ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಆದಾಯ ಲಕ್ಷಾಂತರ; ಅಭಿವೃದ್ಧಿಗೆ ಅನಾದರ!

Published 6 ನವೆಂಬರ್ 2023, 6:51 IST
Last Updated 6 ನವೆಂಬರ್ 2023, 6:51 IST
ಅಕ್ಷರ ಗಾತ್ರ

ಜಾಲಹಳ್ಳಿ: ದೇಶ ಸ್ವತಂತ್ರಗೊಳ್ಳುವ ಮುನ್ನವೇ ಪಟ್ಟಣದಲ್ಲಿ ಸ್ಥಾಪನೆಯಾದ ಸರ್ಕಾರಿ ಬಾಲಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನ ಪೂರೈಸಿ ನಾಲ್ಕು ವರ್ಷಗಳಾಗಿವೆ. ಆದರೆ, ಶಾಲೆಗೆ ಅಭಿವೃದ್ಧಿ ಎಂಬುದು ಈಗಲೂ ಗಗನಕುಸುಮವಾಗಿದೆ.

1919ರಲ್ಲಿ ಸ್ಥಾಪನೆಗೊಂಡು ಲಕ್ಷಾಂತರ ಜನರಿಗೆ ಅಕ್ಷರಾಭ್ಯಾಸ ಕಲಿಸಿದರೂ ಸೌಲಭ್ಯಗಳು ಇಲ್ಲಿ ಹೇಳಿಕೊಳ್ಳುವಷ್ಟಿಲ್ಲ. ವಿದ್ಯಾರ್ಥಿಗಳ ಕಲಿಕಾ ದಾಖಲೆಗಳೂ 1968ರಿಂದಲಷ್ಟೇ ಲಭ್ಯವಿವೆ!

‘ಈ ಶಾಲೆಯಲ್ಲಿ 1968ರಿಂದ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳ ದಾಖಲೆಗಳು ಮಾತ್ರ ಲಭ್ಯ ಇವೆ. ಅದಕ್ಕೂ ಪೂರ್ವದಲ್ಲಿನ ದಾಖಲೆಗಳು ಲಭ್ಯವಿಲ್ಲ’ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕ ರಾಮನಗೌಡ ನಾಯಕ ಸುಣ್ಣದಕಲ್.

ಲಕ್ಷಾಂತರ ಆದಾಯ

ಈ ಸರ್ಕಾರಿ ಶಾಲೆಗೆ ಸೇರಿದ ಒಟ್ಟು 11 ವಾಣಿಜ್ಯ ಮಳಿಗೆಗಳಿದ್ದು, ಇವುಗಳಿಂದ ಬಾಡಿಗೆ ರೂಪದಲ್ಲಿ ವಾರ್ಷಿಕ ₹4.48 ಲಕ್ಷ ಆದಾಯ ಬರುತ್ತೆ. ಶಾಲೆಯಲ್ಲಿ ಸ್ವಚ್ಛತೆಗಾಗಿಯೇ ಇಬ್ಬರನ್ನು ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಅವರಿಗೆ ವರ್ಷಕ್ಕೆ ₹2.64 ಲಕ್ಷ ವೇತನ ಪಾವತಿಸಲಾಗುತ್ತಿದೆ. ಉಳಿದ ಹಣದಲ್ಲಿ ಶಾಲೆಯ ಸಣ್ಣಪುಟ್ಟ ದುರಸ್ತಿ ಕೆಲಸ ಕಾರ್ಯ ಮಾಡಿ ಶಾಲೆ ನಡೆಸಲಾಗುತ್ತಿದೆ.

ಒಳ್ಳೇ ಹೆಸರಿತ್ತು

ಜಿಲ್ಲೆಯಲ್ಲಿಯೇ ಈ ಶಾಲೆಗೆ 1980ರಿಂದ 1990ರಲ್ಲಿ ಒಳೆಯ ಹೆಸರು ಇತ್ತು. ರಾಷ್ಟ ಹಾಗೂ ರಾಜ್ಯಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಇಲ್ಲಿ ವಿದ್ಯಾರ್ಥಿಗಳು ಮಿಂಚು ಹರಿಸಿದ್ದರು. ಮರಿಸ್ವಾಮಿ ನಾಯಕ, ಸೈಪುಲ್ಲಾ ಖಾನ್, ವಿಠೋಬ ಪೂಜಾರಿ, ನಿಂಗಪ್ಪ ಬಾಗೂರು, ಖಾಜಾಹುಸೇನ್‌ ನಾಶಿ, ಈರಮ್ಮ ಪೂಜಾರಿ ಅವರು ರಾಜ್ಯಮಟ್ಟದ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೂ ಆಯ್ಕೆಯಾಗಿದ್ದರು. ಆಗಿನ ಸ್ಥಿತಿ ಈಗ ಏನು ಉಳಿದಿಲ್ಲ.

ಭರಪೂರ ಮಕ್ಕಳು, ಬೆರಳೆಣಿಕೆ ಶಿಕ್ಷಕರು:

ಶತಮಾನ ಪೂರೈಸಿರುವ ಈ ಶಾಲೆಯಲ್ಲಿ ಸದ್ಯ 1ರಿಂದ 8ನೇ ತರಗತಿ ವರೆಗೆ ತರಗತಿಗಳು ನಡೆಯುತ್ತಿವೆ. ಒಟ್ಟು 320 ವಿದ್ಯಾರ್ಥಿಗಳು ದಾಖಲಾತಿ ಇದೆ. ಅಲ್ಲದೇ ಕಳೆದ ವರ್ಷದಿಂದ 1ರಿಂದ 3ನೇ ತರಗತಿ ವರೆಗೆ ಇಂಗ್ಲಿಷ್‌ ಮಧ್ಯಮ ಶಾಲೆ ತರಗತಿಗಳನ್ನೂ ನಡೆಸಲಾಗುತ್ತಿದ್ದು, ಅಲ್ಲಿಯೂ 60 ವಿದ್ಯಾರ್ಥಿಗಳ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.

ಇಂಥ ಶಾಲೆಗೆ ಒಟ್ಟು 12 ಶಿಕ್ಷಕರ ಮಂಜೂರಾತಿ ಹುದ್ದೆಗಳಿದ್ದು, ಆ ಪೈಕಿ ನಾಲ್ವರು ಕಾಯಂ ಶಿಕ್ಷಕರಷ್ಟೇ ಈಗ ಉಳಿದಿದ್ದಾರೆ. ಶಿಕ್ಷಕರ ಎಂಟು ಹುದ್ದೆಗಳು ಖಾಲಿ ಇವೆ. ಇನ್ನುಳಿದ ಹುದ್ದೆಗಳಿಗೆ ಅತಿಥಿ ಶಿಕ್ಷಕರೇ ಆಧಾರವಾಗಿದ್ದಾರೆ.

ಈ ಶಾಲೆಯಲ್ಲಿ ಒಟ್ಟು 24 ಕೊಠಡಿಗಳಿವೆ. ಅದರಲ್ಲಿ ಬಳಕೆಗೆ ಯೋಗ್ಯವಾಗಿರುವುದು 8 ಕೋಣೆ ಮಾತ್ರ.  ಉಳಿದ 16 ಕೊಠಡಿಗಳು ಶಿಥಿಲಗೊಂಡಿದ್ದು, ಅವುಗಳನ್ನು ತೆರವುಗೊಳಿಸುವಂತೆ ಈಗಾಗಲೇ ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯಲಾಗಿದೆ.

ಇದೇ ಶಾಲೆಯಿಂದ ಬೇರ್ಪಟ್ಟು ಕನ್ಯಾ ಪ್ರಾಥಮಿಕ ಶಾಲೆ ಸ್ಥಾಪನೆಯಾಗಿದೆ. ಹೊರಟಿಗೇರ, ಜನತಾ ಕಾಲೊನಿ, ತಳವಾರ ಓಣಿಗೆ ಪ್ರತ್ಯೇಕವಾಗಿಯೇ ಪಟ್ಟಣದಲ್ಲಿ ಐದು ಪ್ರಾಥಮಿಕ ಶಾಲೆಗಳು ಇರುವುದು ವಿಶೇಷ. ಜೊತೆಗೆ ಮಕ್ಕಳ ದಾಖಲಾತಿ ಸಂಖ್ಯೆ ಕುಸಿಯಲು ಕಾರಣವೂ ಇದಾಗಿದೆ.

ದೇವದುರ್ಗ ತಾಲ್ಲೂಕಿನಲ್ಲಿಯೇ ಅತಿಹೆಚ್ಚು ಪ್ರಗತಿಪರರು

ಶಿಕ್ಷಣ ಕ್ರೀಡಾಪ್ರೇಮಿಗಳಿದ್ದರೂ ಪಟ್ಟಣದಲ್ಲಿನ ಸರ್ಕಾರಿಗಳ ಶೈಕ್ಷಣಿಕ ಮಟ್ಟ ಕಳಪೆಯತ್ತ ಸಾಗುತ್ತಿದೆ. ಎಸ್‌ಡಿಎಂಸಿ ರಚನೆಯ ಬಳಿಕವೇ ಶಾಲೆಗಳ ಸ್ಥಿತಿ ತುಂಬಾ ಹದಗೆಟ್ಟು ಹೋಗಿವೆ ಲಿಂಗಣ್ಣ ನಾಯಕ ಶಿಕ್ಷಣ ಪ್ರೇಮಿ ಜಾಲಹಳ್ಳಿ ಬಡವರ ಮಕ್ಕಳಿಗೆ ಸರ್ಕಾರಿ ಶಾಲೆ ಶ್ರೀಮಂತರ ಮಕ್ಕಳು ಖಾಸಗಿ ಶಾಲೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುವ ಬಹುತೇಕರು  ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಾರೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ. ಸುರೇಶ ಶಿಕ್ಷಣ ಪ್ರೇಮಿ ಜಾಲಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT