ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಮಂದಿರಗಳಿಗೆ ಕೈತಪ್ಪಿದ ನಿರಂತರ ಗಳಿಕೆ

ಪ್ರಮುಖ ನಟರ ಸಿನಿಮಾಗಳಷ್ಟೇ ವೀಕ್ಷಣೆ; ಮೊಬೈಲ್‌ನಲ್ಲೇ ಹೊಸ ಸಿನಿಮಾ ವೀಕ್ಷಣೆ ಸಾಧ್ಯವಾಗಿಸಿದ ಒಟಿಟಿ
Last Updated 12 ಡಿಸೆಂಬರ್ 2022, 5:51 IST
ಅಕ್ಷರ ಗಾತ್ರ

ರಾಯಚೂರು: ಮೊದಲೇ ಮಂದಗತಿಯಲ್ಲಿದ್ದ ಚಲನಚಿತ್ರ ಮಂದಿರಗಳ ಗಳಿಕೆ ಕೋವಿಡ್ ಹೊಡೆತಕ್ಕೆ ಸಾಕಷ್ಟು ನೆಲಕಚ್ಚಿವೆ. ಇದೀಗ ನಿರ್ವಹಣೆ ನಷ್ಟದ ಹೊರೆ ತಾಳದೇ ಜಿಲ್ಲೆಯಲ್ಲಿ ಅನೇಕ ಚಿತ್ರಮಂದಿರಗಳು ಸಂಪೂರ್ಣ ಸ್ಥಗಿತಗೊಂಡಿವೆ.

ಕೋವಿಡ್ ನಂತರ ಹಂತಹಂತವಾಗಿ ತೆರೆದುಕೊಂಡಿರುವ ಚಿತ್ರಮಂದಿರಗಳತ್ತ ಪ್ರೇಕ್ಷಕರು ಮೊದಲಿನಂತೆ ಸುಳಿಯುತ್ತಿಲ್ಲ. ಬರೀ ಕನ್ನಡ ಚಲನಚಿತ್ರಗಳಿಗೆ ಮೀಸಲಾಗಿದ್ದ ಮಂದಿರಗಳು ಅನಿವಾರ್ಯವಾಗಿ ನಷ್ಟದಿಂದ ಪಾರಾಗಲು ಎಲ್ಲ ಭಾಷೆಗಳ ಚಿತ್ರಗಳ ಪ್ರದರ್ಶನಕ್ಕೆ ಇಳಿದಿವೆ.

ಯಾವುದೇ ಹೊಸ ಚಲನಚಿತ್ರವಾದರೂ ಮೊದಲ ವಾರ ಮಾತ್ರ ತುಂಬಿದಗೃಹ ಇರುತ್ತದೆ. ಆ ನಂತರ ಗಳಿಕೆ ಇಳಿಮುಖವಾಗುತ್ತಾ ಸಾಗುವುದು ಸಹಜ. ಈ ಹಂತದಲ್ಲಿ ಮತ್ತೊಂದು ಉತ್ತಮ ಚಿತ್ರ ತೆರೆಕಂಡರೆ ನಿರ್ವಹಣೆಗೆ ಸರಿದೂಗುತ್ತದೆ. ಚಿತ್ರವನ್ನು ಪ್ರೇಕ್ಷಕರು ಇಷ್ಟಪಡದಿದ್ದರೆ, ಬೆರಳೆಣಿಕೆ ಪ್ರೇಕ್ಷಕರಿಗೆ ನಷ್ಟದಲ್ಲೇ ಕೆಲವು ದಿನ ಚಿತ್ರ ಪ್ರದರ್ಶನ ಮಾಡುವ ಅನಿವಾರ್ಯತೆ ಇದೆ ಎನ್ನುವುದು ಚಿತ್ರಮಂದಿರ ಮಾಲೀಕರ ವಿವರಣೆ.

ಜನರು ಮೊದಲಿನಂತೆ ಚಿತ್ರಮಂದಿರಗಳಿಗೆ ಬರುತ್ತಿಲ್ಲ.‌ ಗುಣಮಟ್ಟದ ದೃಶ್ಯ ಹಾಗೂ ಗುಣಮಟ್ಟದ ಸಂಗೀತ ಕೇಳಬೇಕು ಎಂದು ಬಯಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮಲ್ಟಿಪ್ಲೆಕ್ಸ್‌ ಥೇಟರ್‌ಗಳ ದರಕ್ಕೆ ಹೋಲಿಸಿದರೆ, ಚಲನಚಿತ್ರ ಮಂದಿರಗಳಲ್ಲಿ ದರವೂ ಕಡಿಮೆ ಇದೆ. ಆದರೂ ಪ್ರೇಕ್ಷಕರು ಇತ್ತೀಚೆಗೆ ಬದಲಾಗುತ್ತಿದ್ದಾರೆ ಎನ್ನುವುದು ಮಾಲೀಕರ ವಾದ.

ರಾಯಚೂರಿನಲ್ಲಿ ಶ್ರೀ ನೀಲಕಂಠೇಶ್ವರ ಟಾಕೀಜ್‌ (ಎಸ್‌ಎನ್‌ಟಿ), ಮಿನಿ ಎಸ್‌ಎನ್‌ಟಿ, ಪದ್ಮನಾಭ ಥಿಯೇಟರ್‌, ಪೂರ್ಣಿಮಾ ಥಿಯೇಟರ್‌ಗಳಿವೆ. ನಾಲ್ಕು ಪರದೆಗಳು ಇರುವ ಮಿರಾಜ್‌ ಮಲ್ಟಿಪ್ಲೆಕ್ಸ್ ಇತ್ತೀಚೆಗೆ ತೆರೆದುಕೊಂಡಿದೆ. ಇವುಗಳ ಪೈಕಿ ಮಿನಿ ಎಸ್‌ಎನ್‌ಟಿ ಥಿಯೇಟರನ್ನು ಕೋವಿಡ್ ನಂತರದಲ್ಲಿ ಮಾಲೀಕರು ಸ್ಥಗಿತಗೊಳಿಸಿದ್ದಾರೆ. ಎಸ್‌ಎನ್‌ಟಿಯಲ್ಲಿ 800 ಆಸನಗಳಿದ್ದು, ಕೋವಿಡ್‌ ನಂತರದಲ್ಲಿ ಕಾಂತಾರ ಚಲನಚಿತ್ರ ಪ್ರದರ್ಶನ ಶುರು ಮಾಡಿದಾಗ ಮೊದಲ ವಾರ ಸಂಪೂರ್ಣ ತುಂಬಿದ ಗೃಹದಲ್ಲಿ ಪ್ರದರ್ಶನವಾಗಿತ್ತು. ಆನಂತರದಲ್ಲಿ ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗುತ್ತಾ ಬಂದಿದೆ.

ಸಂಕಷ್ಟದಲ್ಲಿ ಚಿತ್ರಮಂದಿರಗಳ ಮಾಲೀಕರು

ಲಿಂಗಸುಗೂರು:ಅಧುನಿಕತೆ ಭರಾಟೆ, ಸಾಮಾಜಿಕ ಜಾಲತಾಣದ ಅರ್ಭಟ, ಅಂಗೈಯಲ್ಲಿ ಅರಮನೆ ನೋಡುವ ಮೊಬೈಲ್‍ ಬಳಕೆಯಿಂದ ಬಹುತೇಕ ಚಿತ್ರಮಂದಿರಗಳ ಮಾಲೀಕರು ಕನಿಷ್ಠ ಆದಾಯವನ್ನೂ ನಿರೀಕ್ಷಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರಿಂದ ಚಿತ್ರಮಂದಿರಗಳು ಮಾರ್ಪಾಡು ಹೊಂದುತ್ತ ಹೊರಟಿವೆ.

ಎಂಬತ್ತರ ದಶಕದಲ್ಲಿದ್ದ ಕಾಡಪ್ಪ ಹೆಸರೂರು ಚಿತ್ರಮಂದಿರ ಸ್ಥಳದ ವ್ಯಾಜ್ಯದಿಂದ ಮೂರು ದಶಕ ಹಿಂದೆಯೇ ಬಂದ್‌ ಆಗಿದೆ. 1994ರಲ್ಲಿ ಅಫ್ಜಲ್‍ ಕುಟುಂಬಸ್ಥರು ಸಂತೆ ಬಜಾರದಲ್ಲಿ 1994ರಲ್ಲಿ ಹೊಸ ತಂತ್ರಜ್ಞಾನ ಮಾದರಿಯಲ್ಲಿ ಕೆಕೆಎಸ್‍ಆರ್‌ ಚಿತ್ರಮಂದಿರವೊಂದನ್ನು ನಿರ್ಮಿಸಿ ಸಿನಿಮಾ ಪ್ರಿಯರಿಗೆ ಅನುಕೂಲ ಮಾಡಿಕೊಟ್ಟಿದ್ದರು.

2000 ಇಸ್ವಿಯಲ್ಲಿ ಹೈಟೆಕ್‍ ಚಿತ್ರಮಂದಿರ ನಿರ್ಮಾಣಕ್ಕೆ ಮುಂದಾಗಿ ₹ 1.50 ಕೋಟಿ ವೆಚ್ಚದಲ್ಲಿ ಹೈಟೆಕ್‍ ಮತ್ತು ಹವಾನಿಯಂತ್ರಿತ ಎಂಪಾಯರ್‌ ಚಿತ್ರಮಂದಿರವನ್ನು ಬಸ್‍ ನಿಲ್ದಾಣದ ಬಳಿ ನಿರ್ಮಿಸಿ ಅಭಿಮಾನಿಗಳಲ್ಲಿ ಹುರುಪು ಹೆಚ್ಚಿಸಿದ್ದ ಕಾಲವೊಂದಿತ್ತು. ವರ್ಷದಿಂದ ವರ್ಷಕ್ಕೆ ಚಿತ್ರಮಂದಿರ ನಡೆಸುವುದು ಕಷ್ಟದ ಕೆಲಸವಾಗಿ ಕೂಲಿಕಾರರಿಗೆ ಕೂಲಿ ನೀಡುವಷ್ಟು ಆದಾಯಕ್ಕೂ ಸಂಕಷ್ಟ ಬಂದೊದಗಿತ್ತು.

ಸಿನಿಮಾ ಖರೀದಿಸಿ ತಂದು ಪ್ರದರ್ಶಿಸುವ, ವಿದ್ಯುತ್‍, ಕೂಲಿಕಾರರ ಕೂಲಿ ಹಣ ಸೇರಿದಂತೆ ಇತರೆ ಖರ್ಚು ವೆಚ್ಚ ಭರಿಸಲು ಆಗದೆ ಸಂಕಷ್ಟಕ್ಕೆ ಸಿಲುಕಿದೆವು. ಅಂತೆಯೇ 2014ರಲ್ಲಿ ಕೆಕೆಎಸ್‍ಆರ್‌ ಚಿತ್ರಮಂದಿರನ್ನು ಕೆಕೆಎಸ್‍ಆರ್‌ ಫಂಕ್ಷನ್‍ ಹಾಲ್‍ ಎಂದು ಪರಿವರ್ತಿಸಿ ಮದುವೆ
ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀಡಲು ಆರಂಭಿಸಿದರು.

ಕಾರ್ಮಿಕರ ಸಂಬಳಕ್ಕೆ ಸಂಕಷ್ಟ

ಮಾನ್ವಿ:ಪಟ್ಟಣದ ಚಿತ್ರ ಮಂದಿರಗಳ ಮಾಲೀಕರು ನಷ್ಟದಲ್ಲಿದ್ದು, ನಿರ್ವಹಣೆಗೆ ಸಂಕಷ್ಟ ಎದುರಿಸುತ್ತಿದ್ದಾರೆ. ಪಟ್ಟಣದ ನಾಲ್ಕು ಚಿತ್ರ ಮಂದಿರಗಳ ಪೈಕಿ ದಶಕದ ಹಿಂದೆ ಎರಡು ಪ್ರದರ್ಶನ ಸ್ಥಗಿತಗೊಳಿಸಿವೆ. ಫೈವ್ ಸ್ಟಾರ್ ಚಿತ್ರ ಮಂದಿರವು ಫಂಕ್ಷನ್ ಹಾಲ್ ಆಗಿ ಪರಿವರ್ತನೆಯಾಗಿದೆ.

ಈ ಚಿತ್ರ ಮಂದಿರದ ಮಳಿಗೆಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ. ಸ್ಥಳೀಯ ಸಿನಿಮಾಪ್ರಿಯರಿಗೆ ಗತಕಾಲದ ಹಲವು ಸುಮಧುರ ನೆನಪುಗಳನ್ನು ಉಳಿಸಿಕೊಂಡಿರುವ ಪ್ರೇಮ ಚಿತ್ರಮಂದಿರ ಪ್ರದರ್ಶನ ಸ್ಥಗಿತಗೊಳಿಸಿ ಹಲವು ವರ್ಷಗಳು ಕಳೆದಿದ್ದು ಕಟ್ಟಡ ಪುರಾತನ ಸ್ಮಾರಕದಂತೆ ಕಾಣುತ್ತದೆ. ಅಪರ್ಣಾ ಮತ್ತು ಮಲ್ಲಿಕಾರ್ಜುನ ಚಿತ್ರಮಂದಿರಗಳಲ್ಲಿ ಮಾತ್ರ ಈಗ ಚಲನಚಿತ್ರಗಳ ಪ್ರದರ್ಶನ ನಡೆಯುತ್ತಿದೆ.

ಉಳಿದ ದಿನಗಳಲ್ಲಿ ಬೆರಳೆಣಿಕೆಯ ಪ್ರೇಕ್ಷಕರು ಸಿನಿಮಾ ವೀಕ್ಷಣೆಗೆ ಬರುವ ಕಾರಣ ಚಿತ್ರ ಮಂದಿರಗಳ ಮಾಲೀಕರು ತಿಂಗಳ ವಿದ್ಯುತ್ ಬಿಲ್ ಹಾಗೂ ಕಾರ್ಮಿಕರ ಸಂಬಳ
ಪಾವತಿಗೆ ತೊಂದರೆಯಾಗುತ್ತಿದೆ. ‘ಮಾಸಿಕ ವಿದ್ಯುತ್ ಬಿಲ್ ಸುಮಾರು ₹ 30 ಸಾವಿರ, ಕಾರ್ಮಿಕರ ಸಂಬಳ ಸುಮಾರು ₹ 77 ಸಾವಿರ ನೀಡಲು ಸಾಧ್ಯವಾಗುತ್ತಿಲ್ಲ. ಮಾಲೀಕರು ಸ್ವಂತ ಹಣ ನೀಡುತ್ತಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಚಿತ್ರ ಮಂದಿರ ನಿರ್ವಹಣೆ ನಷ್ಟದಲ್ಲಿದೆ’ ಎಂದು ಅಪರ್ಣಾ ಚಿತ್ರಮಂದಿರದ ವ್ಯವಸ್ಥಾಪಕ ಮುಜಾಹಿದ್ ನಾಯ್ಕ್ ತಿಳಿಸಿದರು.

ಆನ್‌ಲೈನ್‌ಲ್ಲೇ ಚಲನಚಿತ್ರಗಳ ವೀಕ್ಷಣೆ

ಸಿರವಾರ: ಪಟ್ಟಣದಲ್ಲಿದ್ದ ಮೂರು ಚಿತ್ರಮಂದಿರಗಳಲ್ಲಿ ಒಂದು ಚಿತ್ರಮಂದಿರ ಕಲ್ಯಾಣ ಮಂಟಪವಾಗಿ ಮಾರ್ಪಾಟು ಮಾಡಿದ್ದು, ಇನ್ನು ಎರಡು ಚಿತ್ರಮಂದಿರಗಳು ಹೊಸ ಚಲನಚಿತ್ರಗಳ ಪ್ರದರ್ಶನಗಳನ್ನು ಮಾಡುತ್ತಾ ಕುಂಟುತ್ತಾ ಸಾಗಿವೆ. ಇಂದಿನ ಆನ್‌ಲೈನ್ ಆ್ಯಪ್‌ಗಳ ಮೂಲಕ ಚಿತ್ರ ಬಿಡುಗಡೆಯಾದ ಎರಡು ದಿನದಲ್ಲಿ ಉಚಿತವಾಗಿ ಸಿಗುವುದರಿಂದ ವೀಕ್ಷಕರು ಚಿತ್ರಮಂದಿರಗಳಿಂದ ದೂರವಾಗುತ್ತಿದ್ದಾರೆ. ದೊಡ್ಡ ನಟರ ಚಿತ್ರಗಳ ಬಿಡುಗಡೆಯಾದಾಗ ಮಾತ್ರ ವಾರಕ್ಕೂ ಹೆಚ್ಚು ಕಾಲ ಚಿತ್ರಗಳನ್ನು ನೋಡಲು ಚಿತ್ರ ಮಂದಿರಗಳಿಗೆ ವೀಕ್ಷಕರು ಬರುವುದು ಬಿಟ್ಟರೆ, ಸಣ್ಣ ಚಿತ್ರಗಳು ಎರಡು ಮೂರು ದಿನಗಳಿಗೆ ಮಾತ್ರ ಸೀಮಿತವಾಗುತ್ತಿವೆ.

ಭಾರಿ ಪ್ರಮಾಣದ ಹಾನಿ

ಸಿಂಧನೂರು: ‘ನಾಲ್ಕು ದಶಕಗಳಿಂದ ಕನ್ನಡ ಚಲನಚಿತ್ರಗಳನ್ನೇ ಪ್ರದರ್ಶಿಸುತ್ತಾ ಬಂದ ನಮಗೆ ಇತ್ತೀಚಿನ ವರ್ಷಗಳಲ್ಲಿ ಒಂದು ಪ್ರಯೋಗಕ್ಕೆ ₹ 300ರಿಂದ ₹ 400 ಆದಾಯ ಬರತೊಡಗಿತು. ಹೆಚ್ಚೆಂದರೆ ಒಂದು ದಿನಕ್ಕೆ ₹ 1,500ಕ್ಕೆ ಆದಾಯ ನಿಂತು ಬಿಟ್ಟಿತು. ಇದರಿಂದ ಚಿತ್ರಮಂದಿರವನ್ನು
ಬಂದ್ ಮಾಡುವುದು ಅನಿವಾರ್ಯವಾಯಿತು’ ಎಂದು ವೆಂಕಟೇಶ್ವರ ಚಿತ್ರಮಂದಿರದ ಮಾಲೀಕ ರಾಜೇಂದ್ರ ಕುಮಾರ ಬಾದರ್ಲಿ ಹೇಳಿದರು.

‘ಪ್ರತಿದಿನ ₹ 3 ಸಾವಿರ ತೆರಿಗೆ ಕಟ್ಟಬೇಕಾಗಿತ್ತು. ಕೆಲಸಗಾರರು, ವಿದ್ಯುತ್ ಬಿಲ್, ನಿರ್ವಹಣೆ ಸೇರಿದಂತೆ ದಿನವೊಂದಕ್ಕೆ ಕನಿಷ್ಠ₹ 8 ಸಾವಿರ ಖರ್ಚು ಬರುತ್ತಿತ್ತು. ಸರ್ಕಾರದಿಂದಲೂ ಯಾವುದೇ ರೀತಿಯ ಬೆಂಬಲ ದೊರೆಯಲಿಲ್ಲ. ಕನ್ನಡ ಚಲನಚಿತ್ರ ಪ್ರಯೋಗಿಸುತ್ತಾ ಬಂದಿರುವುದಕ್ಕೂ ಯಾವುದೇ ಪ್ರೋತ್ಸಾಹ ಸಿಗಲಿಲ್ಲ. ಆದ್ದರಿಂದ ಐದಾರು ವರ್ಷಗಳಿಂದ ಚಿತ್ರಮಂದಿರ ಸ್ಥಗಿತಗೊಳಿಸಿದೆ’ ಎಂದು ತಿಳಿಸಿದರು.

ನಗರದಲ್ಲಿ ಮಂಜುನಾಥ, ಸಂಗಮೇಶ್ವರ, ಶರಣಬಸವೇಶ್ವರ ಮತ್ತು ಕೂಡಲ ಸಂಗಮ ಚಿತ್ರಮಂದಿರಗಳಿದ್ದು, ಯಾವ ಟಾಕೀಜು ಸಹ ಲಾಭದಾಯಕವಾಗಿಲ್ಲ. ಎಲ್ಲ ಟಾಕೀಜುಗಳು ಹಾನಿಯಲ್ಲಿಯೇ ನಡೆಯುತ್ತಿವೆ ಎಂದು ಮಾಲೀಕರು ಹೇಳುವ ಮಾತು.

ಸಾಮಾಜಿಕ ಮಾಧ್ಯಮ: ಸೋಷಿಯಲ್‌ ಜಾಲತಾಣಗಳ ಮಹತ್ವ ಹೆಚ್ಚಾಗುತ್ತಿದೆ. ಮನೆಗಳಲ್ಲೇ ಕುಳಿತು ಚಲನಚಿತ್ರ ನೋಡುವವರ ಸಂಖ್ಯೆ ಬಹಳಷ್ಟಿದೆ. ಪರೋಕ್ಷವಾಗಿ ಸಾಮಾಜಿಕ ಜಾಲತಾಣದ ಮಾಧ್ಯಮಗಳು ಹೆಚ್ಚಾಗಿರುವುದು ಕೂಡಾ ಚಲನಚಿತ್ರ ಮಂದಿರಗಳ ನಿರಂತರ ಗಳಿಕೆಗೆ ಪೆಟ್ಟುಬಿದ್ದಿದೆ.

–ಪೂರಕ ವರದಿಗಳು: ಬಿ.ಎ.ನಂದಿಕೋಲಮಠ, ಬಸವರಾಜ ಭೋಗಾವತಿ, ಡಿ.ಎಚ್.ಕಂಬಳಿ, ಕೃಷ್ಣಾ ಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT