವಹಿಸಬೇಕು. ಶಿಶು ಗರ್ಭದಲ್ಲಿರುವಾಗಲೇ ತಾಯಿ ಪೌಷ್ಠಿಕ ಆಹಾರ ಸೇವಿಸಬೇಕು. ಸರ್ಕಾರವು ನಾನಾ ಯೋಜನೆಗಳ ಮೂಲಕ ಗರ್ಭಿಣಿ ಹಾಗೂ ತಾಯಂದಿರಿಗೆ ಪೌಷ್ಠಿಕ ಆಹಾರ ನೀಡುತ್ತಿದ್ದು, ಇದನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ತಾಯಿಯ ಎದೆ ಹಾಲು ಅಮೃತಕ್ಕೆ ಸಮನಾಗಿದ್ದು, ತಾಯಂದಿರು ಮಗು ಜನಿಸಿದ ಕೂಡಲೇ ಮಗುವಿಗೆ ತಮ್ಮ ಎದೆ ಹಾಲನ್ನು ಕುಡಿಸುವುದರಿಂದ ಹಾಲಿನಲ್ಲಿರುವ ಎಲ್ಲಾ ಪೌಷ್ಠಿಕಾಂಶಗಳು ಮಗುವಿಗೆ ಸಿಗಲಿವೆ. ಯಾವುದೇ ದೇಶ ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದಬೇಕಾದರೆ ಆರೋಗ್ಯವಂತ ಮಕ್ಕಳು ಬಹಳ ಮುಖ್ಯ ಎಂದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಆರ್.ಎನ್. ಲಕ್ಷ್ಮೀಪತಿ ಮಾತನಾಡಿ, ಇದೇ 1 ರಿಂದ 7ರ ವರೆಗೆ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹವನ್ನು ಜಿಲ್ಲೆಯಾದ್ಯಂತ ಆಚರಿಸಲಾಯಿತು. ಇದರ ಅಂಗವಾಗಿ ಪ್ರತಿಯೊಂದು ಹಳ್ಳಿಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಮತ್ತು ಉಪ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರ ಕುರಿತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.

ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಗರ್ಭಿಣಿ ಬಾಣಂತಿಯರಿಗೆ, ಹೆಣ್ಣು ಮಕ್ಕಳಿಗೆ, ಪೌಷ್ಠಿಕ ಆಹಾರದ ಸಮಗ್ರ ಮಾಹಿತಿ ನೀಡಲಾಗುತ್ತಿದೆ. ಹೆಚ್ಚಿನ ಜಾಗೃತಿ ಮೂಡಿಸುವಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ತೊಡಗಿಸಿಕೊಂಡಿದ್ದಾರೆ ಎಂದರು.

ದೇಹದ ಆರೋಗ್ಯವನ್ನು ಕಾಪಾಡಲು ಪೌಷ್ಠಿಕ ಆಹಾರ ಬಹಳ ಮುಖ್ಯವಾಗಿರುತ್ತದೆ. ಪ್ರಸ್ತುತ ಶಿಶು ಪೌಷ್ಠಿಕ ಆಹಾರದ ಕೊರತೆಯಿಂದಾಗಿ ನವಜಾತ ಶಿಶು ಜನನದಲ್ಲಿ ಮರಣ ಹೊಂದುತ್ತಿವೆ ಎಂದು ಅವರು ಹೇಳಿದರು.

ಆ್ಯಸಿಡ್ ದಾಳಿಗೊಳಗಾದವರಿಗೆ ಇರುವ ಕಾನೂನುಗಳ ಕುರಿತು ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಕೆ. ಶಾಂತಪ್ಪ ಮಾತನಾಡಿದರು.

ಜಿಲ್ಲಾ ಕಾನೂನುಗಳ ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎಸ್. ಹೊನ್ನಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ. ಅಮರ್‌ನಾಥ್‌, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶಶಿಕಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಹೇಮಾವತಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ಪ್ರಾಚಾರ್ಯೆ ಡಾ. ಹರಿಣಾಕ್ಷಿ, ಆರೋಗ್ಯ ಇಲಾಖೆಯ ಶಂಭು, ದಾಸಪ್ಪ ಇದ್ದರು.

ವಿದ್ಯಾರ್ಥಿನಿ ಸುಶ್ಮಿತಾ ಪ್ರಾರ್ಥಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದಕ್ಷಿಣಾಮೂರ್ತಿ ಸ್ವಾಗತಿಸಿದರು. ಉಪನ್ಯಾಸಕಿ ಭಾಗ್ಯಶ್ರೀ ನಿರೂಪಿಸಿದರು. ಗಂಗಾಧರ್‌ ವಂದಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಿದ್ಧ ಆಹಾರ ಸೇವನೆ ಬೇಡ
ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ.ಎಂ.ಎಸ್. ಶಶಿರೇಖಾ ಪ್ರಿಯದರ್ಶಿನಿ ಮಾತನಾಡಿ, ಕೇವಲ ಬಡವರಲ್ಲಿ ಮಾತ್ರವಲ್ಲದೇ ಶ್ರೀಮಂತರ ಮಕ್ಕಳಲ್ಲಿ ಈಚಿನ ದಿನಗಳಲ್ಲಿ ಅಪೌಷ್ಠಿಕತೆ ಕಾಣಿಸಿಕೊಳ್ಳುತ್ತಿದೆ. ಸಿದ್ಧ ಆಹಾರ ಸೇವನೆ ಹೆಚ್ಚುತ್ತಿರುವುದು ಇದಕ್ಕೆ ಮುಖ್ಯ ಕಾರಣ. ಗ್ರಾಮೀಣ ಜನರಲ್ಲಿ ಆಹಾರ ಪದ್ಧತಿ ಅರಿವು ಇಲ್ಲವಾಗಿದೆ ಎಂದು ತಿಳಿಸಿದರು.

ಮಹಿಳೆಯರು ರಕ್ತಹೀನತೆಯಿಂದ ಪಾರಾಗಬೇಕಾದರೆ ಮೊಳಕೆ ಕಾಳು, ಹಣ್ಣು-ಹಂಪಲು, ತರಕಾರಿಗಳ ಸೇವನೆಯನ್ನು ರೂಢಿ ಮಾಡಿಕೊಳ್ಳಬೇಕು. ಮೂಢನಂಬಿಕೆಗಳಿಂದ ಹೊರಬಂದು ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂದರು.

* ತಾಯಂದಿರು ಬಾಟಲ್‌ ಹಾಲನ್ನು ಬಳಸಿದರೆ ಮಗುವಿನ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಶಾರೀರಿಕ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ
–ಪ್ರಕಾಶ್‌ ನಾಡಿಗೇರ್‌, ಜಿಲ್ಲಾ ನ್ಯಾಯಾಧೀಶ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !