ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐಪಿಎಲ್‌ನಿಂದ ಆಟಗಾರರಿಗೆ ಭರ್ಜರಿ ಆದಾಯ': ಲಲಿತ್ ಮೋದಿ

Last Updated 19 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಲಂಡನ್‌: ‘ಐಪಿಎಲ್ ಭವಿಷ್ಯದಲ್ಲಿ ಇನ್ನಷ್ಟು ಶ್ರೀಮಂತವಾಗಲಿದೆ. ಪ್ರತಿಯೊಬ್ಬ ಆಟಗಾರ ಪ್ರತಿ ಪಂದ್ಯದಿಂದ ₹ 6 ಕೋಟಿಗೂ ಹೆಚ್ಚು ಸಂಪಾದಿಸುವ ಕಾಲ ಬರಬಹುದು. ಆದರೆ ಆಗ ದೇಶ–ದೇಶಗಳ ನಡುವಿನ ಪಂದ್ಯಗಳಿಗೆ ಧಕ್ಕೆಯಾಗಲಿದೆ’ ಎಂದು ಲೀಗ್‌ನ ಸ್ಥಾಪಕ ಲಲಿತ್ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಬ್ರಿಟನ್‌ನ ‘ಡೈಲಿ ಟೆಲಿಗ್ರಾಫ್‘ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು, ‘ಒಂದು ದಶಕದ ಹಿಂದೆ ಆರಂಭಿಸಿದ ದೇಶಿ ಟ್ವೆಂಟಿ–20 ಟೂರ್ನಿ ಈಗ ಅತ್ಯಂತ ಜನಪ್ರಿಯವಾಗಿದೆ. ಅನೇಕ ದೇಶಗಳಲ್ಲಿ ಈ ಟೂರ್ನಿಯನ್ನು ಅನುಕರಿಸಿ ಚುಟುಕು ಕ್ರಿಕೆಟ್ ಟೂರ್ನಿಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಐಪಿಎಲ್ ಇನ್ನಷ್ಟು ಪ್ರಸಿದ್ಧಿ ಪಡೆಯಲಿದೆ’ ಎಂದು ಹೇಳಿದ್ದಾರೆ.

‘ಐಪಿಎಲ್‌ನ ಮಹಿಮೆ ನಿರಂತರವಾಗಿರಲಿದೆ. ಮುಂದಿನ ದಿನಗಳಲ್ಲಿ ಪ್ರಪಂಚದ ಅತಿದೊಡ್ಡ ಕ್ರೀಡಾ ಲೀಗ್ ಆಗಿ ಮಾರ್ಪಡಲಿದೆ. ಭಾರತದಲ್ಲಿ ಉದ್ಯಮಿಗಳಿಗೆ, ಪ್ರಾಯೋಜಕರು ಮತ್ತು ಪ್ರಸಾರಕರಿಗೆ ಈ ಟೂರ್ನಿ ಭಾರಿ ಲಾಭ ಗಳಿಸಿಕೊಡಲಿದೆ. ಸದ್ಯ ಆಟಗಾರನೊಬ್ಬನನ್ನು ಕೋಟ್ಯಂತರ ಮೊತ್ತ ನೀಡಿ ತಂಡಗಳು ಗುತ್ತಿಗೆ ಪಡೆಯುತ್ತಿವೆ. ಮುಂದಿನ ದಿನಗಳಲ್ಲಿ ಎನ್‌ಎಫ್‌ಎಲ್‌ ತಾರೆಗಳಿಗಿಂತ ಮತ್ತು ಇಂಗ್ಲಿಷ್ ಪ್ರೀಮಿಯರ್‌ ಲೀಗ್ ಫುಟ್‌ಬಾಲ್‌ ಆಟಗಾರರಿಗಿಂತ ಹೆಚ್ಚು ಮೊತ್ತವನ್ನು ಐಪಿಎಲ್‌ನಲ್ಲಿ ಆಡುವ ಆಟಗಾರರು ಪಡೆದುಕೊಳ್ಳಲಿದ್ದಾರೆ’ ಎಂದು ಅವರು ಭವಿಷ್ಯ ನುಡಿದರು.

ಐಪಿಎಲ್‌ನಿಂದಾಗಿ ಭಾರತದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ನಗಣ್ಯವಾಗಿದೆ. ಅಲ್ಲಿನ ಪ್ರೇಕ್ಷಕರಿಗೆ ಆ ಪಂದ್ಯಗಳನ್ನು ವೀಕ್ಷಿಸುವ ಆಸಕ್ತಿಯೇ ಇಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಕ್ರಿಕೆಟ್ ಸರಣಿಗಳು ವಿಶ್ವಕಪ್‌ನಂತೆ ಮೂರು ಅಥವಾ ನಾಲ್ಕು ವರ್ಷಗಳಿಗೊಮ್ಮೆ ನಡೆಯಲಿವೆ. ಹೀಗಾಗಿ ಐಸಿಸಿಯೂ ಬೆಲೆ ಕಳೆದುಕೊಳ್ಳಲಿದೆ’ ಎಂದು ಮೋದಿ ಹೇಳಿದರು.

ಐಪಿಎಲ್‌ ಆಡಳಿತದಲ್ಲಿ ಅಕ್ರಮ ನಡೆಸಲಾಗಿದೆ ಎಂಬ ಆರೋಪದ ಮೇಲೆ ಬಿಸಿಸಿಐ ಮೋದಿ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿತ್ತು. ಹೀಗಾಗಿ 2009ರಲ್ಲಿ ಲಂಡನ್‌ಗೆ ತೆರಳಿದ ಅವರು ವಾಪಸ್ ಬರಲಿಲ್ಲ. ಅವರ ಮೇಲೆ ಒಟ್ಟು ಎಂಟು ಪ್ರಕರಣಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT