ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ರಾಗಿ ಖರೀದಿ ಕೇಂದ್ರ ಆರಂಭ

ಮಾರ್ಚ್ 31ರವರೆಗೆ ಖರೀದಿ ಪ್ರಕ್ರಿಯೆ: ಕ್ವಿಂಟಲ್‌ಗೆ ₨2897 ದರ ನಿಗದಿ
Last Updated 2 ಜನವರಿ 2019, 13:55 IST
ಅಕ್ಷರ ಗಾತ್ರ

ರಾಮನಗರ: ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ಪ್ರಕ್ರಿಯೆಯು ಆರಂಭಗೊಂಡಿದ್ದು, ಮಾರ್ಚ್ 31ರವರೆಗೆ ಖರೀದಿ ನಡೆಯಲಿದೆ. ಸರ್ಕಾರವು ಪ್ರತಿ ಕ್ವಿಂಟಲ್‌ಗೆ ₹2897 ದರ ನಿಗದಿಪಡಿಸಿದೆ.

ಈ ಸಂಬಂಧ ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ.ರಾಜೇಂದ್ರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಡಿಯಲ್ಲಿ ಖರೀದಿ ನಡೆಯಲಿದೆ. ಚನ್ನಪಟ್ಟಣದ ಜಾನಪದ ಲೋಕದ ಬಳಿ, ಕನಕಪುರದ ಮೇಳೆಕೋಟೆ ಬಳಿ, ಮಾಗಡಿಯ ಗುಡೆಮಾರನಹಳ್ಳಿ ರಸ್ತೆಯಲ್ಲಿ ಹಾಗೂ ರಾಮನಗರದ ಅರ್ಚಕರಹಳ್ಳಿ ಸಮೀಪ ಇರುವ ಕೆಎಫ್‌ಸಿಎಸ್‌ಸಿ ಮಾರಾಟ ಮಳಿಗೆಗಳಲ್ಲಿ ಖರೀದಿ ನಡೆಯಲಿದೆ.

ತಾಲ್ಲೂಕು ಕಾರ್ಯಪಡೆ: 2018–-19 ನೇ ಸಾಲಿನ ಬೆಂಬಲ ಬೆಲೆ ಯೋಜನೆ ಕಾರ್ಯಾಚರಣೆ ಮೇಲ್ವಿಚಾರಣೆ ಮಾಡಲು ಪ್ರತಿ ತಾಲ್ಲೂಕಿಗೆ ಒಂದು ತಾಲ್ಲೂಕು ಕಾರ್ಯಚರಣೆ ಪಡೆ ರಚಿಸಲಾಗಿದೆ.

ಬೆಳೆ ದೃಢೀಕರಣ ಪತ್ರಗಳು: ಕೃಷಿ ಉತ್ಪನ್ನಗಳನ್ನು ರೈತರಿಂದ ಮಾತ್ರ ಖರೀದಿಸ ಬೇಕಿರುವುದರಿಂದ ಕೃಷಿ ಉತ್ಪನ್ನಗಳನ್ನು ಬೆಳೆದ ಬಗ್ಗೆ ಕಂದಾಯ ಇಲಾಖೆಯು ಗಣಕೀಕೃತ ಆರ್.ಟಿ.ಸಿ. ನೀಡಬೇಕು. ರೈತರಿಗೆ ಈ ಪತ್ರದಲ್ಲಿ ನೀಡಿರುವ ನಮೂನೆಯಲ್ಲಿ ಭಾವಚಿತ್ರ ಆಧಾರಿತ ಬೆಳೆ ದೃಢೀಕರಣ ಪತ್ರವನ್ನು ತಹಶೀಲ್ದಾರರು ನೀಡಬೇಕು. ಆರ್.ಟಿ.ಸಿ. ಮತ್ತು ಬೆಳೆ ದೃಢೀಕರಣ ಪತ್ರಗಳು ಸಕಾಲದಲ್ಲಿ ರೈತರಿಗೆ ಸಿಗುವಂತೆ ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಪ್ರತಿ ಹೋಬಳಿ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಅಧಿಕಾರಿಗಳನ್ನು ನಿಯೋಜಿಸಲಾಗುವುದು.

ಎಲ್ಲಾ ಬೆಳೆ ದೃಢೀಕರಣ ಪತ್ರಗಳಲ್ಲಿ ಸಂಬಂಧಿಸಿದ ರೈತರ ಭಾವಚಿತ್ರ ಅಂಟಿಸಿ ದೃಢೀಕರಿಸಬೇಕು. ಬೆಳೆ ದೃಢೀಕರಣ ಪತ್ರಗಳನ್ನು ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ ಮುದ್ರಿಸಿ ತಹಶೀಲ್ದಾರರಿಗೆ ಒದಗಿಸಬೇಕು. ಪ್ರತಿ ದೃಢೀಕರಣ ಪತ್ರದಲ್ಲಿ ಕ್ರಮಸಂಖ್ಯೆ ಮುದ್ರಣವಾಗಿರಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಗುಣಮಟ್ಟ ಪರಿಶೀಲನೆ ಹೆಸರಲ್ಲಿ ರೈತರಿಗೆ ಕಿರುಕುಳ ನೀಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಆರ್. ಪ್ರಶಾಂತ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಪುಟ್ಟಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT