ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ರಿಂದ ಅಖಿಲ ಭಾರತ ಮುಷ್ಕರ

Last Updated 3 ಜನವರಿ 2019, 13:00 IST
ಅಕ್ಷರ ಗಾತ್ರ

ರಾಯಚೂರು: ಬೆಲೆ ಏರಿಕೆ, ಕನಿಷ್ಠ ವೇತನ ಹೆಚ್ಚಳ, ಸಾಮಾಜಿಕ ಭದ್ರತೆ, ಸ್ಕೀಮ್ ಕೆಲಸಗಾರರ ಸ್ಥಾನಮಾನ, ಖಾಸಗೀಕರಣ ಹಾಗೂ ಗುತ್ತಿಗೆ ಪದ್ಧತಿ ವಿರೋಧಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜನವರಿ 8 ಮತ್ತು 9ರಂದು ಅಖಿಲ ಭಾರತ ಮುಷ್ಕರ ನಡೆಸಲಾಗುತ್ತಿದ್ದು, ಶಾಲಾ–ಕಾಲೇಜು ಹಾಗೂ ವರ್ತಕರು ಸ್ವಯಂ ಪ್ರೇರಿತವಾಗಿ ಬಂದ್‌ ಮಾಡಿ ಬೆಂಬಲ ನೀಡಬೇಕು ಎಂದು ಕಾರ್ಮಿಕ ಸಂಘಗಳ ಜಂಟಿ ಸಮಿತಿ ಸಂಚಾಲಕ ಡಿ.ಎಸ್.ಶರಣಬಸವ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಳವಾಗುತ್ತಿದ್ದು, ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಆದರೆ, ವೇತನ ಹೆಚ್ಚಳವಾಗುತ್ತಿಲ್ಲ. ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಹಲವು ಬಾರಿ ಮುಷ್ಕರ ನಡೆಸಿದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ನೋಟು ರದ್ದತಿಯಾದ ಕೆಲವೇ ತಿಂಗಳಲ್ಲಿ 2.3ಲಕ್ಷ ಸಣ್ಣ ಕಾರ್ಖಾನೆಗಳು ಮುಚ್ಚಲ್ಪಟ್ಟು, 70 ಲಕ್ಷ ಉದ್ಯೋಗಗಳು ನಾಶವಾಗಿವೆ. ಅಸಂಘಟಿತ ವಲಯದ 6ಕೋಟಿ ಉದ್ಯೋಗಗಳು, ಸಂಘಟಿತ ವಲಯದ 17ಲಕ್ಷ ಉದ್ಯೋಗಗಳು ನಾಶವಾಗಿದ್ದು, ಸರ್ಕಾರದ ಅಂಕಿಅಂಶಗಳು ವಾಸ್ತವವನ್ನು ಮರೆಮಾಚುತ್ತಿವೆ. 44 ಕಾರ್ಮಿಕ ಕಾನೂನುಗಳನ್ನು ನಾಲ್ಕು ಕೋಡ್‌ಗಳಾಗಿ ರಚಿಸಿ ಕಾರ್ಮಿಕ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ದೂರಿದರು.

ಕೇಂದ್ರ ಸರ್ಕಾರದ ನಾಲ್ಕು ವರ್ಷಗಳ ಆಡಳಿತ ಕಾರ್ಮಿಕ ವಿರೋಧಿಯಾಗಿದೆ. ಕೈಗಾರಿಕೋದ್ಯಮಿಗಳು ಸಾರ್ವಜನಿಕ ಬ್ಯಾಂಕುಗಳನ್ನು ಹಾಡುಹಗಲೇ ಲೂಟಿ ಮಾಡುತ್ತಿದ್ದಾರೆ. ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೋರೇಟ್ ವಲಯಕ್ಕೆ ವಹಿಸಿಕೊಡಲಾಗುತ್ತಿದ್ದು, ಇದು ದೇಶದ ಆರ್ಥಿಕತೆ ಹಾಗೂ ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡಲಿದೆ ಎಂದರು.

ಎರಡು ದಿನಗಳ ಮುಷ್ಕರದ ಭಾಗವಾಗಿ ಸ್ವಯಂಪ್ರೇರಿತ ಬಂದ್‌, ಬೈಕ್ ರ್‍ಯಾಲಿ, ಪ್ರತಿಭಟನೆಗಳು ನಡೆಯಲಿವೆ. 9ರಂದು ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನಾ ಮೆರವಣಿಗೆ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ. ನಗರದಲ್ಲಿ ಎರಡು ದಿನಗಳು ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದೆ. ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ನೀಡಲಾಗುತ್ತದೆ ಎಂದರು.

ಎನ್.ಎಸ್.ವೀರೇಶ, ಎಚ್,ಪದ್ಮಾ, ಎಂ.ರವಿ, ಪ್ರಾಣೇಶ ಮುತಾಲಿಕ, ತಾಯಪ್ಪ ಮರ್ಚಟ್ಹಾಳ, ಬಾಬು, ಸಲಾವುದ್ದೀನ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT