ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಪಾಳುಬಿದ್ದ ₹3.85 ಕೋಟಿ ವೆಚ್ಚದ ರೈತ ಸಮುದಾಯ ಭವನ

Published 22 ಡಿಸೆಂಬರ್ 2023, 5:09 IST
Last Updated 22 ಡಿಸೆಂಬರ್ 2023, 5:09 IST
ಅಕ್ಷರ ಗಾತ್ರ

ರಾಯಚೂರು: 2018ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿನ ಎಪಿಎಂಸಿ ಬಳಿ ನಿರ್ಮಿಸಿದ ರೈತ ಸಮುದಾಯ ಭವನ ಉಪಯೋಗಕ್ಕೆ ಬಾರದೇ ಪಾಳು ಬಿದ್ದಿದೆ.

ಜಿಲ್ಲೆಯ ವಿವಿಧ ಹಳ್ಳಿಗಳ ರೈತರು ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ತಂದಾಗ ವಿವಿಧ ಕಾರಣದಿಂದ ಉತ್ಪನ್ನ ಮಾರಾಟವಾಗದೇ ಸಂದರ್ಭದಲ್ಲಿ ತಂಗಲು ಹಾಗೂ ವಿಶ್ರಾಂತಿಗಾಗಿ ಈ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ. ಅಲ್ಲದೇ ರೈತರ ಮಕ್ಕಳ ವಿವಾಹ ಹಾಗೂ ಇತರೆ ಸಭೆ ಸಮಾರಂಭಗಳಿಗೂ ಅನುಕೂಲವಾಗಲೆಂದು ಭವನ ಕಟ್ಟಲಾಗಿದೆ. ಆದರೆ, ಸ್ಥಳೀಯ ಆಡಳಿತ ಐದು ವರ್ಷಗಳಿಂದ ರೈತರಿಗೆ ಅನುಕೂಲವನ್ನೇ ಕಲ್ಪಿಸಿಲ್ಲ.

ಅಂದಾಜು ₹3.85 ಕೋಟಿ ವೆಚ್ಚದಲ್ಲಿ ರೈತ ಭವನ ನಿರ್ಮಾಣ ಮಾಡಲಾಗಿದೆ. ಆದರೆ, ಉದ್ಘಾಟನೆಯಾದಾಗಿನಿಂದ ಇವತ್ತಿನ ವರೆಗೂ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಸುಸಜ್ಜಿತ ಕಟ್ಟಡ ದುಸ್ಥಿತಿಗೆ ತಲುಪಿದೆ. ಮೂರು ಅಂತಸ್ತಿನ ಭವನವು ರೈತರಿಲ್ಲದೇ ಬಿಕೋ ಎನ್ನುತ್ತಿದೆ. ರೈತ ಭವನದದ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿವೆ.

ಎರಡು ಅಂತಸ್ತಿನ ಕಟ್ಟಡದಲ್ಲಿ 12 ಕೊಠಡಿಗಳು, ಮಂಚಗಳು, ಶೌಚಾಲಯಗಳು, ಸ್ನಾನಗೃಹ, 600ಕ್ಕೂ ಹೆಚ್ಚು ಜನ ವಿಶ್ರಾಂತಿ ಪಡೆಯಲು ದೊಡ್ಡ ಹಾಲ್, ಅಡುಗೆ ಕೋಣೆ, ಜನರೇಟರ್, ವಿವಾಹ ಮತ್ತಿತರೆ ಕಾರ್ಯಗಳಿಗೆ ಬೇಕಾಗುವ ಸ್ಟೀಲ್ ಸಾಮಾನುಗಳು, ಸಿಸಿ ಕ್ಯಾಮೆರಾ, ವಾಹನಗಳ ನಿಲುಗಡೆಗೆ ಭವನದ ಮುಂದೆ ದೊಡ್ಡ ಮೈದಾನ ಇದೆ.

ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಸಿಸಿ ಕ್ಯಾಮೆರಾ ಸೇರಿ ಸಣ್ಣಪುಟ್ಟ ಕಾರ್ಯಗಳು ಬಾಕಿ ಇರುವ ಕಾರಣ ಬಹಳದಿನಗಳ ವರೆಗೆ ಬಳಕೆ ಮಾಡಿರಲಿಲ್ಲ. ಇದೀಗ ಸೌಲಭ್ಯ ಕಲ್ಲಿಸಿದರೂ ಎಪಿಎಂಸಿ ಅಧಿಕಾರಿಗಳು ರೈತ ಭವನವನ್ನು ಬಳಕೆಗೆ ಮುಕ್ತಗೊಳಿಸಿಲ್ಲ.

ಕೆಲ ತಿಂಗಳ ಹಿಂದೆ ಖಾಸಗಿ ಸಮಾರಂಭಗಳಿಗೆ ಭವನವನ್ನು ಬಾಡಿಗೆಗೆ ಕೊಡಲಾಗಿತ್ತು ಆದರೆ ಸಮರ್ಪಕ ನಿರ್ವಹಣೆ ಮಾಡದ ಕಾರಣ ಖಾಸಗಿ ಕಾರ್ಯಕ್ರಮಗಳೂ ನಡೆಯುತ್ತಿಲ್ಲ ಇದರಿಂದ ಎಪಿಎಂಸಿಗೆ ಬರಬೇಕಿರುವ ಆದಾಯವೂ ಇಲ್ಲದಂತಾಗಿದೆ. ಈ ದಿಸೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೂ ಗಂಭೀರವಾಗಿಲ್ಲ.

ಎಪಿಎಂಸಿಗೆ ಬರುತ್ತಿದ್ದ ಅನೇಕ ರೈತರು ಹಿಂದೆ ಹಳೆಯ ಕಟ್ಟಡದಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಈಗ ನೂತನ‌ ಭವನದಲ್ಲಿ ರೈತರೂ ಕಾಣುತ್ತಿಲ್ಲ. ರೈತರಿಗಾಗಿಯೇ ಭವನವಿದೆ ಎನ್ನುವುದು ಬಹಳಷ್ಟು ರೈತರು ಮರೆತೇ ಹೋಗಿದ್ದಾರೆ.

ಖಾಸಗಿ ಸ್ನಾನಗೃಹ, ವಿಶ್ರಾಂತಿ ಗೃಹವೂ ಇಲ್ಲ: ರಾಯಚೂರು ಎಪಿಎಂಸಿಯಲ್ಲಿ ಖಾಸಗಿಯವರು ನಿರ್ವಹಣೆ ಮಾಡುತ್ತಿರುವ 10 ಶೌಚಾಲಯಗಳು ಇವೆ. ಆದರೆ ಸ್ನಾನಗೃಹ, ಕುಡಿಯುವ ನೀರು, ವಿಶ್ರಾಂತಿ ಗೃಹ ಇಲ್ಲ.

ಎಪಿಎಂಸಿಯಲ್ಲಿ ಸುಮಾರು 200 ವ್ಯಾಪಾರ ಮಳಿಗೆಗಳಿವೆ. 12,00 ಖರೀದಿದಾರರು, 400 ದಲ್ಲಾಳಿಗಳು ಇದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದ ಸೀಸನ್ ನಲ್ಲಿ ಪ್ರತಿನಿತ್ಯ 8 ರಿಂದ 10 ಸಾವಿರ ರೈತರು ವಿವಿಧ ಉತ್ಪನ್ನಗಳ ಮಾರಾಟಕ್ಕೆ ಬರುತ್ತಾರೆ. ಎಪಿಎಂಸಿಯಲ್ಲಿ ಉತ್ಪನ್ನ ಮಾರಾಟವಾಗದಿದ್ದರೆ ಪ್ರಾಂಗಣದ ಅಂಗಡಿಗಳ ಲಾರಿಗಳನ್ನು ನಿಲ್ಲಿಸಿ ಚಾಲಕರು ಅಲ್ಲಿಯೇ ನಿದ್ರೆ ಮಾಡಿದರೆ ರೈತರು ತಮ್ಮ ಊರಿಗೆ ತೆರಳಿ ಮರುದಿನ ಎಪಿಎಂಸಿಗೆ ಬರಬೇಕಿದೆ.

ರಾಯಚೂರಿನ ರಾಜೇಂದ್ರ ಗಂಜ್ ಬಳಿಯ ರೈತ ಸಮುದಾಯ ಭವನ
ರಾಯಚೂರಿನ ರಾಜೇಂದ್ರ ಗಂಜ್ ಬಳಿಯ ರೈತ ಸಮುದಾಯ ಭವನ
ರೈತ ಭವನ ಉದ್ಘಾಟನೆಯಾದಾಗಿನಿಂದ ಈವರೆಗೆ ಒಬ್ಬ ರೈತರೂ ಉಳಿದುಕೊಂಡಿಲ್ಲ. ಹಳೆಯ ಕಟ್ಟಡಕ್ಕೆ ಬಾಡಿಗೆ ಬರುತ್ತಿತ್ತು. ಅಧಿಕಾರಿಗಳ ನಿರ್ಲಕ್ಷದಿಂದ ಬಾಡಿಗೆ ಕೊಡುವುದನ್ನೂ ನಿಲ್ಲಿಸಲಾಗಿದ್ದು ಆದಾಯಕ್ಕೆ ಕತ್ತರಿ ಬಿದ್ದಿದೆ
- ಲಕ್ಷ್ಮಣಗೌಡ ಕಡಗಂದೊಡ್ಡಿ, ರೈತ ಮುಖಂಡ
ರೈತ ಸಮುದಾಯ ಭವನ ಪಾಳು ಬಿದ್ದಿರುವುದು ನಿಜ. ಶೀಘ್ರದಲ್ಲೇ ಟೆಂಡರ್‌ ಕರೆದು ನಿರ್ವಹಣೆ ಹೊಣೆಯನ್ನು ಖಾಸಗಿಯವರಿಗೆ ವಹಿಸಲಾಗುವುದು. ಈ ಮೂಲಕ ಭವನದ ಸದ್ಬಳಕೆಯಾಗುವಂತೆ ಮಾಡಲಾಗುವುದು
- ಆದೆಪ್ಪ ಗೌಡ, ಎಂದು ಎಪಿಎಂಸಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT