ಸಿಂಧನೂರು: ‘ಬಿಜೆಪಿ ಶಿಸ್ತಿನ ಪಕ್ಷ ಎಂದು ಹೇಳಲಾಗುತ್ತಿತ್ತು. ಈಗ ಅದು ಭ್ರಷ್ಟರ ಮಹಾಕೂಟವಾಗಿ ಪರಿವರ್ತನೆಯಾಗಿದೆ. ಆದ್ದರಿಂದ ಜನತೆ ಸೋಲಿಸಲು ತೀರ್ಮಾನಿಸಿದ್ದಾರೆ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಚುನಾವಣಾ ಬಾಂಡ್ ಪ್ರಕರಣದಲ್ಲಿ ಬಿಜೆಪಿ ₹9 ಸಾವಿರ ಕೋಟಿ ಪಡೆದಿದ್ದು, ಅದರಲ್ಲಿ ₹2,500 ಕೋಟಿ ಇಡಿ, ಐಟಿ, ಸಿಬಿಐ ಸಂಸ್ಥೆಗಳಿಂದ ದಾಳಿಗೊಳಗಾದ ಕಂಪನಿಗಳೇ ದೇಣಿಗೆ ಕೊಟ್ಟಿವೆ. ಲಂಚ ಹಾಗೂ ಭ್ರಷ್ಟಾಚಾರವನ್ನು ಕಾನೂನಾತ್ಮಕ ಮಾಡಲು ಬಿಜೆಪಿ ಹೊರಟಿದೆ’ ಎಂದು ದೂರಿದರು.
ವಾಟ್ಸ್ ಆ್ಯಪ್ ಯೂನಿರ್ವಸಿಟಿಯಲ್ಲಿ ಮಾತ್ರ ಬಿಜೆಪಿ ಮತ್ತು ಮೋದಿಯವರ ಪರ ಅಲೆ ಕಾಣುತ್ತದೆ. ದೇಶದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಎಲ್ಲಿಯೂ ಮೋದಿ ಅಲೆ ಇಲ್ಲ. ಈ ಬಾರಿ ಕಾಂಗ್ರೆಸ್ ನಿರೀಕ್ಷೆಗಿಂತ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ. ಬಿಜೆಪಿ ಮುಖಂಡರು 28ಕ್ಕೆ 28 ಸ್ಥಾನಗಳನ್ನು ಗೆಲ್ಲುತ್ತೇವೆ ಎನ್ನುವ ಬಿಜೆಪಿಯವರ ಉಡಾಫೆ ಹೇಳಿಕೆಗೆ ಮತದಾರರು ತಕ್ಕ ಉತ್ತರ ಕೊಡಲಿದ್ದಾರೆ ಎಂದರು.
ರಾಜ್ಯದಲ್ಲಿ 253 ತಾಲ್ಲೂಕು ಬರಪೀಡಿತವಾಗಿವೆ. ಪರಿಹಾರ ನೀಡುವಂತೆ ಮನವಿ ಮಾಡಿ 7 ತಿಂಗಳು ಗತಿಸಿದರೂ ನಯಾ ಪೈಸೆ ಪರಿಹಾರ ಕೊಡಲಿಲ್ಲ. ಅನಿವಾರ್ಯವಾಗಿ ಕೋರ್ಟ್ ಮೊರೆ ಹೋಗಬೇಕಾಯಿತು. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ನೀಡಿರುವ ₹3,800 ಕೋಟಿ ಬಕಾಸುರನ ಬಾಯಿಗೆ ಅರೆ ಕಾಸಿನ ಮಜ್ಜಿಗೆ ಹಾಕಿದಂತಾಗಿದೆ ಎಂದು ಲೇವಡಿ ಮಾಡಿದರು.
ಕರ್ನಾಟಕದ ರೈತರೆಲ್ಲ ಸಂಕಟದ ಸ್ಥಿತಿಯಲ್ಲಿದ್ದರೂ ಗಮನಿಸದ ಕೇಂದ್ರ ಸರ್ಕಾರ ರೈತ ವಿರೋಧಿಯಾಗಿದೆ. ಜನಪ್ರಶ್ನೆ ಮಾಡುತ್ತಾರೆ ಎನ್ನುವ ಕಾರಣಕ್ಕೆ ದಿಕ್ಕು ತಪ್ಪಿಸಲು ಮುಸ್ಲಿಂ ವಿಷಯವನ್ನು ಹರಿಬಿಡಲಾಗುತ್ತಿದೆ. ದೇಶದಲ್ಲಿಯೇ ಹೆಚ್ಚು ತೆರಿಗೆ ಪಾವತಿಸುವ ಎರಡನೇ ರಾಜ್ಯವಾಗಿರುವ ಕರ್ನಾಟಕಕ್ಕೆ ಬರ ಪರಿಹಾರ ನೀಡಲು ಮತ್ತು ಜಿಎಸ್‍ಟಿ ಪಾಲು ನೀಡುವಲ್ಲಿ ಕೇಂದ್ರ ಅನ್ಯಾಯ ಮಾಡಿರುವುದರಿಂದ ಕರ್ನಾಟಕದ ಜನತೆ ಖಂಡಿತವಾಗಿಯೂ ಬಿಜೆಪಿಗೆ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.
ಶಾಸಕ ಹಂಪನಗೌಡ ಬಾದರ್ಲಿ, ಮುಖಂಡರಾದ ಪಂಪನಗೌಡ ಬಾದರ್ಲಿ, ಎಂ.ಅಮರೇಗೌಡ ವಕೀಲ, ಡಾ.ಬಿ.ಎನ್.ಪಾಟೀಲ್, ಸತ್ಯನಗೌಡ ವಳಬಳ್ಳಾರಿ, ಎಸ್.ಶರಣೇಗೌಡ, ಶಿವನಗೌಡ ಗೊರೇಬಾಳ, ಸರ್ವೋತ್ತಮರೆಡ್ಡಿ, ಸಂಜಯ್ ಪಾಟೀಲ್, ಮಂಜುನಾಥ ಸಾಹುಕಾರ ಕುರಕುಂದಿ, ದೊಡ್ಡಬಸವರಾಜ ಸಾಹುಕಾರ, ಬಸವರಾಜ ಹಿರೇಗೌಡರ್, ಎನ್.ಭೀಮನಗೌಡ, ಬಸವರಾಜ ಸಾಹುಕಾರ್ ಕುರಕುಂದಿ, ಲಿಂಗಾಧರ್ ಗುರುಸ್ವಾಮಿ, ತಿಮ್ಮಣ್ಣ ಸಾಹುಕಾರ, ಶಿವನಗೌಡ ಯಾದಗಿರಿ ಇದ್ದರು.
ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಕಾಂಗ್ರೆಸ್‌ಗೆ ಮತ ನೀಡಿದರೆ ಬಿಜೆಪಿ ಅಭ್ಯರ್ಥಿಗಳು ಠೇವಣಿ ಕಳೆದುಕೊಳುತ್ತಾರೆ. ಬಿಜೆಪಿಯ ಯಡಿಯೂರಪ್ಪ ವಿಜಯೇಂದ್ರ ಅವರಿಗೆ ತಾಕತ್ತಿದ್ದರೆ ಗ್ಯಾರಂಟಿ ಯೋಜನೆಗಳನ್ನು ಪಡೆಯಬೇಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಲಿ
- ರಾಮಲಿಂಗಾ ರೆಡ್ಡಿ ಸಾರಿಗೆ ಸಚಿವ
‘ಸಿಂಧನೂರಿಗೆ ಎಆರ್‌ಟಿಒ ಕಚೇರಿ’ ಶೀಘ್ರವೇ ಸಿಂಧನೂರಿಗೆ ಎಆರ್‌ಟಿಒ ಕಚೇರಿ ಮಂಜೂರು ಮಾಡಲಾಗುವುದು. ರಾಜ್ಯದಲ್ಲಿಯೇ ಅತಿ ಹೆಚ್ಚು ವಾಹನ ನೋಂದಣಿ ಸಿಂಧನೂರು ತಾಲ್ಲೂಕಿನಿಂದ ಆಗುತ್ತಿದೆ. ಆಯುಕ್ತರ ಬಳಿ ಕಡತ ಇದೆ. ನನ್ನ ಬಳಿ ಬಂದ ತಕ್ಷಣವೇ ಅನುಮೋದನೆ ನೀಡಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.