ಗುರುವಾರ , ಅಕ್ಟೋಬರ್ 24, 2019
21 °C

ವನ್ಯಜೀವಿ ಸ್ನೇಹಿ ವೈಜ್ಞಾನಿಕ ಸಂಶೋಧನೆ ಅಗತ್ಯ: ರಾಘವೇಂದ್ರ

Published:
Updated:
Prajavani

ಶಿವಮೊಗ್ಗ: ಪರಿಸರ, ವನ್ಯಜೀವಿ ಸ್ನೇಹಿ ವೈಜ್ಞಾನಿಕ ಸಂಶೋಧನೆಗಳ ಆವಶ್ಯಕತೆ ಇದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟರು.

ಜಿಲ್ಲೆಯ ವನ್ಯಜೀವಿ ವಿಭಾಗ ವನ್ಯ ಜೀವಿ ಸಪ್ತಾಹದ ಅಂಗವಾಗಿ ಸಕ್ರೆಬೈಲ್ ಆನೆ ಬಿಡಾರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಬಿಡಾರದ ಲೋಗೊ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ವಿಜ್ಞಾನದ ಬಹುತೇಕ ಆವಿಷ್ಕಾರಗಳು ಪರಿಸರ, ವನ್ಯಜೀವಿಗಳ ಅವನತಿಗೆ ಕಾರಣವಾಗುತ್ತಿವೆ. ಬದಲು ಪರಿಸರ, ವನ್ಯಜೀವಿ ಸ್ನೇಹಿ ಸಂಶೋಧನೆಗಳಿಗೆ ಒತ್ತು ನೀಡಬೇಕು. ಮೊಬೈಲ್ ತರಂಗಗಳು, ಪ್ಲಾಸ್ಟಿಕ್, ರಾಸಾಯನಿಕ ವಸ್ತುಗಳು ಹೆಚ್ಚಿನ ಜೀವಿಗಳ ಅವನತಿಗೆ ಕಾರಣವಾಗುತ್ತಿವೆ. ಸರ್ಕಾರ ಪ್ಲಾಸ್ಟಿಕ್ ನಿಷೇಧಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಕಾಡಿನಲ್ಲಿ ಸ್ವಚ್ಛಂದವಾಗಿ ಇರುವ ಪ್ರಾಣಿಗಳನ್ನು ಮನುಷ್ಯನ ಅಗತ್ಯಗಳಿಗೆ, ಮನರಂಜನೆಗೆ ಬಳಸಿಕೊಳ್ಳುವುದು ಪರಿಸರದ ಧರ್ಮಕ್ಕೆ ವಿರುದ್ಧ. ಅವುಗಳನ್ನು ಪ್ರೀತಿಯಿಂದ ಕಾಣಬೇಕು. ರಕ್ಷಣೆ ಮಾಡಬೇಕು.

ಆನೆ ಬಿಡಾರಕ್ಕೆ ಬರುವ ಪ್ರವಾಸಿಗರಿಂದ ಪ್ರತಿ ವರ್ಷ ₨1 ಕೋಟಿ ಆದಾಯ ಬರುತ್ತಿದೆ. ಈ ಆದಾಯ ಹೆಚ್ಚಿಸಲು ಬಿಡಾರಕ್ಕೆ ಇನ್ನಷ್ಟು ಮೂಲ ಸೌಲಭ್ಯ ಕಲ್ಪಿಸಲಾಗುವುದು. ಈಗಾಗಲೇ ₨ 2 ಕೋಟಿ ಬಿಡುಗಡೆ ಮಾಡಲಾಗಿದೆ. ಅರಣ್ಯ ಖಾತೆ ಸಚಿವರ ಜತೆ ಚರ್ಚಿಸಿದ ನಂತರ ನಾಗರ ಹೊಳೆ ಸಫಾರಿ ಮಾದರಿ ಪ್ರವಾಸಿ ತಾಣವಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯ ಮತ್ತೊಂದು ವನ್ಯಜೀವಿಗಳ ತಾಣ ತ್ಯಾವರೆಕೊಪ್ಪದ ಹುಲಿ ಸಿಂಹಧಾಮ ಅಭಿವೃದ್ಧಿ ಪಡಿಸಲಾಗುತ್ತಿದೆ. ಹೆಚ್ಚಿನ ಅನುದಾನ ಒದಗಿಸುವ ಮೂಲಕ ಎರಡು ತಾಣಗಳನ್ನೂ ಉತ್ತಮ ಪ್ರವಾಸಿ ಕೇಂದ್ರವಾಗಿಸಲು ಯೋಜನೆ ರೂಪಿಸಲಾಗುವುದು ಎಂದು ವಿವರ ನೀಡಿದರು.

ಬಿಡಾರದ ಆನೆಗಳಲ್ಲಿ ಆರೋಗ್ಯದ ಸಮಸ್ಯೆ ಕಂಡುಬರುತ್ತಿದೆ. ಸೋಂಕು ಮತ್ತಿತರ ಕಾರಣದಿಂದ ಆನೆಗಳ ಸಂಖ್ಯೆ ಇಳಿಮುಖವಾಗಿದೆ. ಸೂಕ್ತ ಚಿಕಿತ್ಸೆ ನೀಡುವ ಜತೆಗೆ, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಬಿಡಾರಕ್ಕೇ ಪ್ರತ್ಯೇಕ ವೈದ್ಯಾಧಿಕಾರಿ ನೇಮಿಸಲಾಗುವುದು ಎಂದರು.

ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್, ತ್ಯಾವರೆಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮುಕುಂದ್ ಚಂದ್ ಉಪಸ್ಥಿತರಿದ್ದರು.

ವನ್ಯಜೀವಿ ಸಪ್ತಾಹ ಅಂಗವಾಗಿ ಪ್ಲಾಸ್ಟಿಕ್ ಮುಕ್ತ ಪರಿಸರ ಧ್ಯೇಯದೊಂದಿಗೆ ವಿದ್ಯಾರ್ಥಿಗಳು ಪರಿಸರ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)