ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟಗುಪ್ಪ: ಅಳಿವಿನ ಅಂಚಿನಲ್ಲಿ ಬಿದಿರುಬುಟ್ಟಿ ಹೆಣೆಯುವ ಕಾಯಕ

Published 27 ಮೇ 2024, 5:01 IST
Last Updated 27 ಮೇ 2024, 5:01 IST
ಅಕ್ಷರ ಗಾತ್ರ

ಚಿಟಗುಪ್ಪ: ಎಲ್ಲವೂ ಪ್ಲಾಸ್ಟಿಕ್‌ ಮಯವಾಗಿರುವ ಇಂದಿನ ದಿನಗಳಲ್ಲಿ ಬಿದಿರಿನ ಉತ್ಪನ್ನಗಳಿಗೆ ಬೇಡಿಕೆ ಕುಸಿಯುತ್ತಿದೆ. ಮರ, ಬುಟ್ಟಿ ಹೆಣೆದು ಜೀವನದ ಬಂಡಿ ನಡೆಸುತ್ತಿರುವವರ ಸ್ಥಿತಿ ಸಂಕಷ್ಟದಲ್ಲಿದೆ.

ಪಟ್ಟಣದಲ್ಲಿ ಮೇದಾರ್ ಜನಾಂಗದ 20 ಮನೆಗಳು ಇದ್ದವು. ಸದ್ಯ ಅವುಗಳಲ್ಲಿ 2 ಕುಟುಂಬಗಳು ಮಾತ್ರ ಉಳಿದಿದ್ದು 40 ಸದಸ್ಯರು ಬಿದಿರು ಬುಟ್ಟಿ ಹೆಣೆಯುವ ಕಾಯಕ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಪೂರ್ವಿಕರು ಬಿದಿರಿನಿಂದ ಸಿದ್ಧಪಡಿಸುತ್ತಿದ್ದ ಬುಟ್ಟಿ, ಪಂಜರ, ಬೀಸಣಿಗೆ, ಮೊರ, ಮಂಕರಿ, ಹೆಜ್ಜಿಗೆ ಉತ್ಪನ್ನಗಳನ್ನು ತಯಾರಿಕೆಯನ್ನೂ ಈಗಳು ಮುಂದುವರಿಸಿದ್ದಾರೆ.

ಪಟ್ಟಣ, ತಾಲ್ಲೂಕಿನ ನಿರ್ಣಾ, ಕುಡಂಬಲ್‌, ಬೇಮಳಖೇಡಾ, ಮನ್ನಾಎಖ್ಖೇಳಿ ಇತರ ಗ್ರಾಮಗಳಲ್ಲಿ ವಾರಕ್ಕೊಮ್ಮೆ ನಡೆಯುವ ಸಂತೆಯಲ್ಲಿ ತಾವೇ ತಯಾರಿಸಿದ ಬಿದಿರಿನ ಉತ್ಪನ್ನಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹೆಚ್ಚಾಗಿದ್ದು ಬಿದಿರು ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲವಾಗಿದೆ.

ಕಲಬುರಗಿ, ಮಹಾರಾಷ್ಟ್ರದ ಸೊಲ್ಲಾಪುರಗಳಿಂದ ಬಿದಿರು ತರಿಸಿ ಹಣೆಯುವ ಮೂಲಕ ವಿವಿಧ ವಸ್ತುಗಳು ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದಾರೆ. ಇವರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾದ ಸ್ಥಿತಿ ಇದೆ.

ಕುಲ ಕಸುಬಾದ ಬುಟ್ಟಿ ಹೆಣೆಯುವುದನ್ನು ಬಿಟ್ಟು ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ. ದಿನಕ್ಕೆ ₹300ರಿಂದ ₹500 ಕೂಲಿ ಸಂಪಾದನೆ ಮಾಡಿ ತಮ್ಮ ಕುಟುಂಬವನ್ನು ಸಾಕುತ್ತಿದ್ದಾರೆ.

ಸರ್ಕಾರ ಕನಿಷ್ಠ ಉಚಿತವಾಗಿ ಬಿದಿರು ಪೂರೈಕೆ ಮಾಡಬೇಕು, ಸಾಧ್ಯವಾದಷ್ಟು ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ಬಿದಿರು ಉತ್ಪನ್ನಗಳು ಖರಿದಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಬಿದಿರು ಉತ್ಪನ್ನಗಳು ಮಾರಾಟವಾಗುವಂತೆ ಮಾರುಕಟ್ಟೆ ವ್ಯವಸ್ಥೆ ಒದಗಿಸಬೇಕು ಅಂದಾಗ ಮಾತ್ರ ಬಿದಿರು ಬುಟ್ಟಿ ಹೆಣೆಯುವವರ ಬದುಕು ಹಸನಾಗುತ್ತದೆ, ಪರಿಸರ ಉಳಿಯುತ್ತದೆ. ಬುಟ್ಟಿ ಹೆಣೆಯುವ ಕಾಯಕವನ್ನೇ ಅವಲಂಬಿಸಿರುವ ಕುಟುಂಬಗಳಿಗೆ ಸರ್ಕಾರ ಪ್ರೋತ್ಸಾಹಧನ ನೀಡಬೇಕು. ಬಡ್ಡಿರಹಿತ ಸಾಲ ವಿತರಿಸುವ ಸೌಲಭ್ಯ ಕೊಡಬೇಕು. ಪ್ರತಿ ವರ್ಷ ಕನಿಷ್ಠ ₹80 ಸಾವಿರ ಪ್ರೋತ್ಸಾಹ ಧನ ನೀಡಬೇಕು ಎನ್ನುವುದು ಅವರ ಮನವಿ.

ಬಿದಿರು ಹೆಣೆದು ಬುಟ್ಟಿ ಸಿದ್ಧಪಡಿಸಲು ಕನಿಷ್ಠ ಐದರಿಂದ ಆರು ಗಂಟೆ ಬೇಕಾಗುತ್ತದೆ. ಒಂದು ಬುಟ್ಟಿಗೆ ₹200ಕ್ಕೆ ಮಾರಾಟಮಾಡಲಾಗುತ್ತದೆ. ಆದರೂ ಖರಿದಿಸಲು ಗ್ರಾಹಕರು ಮುಂದೆ ಬರುವುದಿಲ್ಲ. ಮದುವೆ, ಶುಭ ಸಮಾರಂಭಕ್ಕಾಗಿ ಮಾತ್ರ ಜನ ಬಿದಿರು ಬುಟ್ಟೆ, ಏಣಿ ಖರಿದಿಸುತ್ತಾರೆ.

ಆಧುನಿಕ ದಿನಗಳಲ್ಲಿ ಬಿದಿರು ಬುಟ್ಟಿ ಹೆಣೆಯುವ ಉದ್ಯೋಗ ಕಷ್ಟಕರವಾಗಿದ್ದು ಸರ್ಕಾರ ಆತ್ಮ ನಿರ್ಭರ ಭಾರತ ಯೋಜನೆ ಅಡಿಯಲ್ಲಿ ಪ್ರೋತ್ಸಾಹ ಧನ ವಿತರಿಸಿ ಹೊಸ ಚೈತನ್ಯ ತುಂಬಬೇಕು
- ವಿಕ್ರಮರಾಜು ಬಿದಿರು ಬುಟ್ಟಿ ವರ್ತಕ
- ಜನರು ಪ್ಲಾಸ್ಟಿಕ ವಸ್ತುಗಳ ಜತೆಗೆ ಬಿದಿರಿನ ವಸ್ತುಗಳನ್ನೂ ಖರೀದಿದಬೇಕು. ಪರಿಸರ ಮಾಲಿನ್ಯ ತಡೆಯಲು ಸರ್ಕಾರ ಬಿದಿರು ಬುಟ್ಟಿ ಖರೀದಿಸಲು ಜನರಿಗೆ ಅರಿವು ಮೂಡಿಸಬೇಕು
ಯಲ್ಲಪ್ಪ ಬಿದಿರಿನ ವಸ್ತುಗಳ ತಯಾರಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT