ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಧನೂರು: ಕಿವಿಗೆ ಹೂವು, ಕೈಯಲ್ಲಿ ಚಿಪ್ಪು, ಹಗ್ಗದಿಂದ ಆಟೋ ಎಳೆದು ಪ್ರತಿಭಟನೆ

ತೈಲ ಬೆಲೆ ಏರಿಕೆಗೆ ಬಿಜೆಪಿ ವಿರೋಧ | ಸರ್ಕಾರ ಆದೇಶ ಹಿಂಪಡೆಯಲು ಒತ್ತಾಯ
Published 20 ಜೂನ್ 2024, 13:14 IST
Last Updated 20 ಜೂನ್ 2024, 13:14 IST
ಅಕ್ಷರ ಗಾತ್ರ

ಸಿಂಧನೂರು: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿರೋಧ ಹಾಗೂ ಆದೇಶ ಹಿಂಪಡೆಯಲು ಒತ್ತಾಯಿಸಿ ಬಿಜೆಪಿ ನಗರ ಮತ್ತು ಗ್ರಾಮೀಣ ಮಂಡಲದ ವತಿಯಿಂದ ಗುರುವಾರ ವಿನೂತನವಾಗಿ ಪ್ರತಿಭಟಿಸಲಾಯಿತು.

ಸ್ಥಳೀಯ ಪ್ರವಾಸಿ ಮಂದಿರದಲ್ಲಿ ನೆರೆದ ನೂರಾರು ಬಿಜೆಪಿ ಮುಖಂಡರು, ಕಾರ್ಯಕರ್ತರು ಕಿವಿಯಲ್ಲಿ ಚೆಂಡು ಹೂವು, ಕೈಯಲ್ಲಿ ತೆಂಗಿನಕಾಯಿನ ಚಿಪ್ಪು ಹಿಡಿದು, ಆಟೋವನ್ನು ಹಗ್ಗದಿಂದ ಎಳೆದುಕೊಂಡು ಮೆರವಣಿಗೆ ಮೂಲಕ ಮಹಾತ್ಮ ಗಾಂಧಿ ವೃತ್ತಕ್ಕೆ ಬಂದರು. ಸುಮಾರು 20 ನಿಮಿಷಗಳ ಕಾಲ ರಸ್ತೆ ಸಂಚಾರ ತಡೆದು ಪ್ರತಿಭಟಿಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕುಷ್ಟಗಿ, ಗಂಗಾವತಿ ಹಾಗೂ ರಾಯಚೂರು ಮುಖ್ಯರಸ್ತೆಗಳಲ್ಲಿ ಕೆಲಕಾಲ ವಾಹನಗಳ ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಯಿತು. ನಂತರ ಮಿನಿವಿಧಾನಸೌಧ ಕಚೇರಿಗೆ ಬಂದು ಗ್ರೇಡ್-2 ತಹಶೀಲ್ದಾರ್ ಚಂದ್ರಶೇಖರಗೆ ಮನವಿ ಸಲ್ಲಿಸಲಾಯಿತು.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ವಿದ್ಯುತ್ ದರ, ಅಬಕಾರಿ, ಆಸ್ತಿ ನೋಂದಣಿ, ಸ್ಟ್ಯಾಂಪ್ ಶುಲ್ಕ, ಆಸ್ತಿ ತೆರಿಗೆ ದುಪ್ಪಟ್ಟಾಗಿವೆ. ಈಗ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿರುವುದು ಜನರಿಗೆ ಮತ್ತಷ್ಟು ಹೊರೆಯಾಗಿದೆ. ರೈತರು ಟ್ರ್ಯಾಕ್ಟರ್‌ಗಳ ಮುಖಾಂತರ ಬೆಳೆ ಸಾಗಿಸಲು ಸಾಗಾಣಿಕೆ ಹೆಚ್ಚಳವಾಗಿ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ ದೂರಿದರು.

ರಾಜ್ಯ ಸರ್ಕಾರ ಕೂಡಲೇ ಪೆಟ್ರೋಲ್, ಡಿಸೇಲ್ ಬೆಲೆ ಇಳಿಕೆ ಮಾಡಬೇಕು. ರೈತರು ಬೆಳೆದಿರುವ ಜೋಳವನ್ನು ಖರೀದಿ ಕೇಂದ್ರದ ಮೂಲಕ ಖರೀದಿಸಿದ್ದು, ತಕ್ಷಣವೇ ರೈತರ ಖಾತೆಗೆ ಹಣ ಜಮಾ ಮಾಡಬೇಕು. ರಾಜ್ಯ ಸರ್ಕಾರವು ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರ ಖಾತೆಗೆ ₹ 4000 ಜಮಾ ಮಾಡಬೇಕು. ರೈತರಿಗೆ ಬಿತ್ತನೆ ಬೀಜ ಮತ್ತು ಗೊಬ್ಬರದಲ್ಲಿ ತೊಂದರೆ ಆಗದಂತೆ ರಿಯಾಯಿತಿ ದರದಲ್ಲಿ ರಸಗೊಬ್ಬರ, ಬೀಜ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡರಾದ ಕೆ.ಕರಿಯಪ್ಪ, ರಾಜೇಶ ಹಿರೇಮಠ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ವೆಂಕೋಬ ನಾಯಕ ರಾಮತ್ನಾಳ, ನಗರ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜೀನೂರು ಮಾತನಾಡಿದರು.

ಮಧ್ವರಾಜ ಆಚಾರ, ಲಿಂಗರಾಜ ಹೂಗಾರ, ಸಿದ್ರಾಮೇಶ ಮನ್ನಾಪುರ, ವೆಂಕನಗೌಡ ಮಲ್ಕಾಪುರ, ಈರೇಶ ಇಲ್ಲೂರು, ಕೆ.ಹನುಮೇಶ, ಶಿವಬಸನಗೌಡ ಗೊರೇಬಾಳ, ದೊರೆಬಾಬು, ಮಂಜುನಾಥ ಹರಸೂರು, ಮಲ್ಲಿಕಾರ್ಜುನ ಕಾಟಗಲ್, ರವಿಕುಮಾರ ಉಪ್ಪಾರ, ಮಂಜುನಾಥ ಗಾಣಗೇರಾ, ಕೆ.ಶರಣಬಸವ ಉಮಲೂಟಿ ವಕೀಲ, ಶಿವಕುಮಾರಗೌಡ ಕುರಕುಂದಿ, ಕುಪೇಂದ್ರಪ್ಪ ನಾಯಕ, ವೀರರಾಜು, ತಿಮ್ಮಾರೆಡ್ಡಿ ಹುಡಾ, ಅಕ್ಷಯಗೌಡ, ರಾಜು ಅಡವಿಬಾವಿ, ಮಹಾದೇವ ನಾಯಕ, ನಿರುಪಾದಿ ಸುಕಾಲಪೇಟೆ, ಮುತ್ತು ಬರಸಿ, ಸಿರಾಜ್‍ಪಾಷಾ, ಪ್ರೇಮಾ ಸಿದ್ದಾಂತಿಮಠ, ಮಮತಾ ಹಿರೇಮಠ, ಸಹನಾ ಹಿರೇಮಠ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT