ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಎತ್ತಲು ಮನೆಮನೆಗೆ ಬಾರದ ಆಟೊ

ಮುದಗಲ್ ಹೋಬಳಿಯ 15ಕ್ಕೂ ಹೆಚ್ಚು ಗ್ರಾಪಂಗಳಲ್ಲಿ ಸಮಸ್ಯೆ
Last Updated 18 ಡಿಸೆಂಬರ್ 2022, 7:11 IST
ಅಕ್ಷರ ಗಾತ್ರ

ಮುದಗಲ್: ಪಟ್ಟಣದ ಸುತ್ತಲಿನ ವಿವಿಧ ಗ್ರಾಮ ಪಂಚಾಯಿತಿಯಲ್ಲಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಖರೀದಿಸಿದ ಲಗ್ಗೇಜ್ ಆಟೊಗಳು ಉಪಯೋಗಕ್ಕೆ ಬಾರದೆ ನಿಂತಿವೆ.

ಗ್ರಾಮ ಪಂಚಾಯಿತಿಗಳಲ್ಲಿರುವ ಲಗ್ಗೇಜ್ ಆಟೊಗಳು ಕಸ ಎತ್ತಲು ಮನೆ ಮನೆಗೆ ಹೋಗುತ್ತಿಲ್ಲ. ಒಂದು ಆಟೊದ ಬೆಲೆ ಅಂದಾಜು ₹ 6.5 ಲಕ್ಷ ಇದೆ. ನಾಗರಾಳ, ಹೂನೂರು, ಬನ್ನಿಗೋಳ, ನಾಗಲಾಪುರ, ಕಾಚಾಪುರ, ಆಮದಿಹಾಳ, ಉಪ್ಪಾರ ನಂದಿಹಾಳ, ಬಯ್ಯಾಪುರ, ಆನೆಹೊಸೂರು, ಹಲ್ಕಾವಟಗಿ ಸೇರಿದಂತೆ ಮುದಗಲ್ ಹೋಬಳಿಯ 15 ಕ್ಕೂ ಹೆಚ್ಚು ಗ್ರಾ.ಪಂ ಗಳಲ್ಲಿ ಆಟೊಗಳ ಬಳಕೆ ಆಗುತ್ತಿಲ್ಲ.

‘ಲಿಂಗಸುಗೂರು ತಾಲ್ಲೂಕಿನ 30 ಗ್ರಾ.ಪಂಗಳಲ್ಲಿ ಆಟೊಗಳು ಉಪಯೋಗ ಆಗುತ್ತಿಲ್ಲ. ಕೆಲ ಕಡೆ ಅಧ್ಯಕ್ಷರು ತಮ್ಮ ಮನೆ ಮುಂದೆ ನಿಲ್ಲಿಸಿಕೊಂಡಿದ್ದಾರೆ’ ಎಂಬ ಆರೋಪ ಇದೆ.

ಕಸ ವಿಲೇವಾರಿ ಘಟಕ ಸಮಸ್ಯೆ: ಶೇ 70 ರಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಗ್ರಾಮ ಪಂಚಾಯಿತಿಯಿಂದ ಕಸ ವಿಲೇವಾರಿ ಮಾಡಲು ನಿರ್ದಿಷ್ಟ ಸ್ಥಳವಿಲ್ಲ. ಅಲ್ಲದೇ ಕಸ ವಿಲೇವಾರಿ ಘಟಕ ಇಲ್ಲ.

‘ಎಲ್ಲ ಗ್ರಾ.ಪಂಗಳಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಬೇಕು ಎಂಬ ಸರ್ಕಾರದ ಆದೇಶವಿದೆ. ಗ್ರಾಮ ಪಂಚಾಯಿತಿಯೇ ಜನರ ತೆರಿಗೆ ಹಣ ಹಾಗೂ ನರೇಗಾ ಯೋಜನೆಯ ಹಣವನ್ನು ವಿನಿಯೋಗಿಸಿ ಕಸ ವಿಲೇವಾರಿ ಘಟಕ ಸ್ಥಾಪಿಸಬೇಕಾಗಿದೆ. ಈ ವಿಷಯದಲ್ಲಿ ಪಂಚಾಯಿತಿ ಆಡಳಿತ ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎನ್ನುತ್ತಾರೆ ಉಪ್ಪಾರ ನಂದಿಹಾಳ ಗ್ರಾಮಸ್ಥರು.

‘ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಮಿಷನ್‌ ಯೋಜನೆ ಹಳ್ಳ ಹಿಡಿಯುತ್ತಿದೆ. ಸರ್ಕಾರ ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸಲು ಮೀನಮೇಷ ಎಣಿಸುತ್ತಿದೆ. ಇಂತಹ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಾರ್ವಜನಿಕರ ತೆರಿಗೆ ಹಣವನ್ನು ಹಾಳು ಮಾಡಲಾಗುತ್ತಿದೆ. ಸ್ವಚ್ಛ ಭಾರತಕ್ಕೆ ರೂಪಿಸಿದ ಯೋಜನೆಯು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಫಲವಾಗಿಲ್ಲ’ ಎಂದು ಹನಮೇಶ ಅವರು ಆರೋಪಿಸಿದರು.

‘ಮನೆಮನೆಗೂ ಹಸಿ ಕಸ ಮತ್ತು ಒಣ ಕಸಕ್ಕಾಗಿ ವಿತರಿಸಲಾಗಿದ್ದ ಬಕೆಟ್‌ಗಳು ನೀರು ತುಂಬಲು, ಬಟ್ಟೆ, ಪಾತ್ರೆ ತೊಳೆಯಲು ಉಪಯೋಗವಾಗುತ್ತಿದ್ದು, ಕಸ ವಿಲೇವಾರಿಗೆ ಬಳಕೆ ಆಗುತ್ತಿಲ್ಲ’ ಎಂದು ಸಾರ್ವಜನಿಕರಾದ ರಾಜಶೇಖರ, ದಾವೂದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT