ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಂಸಿ ಮಸೂದೆ ಮಂಡನೆಗೆ ವಿರೋಧ

ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ಖಾಸಗಿ ವೈದ್ಯರ ಪ್ರತಿಭಟನೆ
Last Updated 31 ಜುಲೈ 2019, 14:22 IST
ಅಕ್ಷರ ಗಾತ್ರ

ರಾಯಚೂರು: ರಾಷ್ಟ್ರೀಯ ವೈದ್ಯಕೀಯ ಪರಿಷತ್ತು ವಿಸರ್ಜಿಸಿ, ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ)ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಿರುವುದನ್ನು ಖಂಡಿಸಿ ದೇಶದಾದ್ಯಂತ ಮುಷ್ಕರಕ್ಕೆ ನೀಡಿದಕರೆಯನ್ನು ಬೆಂಬಲಿಸಿ ಭಾರತೀಯ ವೈದ್ಯಕೀಯ ಸಂಘ ಜಿಲ್ಲಾ ಶಾಖೆಯ ನೇತೃತ್ವದಲ್ಲಿ ಖಾಸಗಿ ವೈದ್ಯರು ಒಪಿಡಿ ಚಿಕಿತ್ಸೆ ಸ್ಥಗಿತಗೊಳಿಸಿ ಬುಧವಾರ ಪ್ರತಿಭಟನೆ ನಡೆಸಿದರು.

ವೈದ್ಯಕೀಯ ಆಯೋಗದ ವಿಧೇಯಕ ಮಂಡಿಸಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವೈದ್ಯರು, 1956ರಲ್ಲಿ ಸ್ಥಾಪನೆಯಾದ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಸಂಸ್ಥೆ ಮುಚ್ಚಿ, ರಾಷ್ಟ್ರೀಯ ವೈದ್ಯಕೀಯ ಆಯೋಗದ ವಿಧೇಯಕ ಲೋಕಸಭೆಯಲ್ಲಿ ಅಂಗೀಕರಿಸಿರುವುದು ದುರುದೃಷ್ಟಕರ ಸಂಗತಿ ಎಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ಆರೋಪಿಸಿದರು.

ವೈದ್ಯಕೀಯ ಪರಿಷತ್ತಿಗೆ ತಿದ್ದುಪಡಿ ಮಾಡಬಹುದಾಗಿದ್ದು, ಅದನ್ನು ಬಿಟ್ಟು ಮತ್ತೊಂದು ಕಾಯ್ದೆ ತರಲು ಮುಂದಾಗಿರುವುದು ಅಸಮಂಜಸವಾಗಿದೆ. ವೈದ್ಯಕೀಯ ಶಿಕ್ಷಣದ ಗುಣಮಟ್ಟ ಪ್ರಪಾತಕ್ಕೆ ಬೀಳುವಂತೆ ಮಾಡಿ, ವಿದ್ಯಾರ್ಥಿಗಳ ಹಾಗೂ ವೈದ್ಯರ ಆತ್ಮಸ್ಥೈರ್ಯ ಕಸಿದುಕೊಳ್ಳಲಿದೆ ಎಂದು ದೂರಿದರು.

ಆಯೋಗದ 64 ಸದಸ್ಯರಲ್ಲಿ ಚುನಾಯಿತರ ಸಂಖ್ಯೆ ಕೇವಲ 5 ಇದ್ದು, ಆಡಳಿತ ಪಕ್ಷದ ಮಾತಿಗೆ ತಲೆಯಾಡಿಸುವ ಅಧಿಕಾರಿಗಳು ಹಾಗೂ ನಾಮನಿರ್ಮದೇಶಿತ ಸದಸ್ಯರು ಶಿಕ್ಷಣದ ವ್ಯವಸ್ಥೆ ಹಾಳಾಗುವಂತೆ ಮಾಡಲಿದ್ದಾರೆ. ಆದ್ದರಿಂದ ಇದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿ ಪೆಟ್ಟಾಗಿದೆ. ಶೇ 80ರಷ್ಟು ವೈದ್ಯಕೀಯ ಸೀಟುಗಳ ಶುಲ್ಕ ನಿಯಂತ್ರಿಸುವ ಹಕ್ಕು ರಾಜ್ಯ ಸರ್ಕಾರ ಹೊಂದಿದ್ದು, ಮುಂದಿನ ದಿನಗಳಲ್ಲಿ ಶೇ 40ಕ್ಕೆ ಇಳಿಯಲಿದೆ. ಶೇ 60 ರಷ್ಟು ಸೀಟುಗಳ ಶುಲ್ಕ ನಿಯಂತ್ರಣ ಖಾಸಗಿಯವರ ಪಾಲಾಗಲಿವೆ ಎಂದು ವೈದ್ಯರಾದ ಡಾ.ಮಹಾಲಿಂಗಪ್ಪ, ಡಾ.ಅನಿರುದ್ಧ್ ಕುಲಕರ್ಣಿ, ವಿ.ಜಿ.ಕುಲಕರ್ಣಿ, ಡಾ.ಎಂ.ಬಿ.ಪಾಟೀಲ, ಡಾ.ಹರ್ಷವರ್ಧನ, ಡಾ.ಸಾಯಿಬಾಬಾ ಅಸಮಾಧಾನ ವ್ಯಕ್ತಪಡಿಸಿದರು.

ಒಪಿಡಿ ಸ್ಥಗಿತ:

ನಗರ ಸೇರಿದಂತೆ ಜಿಲ್ಲೆಯಲ್ಲಿನ ಖಾಸಗಿ ಆಸ್ಪತ್ರೆಗಳನ್ನು ಬಂದ್‌ ಮಾಡಲಾಗಿತ್ತು. ಬುಧವಾರದ ಬೆಳಿಗ್ಗೆ 6ರಿಂದ ಗುರುವಾರ ಬೆಳಗಿನ 6ಗಂಟೆವರೆಗೆ ಒಪಿಡಿ ಚಿಕಿತ್ಸೆ ಬಂದ್ ಮಾಡಿದ್ದರಿಂದ ಮಾಹಿತಿಯಿಲ್ಲದೇ ಆಸ್ಪತ್ರೆಗೆ ಬಂದ ರೋಗಿಗಳು ಸಮಸ್ಯೆ ಅನುಭವಿಸಿದರು. ಆದರೂ, ಒಳರೋಗಿಗಳ ಚಿಕಿತ್ಸೆ ಮುಂದುವರೆದಿತ್ತು. ಸರ್ಕಾರಿ ಆಸ್ಪತ್ರೆಗಳು ಕಾರ್ಯನಿರ್ವಹಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT