ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

104 ಪಶು ಆಸ್ಪತ್ರೆಗಳಿಗೆ 15 ವೈದ್ಯರು!

ಮಾನ್ವಿ ತಾಲ್ಲೂಕಿನಲ್ಲಿ ಒಬ್ಬರೂ ವೈದ್ಯರಿಲ್ಲದೆ ಪರದಾಟ
Last Updated 15 ಜೂನ್ 2017, 10:44 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಾದ್ಯಂತ ವಿವಿಧ ಸ್ತರದ ಒಟ್ಟು 104 ಪಶುವೈದ್ಯ ಸೇವಾ ಆಸ್ಪತ್ರೆಗಳಿದ್ದರೂ 15 ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಜಾನು ವಾರು ಸಾಕಾಣಿಕೆ ಅವಲಂಬಿಸಿರುವ ಹಿಂದುಳಿದ ಜಿಲ್ಲೆಯಲ್ಲಿ ಸೂಕ್ತ ಪಶು ಚಿಕಿತ್ಸೆ ಲಭ್ಯವಾಗದೆ ರೈತರು ಪರದಾಡುವಂತಾಗಿದೆ.

ಮಾನ್ವಿ ತಾಲ್ಲೂಕಿಗೆ 14 ಪಶುವೈದ್ಯಾಧಿಕಾರಿ ಹುದ್ದೆಗಳ ಮಂಜೂರಾತಿ ಇದ್ದರೂ ಅನೇಕ ವರ್ಷಗಳಿಂದ ಒಂದೇ ಒಂದು ವೈದ್ಯ ಹುದ್ದೆ ಭರ್ತಿಯಾಗಿಲ್ಲ. ರಾಯಚೂರು ತಾಲ್ಲೂಕಿನಿಂದ ಮಾನ್ವಿಗೆ ಒಬ್ಬ ವೈದ್ಯರೊಬ್ಬರನ್ನು ನಿಯೋಜಿಸಲಾಗಿದೆ.

ನಿಯೋಜನೆಯಾದ ಮಾನ್ವಿ ಪಶುವೈದ್ಯರಿಗೆ ದೇವದುರ್ಗ ತಾಲ್ಲೂಕು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರ ಹುದ್ದೆ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಹುದ್ದೆಗಳ ಪ್ರಭಾರವನ್ನು ವಹಿಸಲಾಗಿದೆ. ಆಡಳಿತಾತ್ಮಕ ಕಾರ್ಯಭಾರದಲ್ಲಿ ಇರುವ ಒಬ್ಬ ಪಶುವೈದ್ಯರನ್ನು ತೊಡಗಿ ಸಿರುವುದರಿಂದ ಮಾನ್ವಿ ತಾಲಕು ಒಟ್ಟಾರೆ ಪಶುವೈದ್ಯರ ಸೇವೆಯಿಂದ ವಂಚಿತವಾದಂತಾಗಿದೆ.

ಜಿಲ್ಲೆಗೆ ಒಟ್ಟು 81 ಪಶುವೈದ್ಯ ಹುದ್ದೆಗಳ ಮಂಜೂರಾತಿ ಇದ್ದರೂ 15 ಹುದ್ದೆಗಳು ಭರ್ತಿಯಾಗಿ 65 ಹುದ್ದೆಗಳು ಖಾಲಿ ಉಳಿದಿವೆ. ಬೆರಳೆಣಿಕೆ ಸಂಖ್ಯೆಯಲ್ಲಿರುವ ವೈದ್ಯರೆ ಎಲ್ಲವನ್ನೂ ನಿಭಾಯಿಸಬೇಕಾಗಿದೆ. ವರ್ಷದಲ್ಲಿ ನಾಲ್ಕು ಭಾರಿ ಲಸಿಕೆ ಅಭಿಯಾನಗಳನ್ನು ನಡೆಸುವುದು.

ವಿವಿಧ ಯೋಜನೆಗಳಡಿ ಜಾನುವಾರುಗಳ ಖರೀದಿಗೆ ಸಾಕ್ಷಿಯಾಗುವುದು, ಸಭೆಗಳಿಗೆ ಹಾಜರಾಗಿ ಜನಪ್ರತಿನಿಧಿಗಳಿಗೆ ಮಾಹಿತಿ ಒದಗಿಸುವುದು ಹಾಗೂ ಪಶುಗಳಿಗೆ ಚಿಕಿತ್ಸೆ ನೀಡುವ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

‘ಜಿಲ್ಲೆಯಲ್ಲಿ ವೈದ್ಯರ ಹುದ್ದೆಗಳು ಖಾಲಿ ಇರುವ ಬಗ್ಗೆ ಸರ್ಕಾರಕ್ಕೆ ಆಗಾಗ ಮಾಹಿತಿ ಒದಗಿಸಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರು ಇರುವುದರಿಂದ ಹುದ್ದೆಯಲ್ಲಿರುವ ವೈದ್ಯರೆ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಬೇಕಾಗಿದೆ. ವೈದ್ಯರ ಕೊರತೆ ಸಮಸ್ಯೆ ಬಹಳ ಇದೆ’ ಎಂದು ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಜಿ.ಶಿವಪ್ರಕಾಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾ ಕೇಂದ್ರದಲ್ಲಿ ಒಂದು ಪಾಲಿಕ್ಲಿನಿಕ್‌, ತಾಲ್ಲೂಕುಗಳು ಹಾಗೂ ಹೋಬಳಿ ಮಟ್ಟದಲ್ಲಿ ಪಶು ಆಸ್ಪತ್ರೆಗಳು, ದೊಡ್ಡ ಗ್ರಾಮ ಪಂಚಾಯಿತಿಗಳು ಇರುವ ಕಡೆಗಳಲ್ಲಿ ಪಶು ಚಿಕಿತ್ಸಾಲಯಗಳು ಹಾಗೂ ದೊಡ್ಡ ಗ್ರಾಮಗಳಿರುವ ಕಡೆ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಸರ್ಕಾರ ತೆರೆದಿದೆ.

ಎಲ್ಲ ಕಡೆಗಳಲ್ಲೂ ಪಶುವೈದ್ಯರು ಸೇವೆ ಒದಗಿಸಬೇಕಾಗಿತ್ತು. ಪಶುವೈದ್ಯರ ಹುದ್ದೆ ಸೇರಿದಂತೆ ಮಂಜೂರಾದ ಎಲ್ಲಾ ದರ್ಜೆಯ ಹುದ್ದೆಗಳಲ್ಲಿ ಶೇ 50 ರಷ್ಟು ಖಾಲಿ ಉಳಿದಿವೆ.

‘ಬಿ’ ದರ್ಜೆಯ ಆಡಳಿತ ಸಹಾಯಕರು ಮತ್ತು ಜಾನುವಾರು ಅಭಿವೃದ್ಧಿ ಅಧಿಕಾರಿಗಳ ಏಳು ಹುದ್ದೆಗ ಳೆಲ್ಲ ಖಾಲಿ ಇವೆ. ‘ಸಿ’ ದರ್ಜೆಯ ಜಾನುವಾರು ಅಧಿಕಾರಿಗಳು, ಹಿರಿಯ ಪಶುವೈದ್ಯಕೀಯ ಪರೀಕ್ಷಕರು ಮತ್ತು ಪಶು ವೈದ್ಯಕೀಯ ಪರೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ನೇಮಕವಾಗಿದ್ದಾರೆ.

‘ಸಿ ದರ್ಜೆಯ ಹುದ್ದೆಗಳು ಶೇ 80 ರಷ್ಟು ಭರ್ತಿ ಇರುವುದರಿಂದ ಸ್ವಲ್ಪ ನೆಮ್ಮದಿ ಇದೆ. ಪಶು ವೈದ್ಯ ಸೇವಾ ಆಸ್ಪತ್ರೆಗಳಲ್ಲಿ ಮತ್ತು ಲಸಿಕೆ ಅಭಿಯಾನ ನಡೆಯುವಾಗ ಇವರೆ ಪ್ರಮುಖ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಇದು ಅನಿವಾರ್ಯವಾಗಿದೆ. ಅವರಿಗೇ ಸೂಕ್ತ ತರಬೇತಿ ನೀಡಲಾಗಿದ್ದು ಜಾನುವಾರು ಗಳಿಗೆ ಅವರೆ ಲಸಿಕೆ ಮದ್ದು ಕೊಡುತ್ತಾರೆ. ಇದರಿಂದ ನಿಗದಿತ ಅವಧಿಯಲ್ಲಿ ಲಸಿಕೆ ಅಭಿಯಾನದ ಗುರಿ ತಲುಪುವುದಕ್ಕೆ ಸಾಧ್ಯವಾಗುತ್ತಿದೆ’ ಎಂದು ಡಾ.ಜಿ.ಶಿವಪ್ರಕಾಶ್‌ ಹೇಳಿದರು.

‘ಜಿಲ್ಲೆಯಲ್ಲಿ ಸಂಚಾರಿ ಪಶು ವೈದ್ಯಕೀಯ ಸೇವಾ ಆಸ್ಪತ್ರೆ ಕೆಲಸ ಮಾಡು ತ್ತಿದೆ. ವೈದ್ಯರ ಕೊರತೆಯಿಂದಾಗಿ ವಾಹನವನ್ನು ಸರಿಯಾಗಿ ಓಡಿಸಿ ಸೇವೆ ಒದಗಿಸಲು ಆಗುತ್ತಿಲ್ಲ. ರಾಜ್ಯದಲ್ಲಿ ಹೊಸದಾಗಿ 350 ವೈದ್ಯರ ಹುದ್ದೆಗಳನ್ನು ಸರ್ಕಾರದಿಂದ ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಅದ ರಲ್ಲಿ ರಾಯಚೂರು ಜಿಲ್ಲೆಗೂ ವೈದ್ಯರನ್ನು ಕೊಡುವ ನಿರೀಕ್ಷೆ ಇದೆ’ ಎಂದರು.

*
ಆಸ್ಪತ್ರೆಯಲ್ಲಿ ಪಶು ವೈದ್ಯರ ಕೊರತೆ ಇದೆ. ಆಸ್ಪತ್ರೆಯ ಸಹಾಯಕ ಸಿಬ್ಬಂದಿ ಜಾನುವಾರುಗಳನ್ನು ತಪಾಸಣೆ ಮಾಡಿ ಔಷಧಗಳನ್ನು ಬರೆದುಕೊಡುತ್ತಾರೆ.
–ವಿರೂಪಾಕ್ಷಗೌಡ ನಂದರೆಡ್ಡಿ,
ಮಾನ್ವಿ ತಾಲ್ಲೂಕು ಸಿರವಾರದ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT