ಸೋಮವಾರ, ಜನವರಿ 25, 2021
19 °C
ರಾಯಚೂರು ಜಿಲ್ಲೆಯ 71 ಕೇಂದ್ರಗಳಲ್ಲಿ ಲಸಿಕೆ ನೀಡುವ ತಾಲೀಮು

25 ಜನರಿಗೆ ಲಸಿಕೆ ನೀಡುವ ಪ್ರಯೋಗ: ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದ ರಿಮ್ಸ್‌ ಆಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲ್ಲೂಕು ಆರೋಗ್ಯ ಕೇಂದ್ರಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್-19 ಲಸಿಕೆ ಪೂರ್ವಾಭ್ಯಾಸ ಅಂಗವಾಗಿ ಮಾದರಿ ಲಸಿಕೆ ನೀಡಲು ಕ್ರಮವಹಿಸಲಾಗಿದೆ. ಶುಕ್ರವಾರ 25 ಜನರಿಗೆ ಲಸಿಕೆ ನೀಡುವ ಪ್ರಯೋಗ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಹೇಳಿದರು.

ಕೋವಿಡ್-19 ಸೋಂಕಿನ ಲಸಿಕೆ ಪ್ರಯೋಗದ ತಾಲೀಮು ಪರಿಶೀಲಿಸಲು ಜಿಲ್ಲಾಧಿಕಾರಿ ರಿಮ್ಸ್ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ಭೇಟಿ ನೀಡಿದರು. ರಿಮ್ಸ್ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಕೋವಿಡ್-19 ಲಸಿಕಾ ತಾಲೀಮಿಗೆ ಚಾಲನೆ ನೀಡಿ ಮಾತನಾಡಿದರು.

ತಾಲೀಮು ಮಾಡುವುದರಿಂದ ಮುಂದೆ ಲಸಿಕೆ ವಿತರಣೆ ಸಂದರ್ಭದಲ್ಲಿ ಸಮಸ್ಯೆಯಾಗದಂತೆ ಎಚ್ಚರ ವಹಿಸಲು ಸಹಾಯವಾಗಲಿದೆ. ಈ ನಿಟ್ಟಿನಲ್ಲಿ ಮೊದಲ ದಿನ ಜಿಲ್ಲೆಯ 71 ಕೇಂದ್ರಗಳಲ್ಲಿ ಲಸಿಕೆ ವಿತರಣೆಗೆ ಡ್ರೈರನ್ ನಡೆಯುತ್ತಿದೆ. ಕೊರೊನಾ ಸೇನಾನಿಗಳಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ಆರೋಗ್ಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಜಿಲ್ಲೆಯ ಒಟ್ಟು 14,500 ಜನರನ್ನು ಗುರುತಿಸಿ ಮೊದಲ ಹಂತದಲ್ಲಿ ಲಸಿಕೆ ನೀಡಲು ಕೇಂದ್ರ ಸರ್ಕಾರಕ್ಕೆ ಮಾಹಿತಿ ಒದಗಿಸಲಾಗಿದೆ ಎಂದು ಹೇಳಿದರು.

ಪ್ರತಿ ಕೇಂದ್ರದಲ್ಲಿ ದಿನವೊಂದಕ್ಕೆ ನೂರು ಜನರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ. ಈಗಾಗಲೇ ಗುರುತಿಸಲಾಗಿರುವ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹಿತಿ ನೀಡಲಾಗಿದೆ. ಲಸಿಕೆ ಪಡೆಯಲು ಬರುವವರು ಗುರುತೀನ ಚೀಟಿ, ಆಧಾರ ಕಾರ್ಡ್‌ನೊಂದಿಗೆ ಬರುವಂತೆ ತಿಳಿಸಲಾಗಿದೆ ಎಂದರು.

ರಿಮ್ಸ್ ಆಸ್ಪತ್ರೆಯಲ್ಲಿ 1.20 ಲಕ್ಷ ಲಸಿಕೆ ಸಂಗ್ರಹಿಸುವ ಕೂಲರ್ ಮಾಡಿಕೊಳ್ಳಲಾಗಿದೆ. ಅದೇ ರೀತಿ ಪೊಲಿಯೋ ಲಸಿಕೆ ಬಳಸಲಾಗುವ ವ್ಯಾಕ್ಸಿನ್ ಕೂಲರ್ ವ್ಯವಸ್ಥೆಯು ಎಲ್ಲಾ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿಯೂ ಲಭ್ಯವಿದೆ. ಕೆಎಂಎಫ್‍ನಲ್ಲಿಯೂ ಕೂಲರ್ ವ್ಯವಸ್ಥೆಯಿದ್ದು ಬಳಕೆಗೆ ಗುರುತಿಸಲಾಗಿದೆ. ಕೋವಿಡ್ ಲಸಿಕೆ ಸಂಗ್ರಹಕ್ಕೆ ಯಾವುದೇ ತೊಂದರೆಯಿಲ್ಲ. ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ಕೇಂದ್ರಗಳಲ್ಲಿ ತಾಲೀಮು ನಡೆಸಲಾಗುತ್ತಿದೆ ಎಂದು ಹೇಳಿದರು.

ಕೊರೊನಾ ಲಸಿಕೆ ಇನ್ನೂ ಬಂದಿಲ್ಲ, ಶೀಘ್ರದಲ್ಲಿ ಬರುವ ಸಾಧ್ಯತೆಗಳಿದೆ. ಜಿಲ್ಲೆಯಾದ್ಯಂತ ತಾಲ್ಲೂಕು ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ನಾಲ್ಕು ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ 71 ಕೇಂದ್ರಗಳಲ್ಲಿ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಮೂರು ಹಂತದಲ್ಲಿ ಲಸಿಕೆ ನೀಡಲು ನಿರ್ಧರಿಸಲಾಗಿದೆ ಎಂದರು.

ಎರಡನೇ ಹಂತದಲ್ಲಿ ಇತರೆ ಜನಸಂಪರ್ಕ ಇರುವ ಇಲಾಖೆಗಳು, ಮೂರನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ಬಂದ ನಂತರ ಬೇಕಾಗುವ ಸಿದ್ದತೆಗಳನ್ನು ಪೂರ್ವಭಾವಿ ಸಿದ್ದತೆಗೊಳಿಸಲು ಈಗ ತಾಲೀಮು ನಡೆಸಲಾಗುತ್ತದೆ. ಪ್ರತಿ ಲಸಿಕಾ ಕೇಂದ್ರದಲ್ಲಿ 5 ಅಧಿಕಾರಿಗಳನ್ನು ನಿಯುಕ್ತಿಗೊಳಿಸಲಾಗುತ್ತದೆ ಎಂದು ತಿಳಿಸಿದರು.

ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪುರಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಶಾಕೀರ್, ಡಾ.ನಾಗರಾಜ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯ ಶಂಕರ, ಡಾ. ಭಾಸ್ಕರ ಎಂ.ಎಸ್, ಡಾ.ವಿಜಯಾ, ಡಾ.ಬಸವರಾಜ, ಡಾ.ವಾಸುದೇವ, ಡಾ.ಪುನೀತ್, ಆರೋಗ್ಯ ಮತ್ತು ರಿಮ್ಸ್ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.