ಸೋಮವಾರ, ನವೆಂಬರ್ 18, 2019
21 °C
ಇ–ಸ್ವತ್ತು ಮತ್ತು ಪಂಚತಂತ್ರ ತಂತ್ರಾಂಶ ಬಳಕೆ ಕಾರ್ಯಾಗಾರ

ಇ–ಸ್ವತ್ತು ಅರ್ಜಿ ಶೀಘ್ರ ವಿಲೇವಾರಿಗೊಳಿಸಿ: ಮಹಮ್ಮದ್‌ ಯೂಸುಫ್‌

Published:
Updated:
Prajavani

ರಾಯಚೂರು: ಇ–ಸ್ವತ್ತು ಮೂಲಕ ಬರುವ ಸಮಸ್ಯೆಗಳು ಇಟ್ಟುಕೊಂಡು ಕುಳಿತುಕೊಳ್ಳಬೇಡಿ, ಅರ್ಜಿದಾರರಿಗೆ ಅಲೆಯುವುದು ತಪ್ಪಿಸಿ ಸಮಸ್ಯೆಗಳು ಬಗೆಹರಿಸಿ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಹಮ್ಮದ್ ಯೂಸುಫ್ ಹೇಳಿದರು.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಇ–ಸ್ವತ್ತು ಮತ್ತು ಪಂಚತಂತ್ರ ತಂತ್ರಾಂಶ ಬಳಕೆ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಗ್ರಾಮ ಪಂಚಾಯಿತಿಗಳಿಗೆ ಅರ್ಜಿಗಳು ಬಂದರೆ ಸಮರ್ಪಕ ದಾಖಲೆಗಳು ಇವೆಯೇ ಇಲ್ಲವೇ ಎಂದು ಪರೀಕ್ಷಿಸಬೇಕು. ದಾಖಲೆಗಳನ್ನು ಲಗತ್ತಿಸಬೇಕು. ಸಕಾಲದಲ್ಲಿ ಅರ್ಜಿದಾರರ ಸಮಸ್ಯೆಗಳನ್ನು ಬಗೆ ಹರಿಸಬೇಕು. ಪಂಚತಂತ್ರ ತಂತ್ರಾಂಶದಲ್ಲಿ ಸಮಸ್ಯೆ ಕಳುಹಿಸುವಾಗ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತಿ, ಹೆಸರು, ಆರ್ಥಿಕ ವರ್ಷ, ಬಳಕೆದಾರ ಹೆಸರು, ಕಡ್ಡಾಯವಾಗಿ ನಮೂದಿಸಬೇಕು ಎಂದರು.

ಗ್ರಾಮ ಪಂಚಾಯಿತಿಗಳಲ್ಲಿ ಮುಟ್ಯೇಷನ್ ಮಾಡುವಾಗ ಆಗುವ ಲೋಪಗಳಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ನ್ಯಾಯಾಲಯ ಮೊರೆ ಹೋಗುವ ಪ್ರಕರಣಗಳು ಹೆಚ್ಚಾಗಲು ಕಾರಣವಾಗುತ್ತದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆಸ್ತಿಗಳು, ಕಟ್ಟಡ, ಖಾಲಿ ನಿವೇಶನ, ವಾರಸುದಾರರ ಕುರಿತು ಸಮರ್ಪಕ ಮೇಲುಸ್ತುವಾರಿ ಮಾಡಬೇಕು. 9ಎ ಮತ್ತು 11ಬಿ ದಾಖಲೆಗಳು ಪರಿಶೀಲಿಸಿ ಧೃಢಿಕರಿಸಿ. ಆಸ್ತಿ ವಿವಾದ ಸಂಬಂಧಿಸಿದಂತೆ ಅವರ ಹೆಸರಿನಲ್ಲಿ ಆಸ್ತಿ ನೋಂದಣಿ ಮಾಡುವಂತೆ ನ್ಯಾಯಾಲಯದಿಂದ ಆದೇಶ ಬಂದರೆ, ಏತನ್ಮಧ್ಯೆ ನ್ಯಾಯಾಲಯ ತೀರ್ಪಿನ ವಿರುದ್ಧ ತಕರಾರು ಅರ್ಜಿಗಳು ಸಲ್ಲಿಕೆಯಾದರೆ ಶೀಘ್ರವೇ ಹಿಮ್ಮಾಹಿತಿ ನೀಡಿ ಇಲ್ಲದಿದ್ದರೆ ನ್ಯಾಯಾಲಯಕ್ಕೆ ಮಾಹಿತಿ ನೀಡಿಲ್ಲ ಎಂದರೆ ನೀವೆ ನೇರ ಹೊಣೆಗಾರರು ಎಂದರು.

ಗ್ರಾಮಸ್ಥರು ಆಸ್ತಿಗೆ ಸಂಬಂಧಿಸಿದ ಭೂಮಿ ನೊಂದಣಿ, ಭೂ ಪರಿವರ್ತನೆ ಹಾಗೂ ಸಂಬಂಧಿಸಿದಂತೆ ತಕರಾರು ಅರ್ಜಿಗಳು ಸಲ್ಲಿಸಿದ್ದರೆ, ಅಂಥವರಲ್ಲಿ ಅಗತ್ಯ ದಾಖಲೆಗಳು ಇವೆಯೇ ಪರೀಕ್ಷಿಸಿ, ಇದ್ದರೆ ಜಿಲ್ಲಾಧಿಕಾರಿಗಳ ಅನುಮತಿಗೆ ಕಳುಹಿಸಿಕೊಡಿ ಎಂದರು.

ಗ್ರಾಮ ಪಂಚಾಯಿತಿಯಲ್ಲಿ ಅರ್ಜಿದಾರರ ಪ್ರಕರಣಗಳು ಕಾಯ್ದಿರಿಸಬೇಡಿ. ಕೂಡಲೇ ನಿಮ್ಮ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಲಿಂಗಸುಗೂರು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸೆಕ್ರೆಟರಿ, ಗಣಕಯಂತ್ರ ನಿರ್ವಾಹಕರು ಇದ್ದರು.

ಪ್ರತಿಕ್ರಿಯಿಸಿ (+)