ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯುತ್‍ ವಿತರಣಾ ಕೇಂದ್ರ ಸ್ಥಳಾಂತರ ಗುಮ್ಮ

ರೈತರ ಹಿತರಕ್ಷಣೆಗಿಂತ ಸಕ್ಕರೆ ಕಾರ್ಖಾನೆ ಹಿತ ಕಾಪಾಡಲು ಮುಂದಾದ ಜೆಸ್ಕಾಂ
–ಬಿ.ಎ. ನಂದಿಕೋಲಮಠ
Published : 13 ಸೆಪ್ಟೆಂಬರ್ 2024, 6:14 IST
Last Updated : 13 ಸೆಪ್ಟೆಂಬರ್ 2024, 6:14 IST
ಫಾಲೋ ಮಾಡಿ
Comments

ಲಿಂಗಸುಗೂರು: ತಾಲ್ಲೂಕಿನ ಆನೆಹೊಸೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್‍ ಪೂರೈಕೆಗೆ 132/11ಕೆವಿ ವಿದ್ಯುತ್‍ ವಿತರಣಾ ಉಪ ಕೇಂದ್ರ ಮಂಜೂರಾತಿ ಹಂತದಲ್ಲಿದೆ. ಮಂಜೂರಾತಿ ಹಂತದಲ್ಲಿ ಇರುವಾಗಲೇ ಸ್ಥಳಾಂತರದ ಶಂಕೆ ಕೇಳಿಬಂದಿದ್ದು ರೈತರ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ.

2023ರಲ್ಲಿ ತಾಲ್ಲೂಕಿನ ಆನೆಹೊಸೂರು, ಆನ್ವರಿ, ಗುಂತಗೋಳ ಗ್ರಾಮಗಳಲ್ಲಿ 110/11ಕೆವಿ ವಿದ್ಯುತ್‍ ವಿತರಣಾ ಉಪಕೇಂದ್ರ ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಈಚೆಗೆ ಜರುಗಿದ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ 110/11ಕೆವಿ ಬದಲು 132/11ಕೆವಿ ಮಾರ್ಪಡಿಸಿ ಸಂಪೂರ್ಣ ಯೋಜನಾ ವರದಿ ತಯಾರಿಕೆಗೆ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ.

ಈಗಾಗಲೇ ಈಚನಾಳ ಮತ್ತು ರೋಡಲಬಂಡ 33/11ಕೆವಿ ವಿದ್ಯುತ್‍ ಉಪ ಕೇಂದ್ರಗಳನ್ನು ಒಳಗೊಂಡು ಆನೆಹೊಸೂರು, ನೀರಲಕೇರಿ, ಬೆಂಡೋಣಿ, ಜಾವೂರು, ಗೊರೆಬಾಳ ಸುತ್ತಮುತ್ತಲ ಗ್ರಾಮಗಳ ಮನೆ, ಪಂಪಸೆಟ್‍, ನೀರಾವರಿ ಯೋಜನೆಗಳಿಗೆ ಗುಣಮಟ್ಟದ ವಿದ್ಯುತ್‍ ಪೂರೈಕೆಗೆ ನೀಲ ನಕ್ಷೆ ಸಿದ್ಧಪಡಿಸಿದೆ. 132/11ಕೆವಿ ಮಾರ್ಪಾಡು ಹಂತದಲ್ಲಿರುವಾಗ ಸ್ಥಳಾಂತರದ ಮಾತು ಕೇಳಿ ಬಂದಿದ್ದು ವಿಪರ್ಯಾಸ.

ರಾಂಪೂರ ನವಲಿ ಜಡಿ ಶಂಕರಲಿಂಗ ಏತ ನೀರಾವರಿ ಯೋಜನೆ ಎರಡು ಜಾಕವೆಲ್‍, ಮುದಗಲ್ಲ ಕುಡಿವ ನೀರು ಪೂರೈಕೆ ಯೋಜನೆ ಸೇರಿದಂತೆ ರೈತರ ಪಂಪಸೆಟ್‍, ಮನೆಗಳ ನಿರಂತರ ಜ್ಯೋತಿಗೆ ಗುಣಮಟ್ಟದ ವಿದ್ಯುತ್‍ ಪೂರೈಕೆಗೆ ಯೋಜನೆ ಸಿದ್ಧಗೊಂಡಿದೆ. ಈ ಹಂತದಲ್ಲಿ ರಾಜ್ಯ ಸರ್ಕಾರದ ಪ್ರಭಾವಿ ಸಚಿವರ ಆರ್.ಬಿ ಸೂಗರ್ಸ್‍ ಲಿಮಿಟೆಡ್‍ ಸಂಸ್ಥೆ ಈ ಕೇಂದ್ರ ಚಿಕ್ಕ ಉಪ್ಪೇರಿಗೆ ಸ್ಥಳಾಂತರಿಸಲು ಮನವಿ ಮಾಡಿದೆ.

ಖಾಸಗಿ ಸಕ್ಕರೆ ಕಾರ್ಖಾನೆಗಳು ಸ್ವಂತ ವಿದ್ಯುತ್‍ ಉತ್ಪಾದನೆ ಮಾಡಿಕೊಂಡು ಫ್ಯಾಕ್ಟರಿ ನಡೆಸಬೇಕು. ಆದರೆ, ಅಧಿಕಾರ ದುರ್ಬಳಕೆ ಮಾಡಿಕೊಂಡು ರೈತರ ಹಿತ ಕಡೆಗಣಿಸಿ ತಮ್ಮ ಸಂಸ್ಥೆಯ ಜಮೀನಿಗೆ 132/11 ಕೆವಿ ಸ್ಥಳಾಂತರಕ್ಕೆ ಒತ್ತಡ ಹೇರಲಾಗಿದೆ. ಸಚಿವರ ಕಂಪನಿಯ ಹಿತ ಕಾಪಾಡಲು ಜೆಸ್ಕಾಂ ಅಧಿಕಾರಿಗಳು ಸಹಕಾರ ನೀಡುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ ಎಂಬುದು ರೈತರ ಸಾಮೂಹಿಕ ದೂರು.

‘ರೈತರ ಹಿತದೃಷ್ಠಿಯಿಂದ ಆನೆಹೊಸೂರು ಗ್ರಾಮದ ಬಳಿಯೆ 132/11ಕೆವಿ ವಿದ್ಯುತ್‍ ವಿತರಣಾ ಕೇಂದ್ರ ಸ್ಥಾಪಿಸಬೇಕು. ರೈತರ, ಗ್ರಾಹಕರ ಹಿತ ಕಡೆಗಣಿಸಿ ಖಾಸಗಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ 132/11ಕೆವಿ ವಿದ್ಯುತ್‍ ವಿತರಣಾ ಉಪ ಕೇಂದ್ರ ಸ್ಥಳಾಂತರಿಸಿದರೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಶಿವಪುತ್ರಗೌಡ ಪಾಟೀಲ ಎಚ್ಚರಿಕೆ ನೀಡಿದ್ದಾರೆ.

ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬೆನ್ನಪ್ಪ ಕರಿಬಂಟನಾಳ ಸಂಪರ್ಕಿಸಿದಾಗ, ‘ಆರ್.ಬಿ ಸೂಗರ್ಸ್‍ ಲಿಮಿಟೆಡ್‍ ಕಂಪೆನಿ ತಮ್ಮ ಸಂಸ್ಥೆಗೆ ಪತ್ರ ಬರೆದುಕೊಂಡಿದ್ದು ನಿಜ. ಆನೆಹೊಸೂರು 132/11ಕೆವಿ ವಿದ್ಯುತ್‍ ವಿತರಣಾ ಕೇಂದ್ರ ಚಿಕ್ಕ ಉಪ್ಪೇರಿಗೆ ಸ್ಥಳಾಂತರಿಸಲು ಕೋರಿದ್ದಾರೆ. ಇನ್ನೂ ಪರಿಶೀಲನೆ ಹಂತದಲ್ಲಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT