ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಜಾಗ ಒತ್ತುವರಿ ತೆರವಿಗೆ ವಿಳಂಬ: DC ಆದೇಶಕ್ಕೂ ಕಿಮ್ಮತ್ತು ನೀಡದ ಪೌರಾಯುಕ್ತ

Published 8 ಜನವರಿ 2024, 15:57 IST
Last Updated 8 ಜನವರಿ 2024, 15:57 IST
ಅಕ್ಷರ ಗಾತ್ರ

ರಾಯಚೂರು: ಇಲ್ಲಿನ ಎಲ್‌ಬಿಎಸ್ ನಗರದ ಅಲ್ಲಮಪ್ರಭು ಕಾಲೊನಿಯ ಸರ್ಕಾರಿ ಪ್ರೌಢಶಾಲೆಯ ಜಾಗ ಒತ್ತುವರಿ ತೆರವುಗೊಳಿಸಿ ಶೈಕ್ಷಣಿಕ ಚಟುವಟಿಕೆಗಳಿಗೆ ಸಹಕಾರ ನೀಡಬೇಕು ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ಚಂದ್ರಶೇಖರ ಭಂಡಾರಿ ಅವರು ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ ಅವರಿಗೆ ಮನವಿ ಮಾಡಿದ್ದಾರೆ.

ಅಲ್ಲಮಪ್ರಭು ಕಾಲೊನಿಯ ಪ್ರೌಢಶಾಲೆ ನಿರ್ಮಾಣಕ್ಕಾಗಿ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರದ ಚಂದ್ರಬಂಡಾ ರಸ್ತೆಯಲ್ಲಿರುವ ಸಂತೋಷನಗರ ಲೇಔಟ್‌ನಲ್ಲಿ ನೀಡಲಾದ ನಾಗರಿಕ ಸೌಲಭ್ಯಕ್ಕಾಗಿ ಮೀಸಲಾದ (ಸಿ.ಎ.ಸೈಟ್) ನಿವೇಶನವನ್ನು ಕೆಲವರು ಒತ್ತುವರಿ ಮಾಡಿ ಶೆಡ್ ನಿರ್ಮಿಸಿಕೊಂಡಿದ್ದನ್ನು ಹಾಗೂ ನಿವೇಶನದ ಸುತ್ತ ತಂತಿ ಬೇಲಿ ಹಾಕಿದ್ದನ್ನು ತೆರವುಗೊಳಿಸಲು ಸಹಕಾರ ನೀಡಲು ಕೋರಿದ್ದಾರೆ.  

ಜನವರಿ 3ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರು ತಹಶೀಲ್ದಾರ್ ಸುರೇಶ ವರ್ಮಾ ಅವರಿಗೆ ನಿರ್ದೇಶನ ನೀಡಿದ್ದನ್ನು ಉಲ್ಲೇಖಿಸಿ, ಒತ್ತುವರಿ ತೆರೆವುಗೊಳಿಸಿ ಶಿಕ್ಷಣ ಇಲಾಖೆಗೆ ಸೇರಿದ ಜಾಗದಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲು ಪೌರಾಯುಕ್ತರು ಶಿಕ್ಷಣ ಇಲಾಖೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

‘ಪ್ರಜಾವಾಣಿ’ ಪತ್ರಿಕೆಯಲ್ಲಿ ಆಗಸ್ಟ್ 13ರಂದು ‘ದೇವರ ಹೆಸರಿನಲ್ಲಿ ಶಾಲಾ ಜಾಗ ಒತ್ತುವರಿ’ ಎಂಬ ಶೀರ್ಷಿಕೆಯಡಿ ವರದಿ ಮಾಡಲಾಗಿತ್ತು. ವರದಿ ಪ್ರಕಟವಾದ ಬಳಿಕ ವಿವಿಧ ಸಂಘ–ಸಂಸ್ಥೆಗಳಿಂದ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗೆ ಮನವಿ ಸಲ್ಲಿಸಿ ಒತ್ತುವರಿ ತೆರವುಗೊಳಿಸಲು ಒತ್ತಡ ಹೇರಿದ್ದರು. 

ಇದರ ಬೆನ್ನೆಲ್ಲೆ ಕಳೆದ 2023ರ ನವೆಂಬರ್ 27ರಂದು ಬಿಇಒ ಚಂದ್ರಶೇಖರ ಭಂಡಾರಿ ಅಕ್ರಮ ಶೆಡ್ ತೆರವುಗೊಳಿಸುವಂತೆ ಪೌರಾಯುಕ್ತರಿಗೆ ಪತ್ರ ಬರೆದಿದ್ದರು. ಎರಡು ಬಾರಿ ಪೌರಾಯುಕ್ತರಿಗೆ ಪತ್ರ ಬರೆದರೂ ಇದುವರೆಗೆ ಅಕ್ರಮ ಕಟ್ಟಡ ತೆರವುಗೊಳಿಸಿಲ್ಲ. ಇದು ಪ್ರಗತಿಪರ ಸಂಘಟನೆಗಳ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.

‘ಅಕ್ರಮ ಕಟ್ಟಡ ತೆರವುಗೊಳಿಸಲು ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ, ಶಿಕ್ಷಣಾಧಿಕಾರಿಗಳು ಆದೇಶ ಮಾಡಿದರೂ ಪೌರಾಯುಕ್ತರು ಕಿಮ್ಮತ್ತು ನೀಡುತ್ತಿಲ್ಲ. ನಗರಸಭೆ ಪೌರಾಯುಕ್ತರ ವಿಳಂಬ ನೀತಿ ಪರೋಕ್ಷವಾಗಿ ಒತ್ತುವರಿದಾರರ ಪರವಾಗಿದ್ದಾರೆ’ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಪ್ರಜಾವಾಣಿ’ಯಿಂದ ಬೆಂಗಳೂರಿನಲ್ಲಿ ನಡೆದ ಫೋನ್‌ಇನ್‌ ಕಾರ್ಯಕ್ರಮದಲ್ಲೂ ಸಾರ್ವಜನಿಕರು ಕರೆ ಮಾಡಿ ಸಚಿವರಿಗೆ ಮಾಹಿತಿ ನೀಡಿದ್ದಾರೆ. ಸಚಿವರು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಮತ್ತೆ ನಿರ್ದೇಶನ ನೀಡುವ ಭರವಸೆ ನೀಡಿದ್ದಾರೆ.

ಪೌರಾಯುಕ್ತರ ವಿರುದ್ಧ ಹೋರಾಟದ ಎಚ್ಚರಿಕೆ
‘ತೀನ್ ಖಂದಿಲ್ ವೃತ್ತದ ಬಳಿಯ ದರ್ಗಾವೊಂದರ ಕಮಾನು ಕಾಮಗಾರಿಗೆ ತಡೆ ನೀಡುವ ಪೌರಾಯುಕ್ತರು ಶಾಲಾ ಜಾಗ ಒತ್ತುವರಿ ತೆರವುಗೊಳಿಸದೇ ಮನುವಾದಿ ಸಿದ್ದಾಂತಕ್ಕೆ ಬೆಂಬಲ ನೀಡುತ್ತಿದ್ದಾರೆ. ಕಾನೂನು ಎಲ್ಲರಿಗೆ ಒಂದೇ. ಶೀಘ್ರವೇ ಒತ್ತುವರಿ ತೆರವುಗೊಳಿಸದಿದ್ದಲ್ಲಿ ಪೌರಾಯುಕ್ತರ ವಿರುದ್ಧ ಹೋರಾಟ ಮಾಡಲಾಗುವುದು’ ಎಂದು ದಲಿತ ಸಂಘರ್ಷ ಸಮಿತಿ (ಭೀಮವಾದ ಬಣ) ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹಲು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT