ಶನಿವಾರ, ನವೆಂಬರ್ 23, 2019
18 °C
ಬಯಲು ಬಹಿರ್ದೆಸೆ ಮುಕ್ತವಾದ ಪ್ರಥಮ ಗ್ರಾಮ ತಲಮಾರಿಯಲ್ಲಿ ಅಭಿವೃದ್ಧಿ ಪರ್ವ

ಉದ್ಯೋಗ ಖಾತರಿ ಪರಿಣಾಮಕಾರಿ ಬಳಕೆ

Published:
Updated:
Prajavani

ರಾಯಚೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ರಾಯಚೂರು ತಾಲ್ಲೂಕಿನ ಗಡಿಗ್ರಾಮ ತಲಮಾರಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುತ್ತಿದ್ದು, ಗ್ರಾಮದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ.

2009 ರಲ್ಲಿ ತುಂಗಭದ್ರಾ ನದಿಯ ಪ್ರವಾಹದಲ್ಲಿ ಸಂಪೂರ್ಣ ಮುಳುಗಡೆಯಾಗಿದ್ದ ಗ್ರಾಮವು ಸಮಸ್ಯೆಗಳ ಆಗರವಾಗಿತ್ತು. ಬಯಲು ಬಹಿರ್ದೆಸೆಯಿಂದಾಗಿ ಗ್ರಾಮವು ಗಬ್ಬೇದ್ದು ಹೋಗಿತ್ತು. ಎಲ್ಲಿ ನೋಡಿದರೂ ಕಸದ ರಾಶಿ. ಓಣಿಯ ರಸ್ತೆಗಳೆಲ್ಲವೂ ಕೆಸರಿನ ಗದ್ದೆಗಳಂತೆ ಕಾಣುತ್ತಿದ್ದವು. ಈಗ ಚಿತ್ರಣ ಸಂಪೂರ್ಣ ಬದಲಾಗಿದೆ.

‘ಕುರುಬರ ಓಣಿಯಲ್ಲಿ 100 ಮೀಟರ್‌ನಷ್ಟು ಮಾತ್ರ ಸಿಸಿ ರಸ್ತೆ ಆಗುವುದು ಬಾಕಿ ಇದೆ. ರಸ್ತೆ ಜಾಗಕ್ಕೆ ಸಂಬಂಧಿಸಿದಂತೆ ಸ್ವಲ್ಪ ವ್ಯಾಜ್ಯ ನಡೆಯುತ್ತಿದೆ. ಗ್ರಾಮದಲ್ಲಿ ಇದೆಲ್ಲ ಸಾಮಾನ್ಯ. ಆದಷ್ಟು ಬೇಗನೆ ಎಲ್ಲರೂ ಒಂದಾಗಿ ಸಮಸ್ಯೆ ಪರಿಹರಿಸಿ ಆದೊಂದಿಷ್ಟು ರಸ್ತೆ ಮಾಡಿಸುತ್ತೇವೆ’ ಎಂದು ಗ್ರಾಮದ ನಿವಾಸಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಾಫರ್‌ ಅಲಿ ‘ಪ್ರಜಾವಾಣಿ’ ತಿಳಿಸಿದರು.

‘ಮನೆಗಳಲ್ಲಿ ಪ್ರವಾಹದ ನೀರು ನಿಂತು ಎಲ್ಲವೂ ಹಾಳಾಗಿ ಹೋಗಿತ್ತು. ಈಗ ಅದರ ಗುರುತು ಕೂಡಾ ಸಿಗುವುದಿಲ್ಲ. ಪಂಚಾಯಿತಿಯಿಂದ ಸಾಕಷ್ಟು ಕೆಲಸ ಮಾಡಿಸುತ್ತಿದ್ದೇವೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಪ್ಪಗೌಡ ವಿವರಿಸಿದರು.

‘ಕಡುಬಡವರು ಇರುವ ಓಣಿಗಳು ಕೊಳಗೇರಿಯಂತೆ ಕಾಣುತ್ತವೆ ಎಂದು ಎಲ್ಲರೂ ಸಾಮಾನ್ಯವಾಗಿ ಹೇಳುತ್ತಾರೆ. ಆದರೆ, ನಮ್ಮೂರಲ್ಲಿ ಅತಿಹೆಚ್ಚು ಶುಚಿತ್ವದಿಂದ ಇದ್ದಾರೆ ಹಾಗೂ ಶೌಚಾಲಯಗಳನ್ನು ಅವರೇ ಹೆಚ್ಚಿನ ಸಂಖ್ಯೆಯಲ್ಲಿ ಉಪಯೋಗಿಸುತ್ತಿದ್ದಾರೆ’ ಎಂದು ಗ್ರಾಮದ ಮುಖಂಡ ಎನ್‌.ರಾಮಪ್ಪ ಹೇಳಿದರು.

ಗ್ರಾಮ ಪಂಚಾಯಿತಿ ಕೇಂದ್ರ ತಲಮಾರಿಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಉದ್ಯೋಗ ಖಾತರಿ ಯೋಜನೆಯಡಿ ಸುಸಜ್ಜಿತವಾದ ನಾಲ್ಕು ಅಂಗನವಾಡಿಗಳನ್ನು ನಿರ್ಮಾಣ ಮಾಡಲಾಗಿದೆ. ಗ್ರಾಮದಲ್ಲಿ ತ್ಯಾಜ್ಯ ಸಂಗ್ರಹಿಸಿ, ವಿಲೇವಾರಿ ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪ್ರತಿ ಮನೆಗೂ ಶೌಚಾಲಯ, ಇಂಗುಗುಂಡಿಗಳಿವೆ. ಶಾಲೆಗೆ ಆವರಣ ಗೋಡೆ ಕಟ್ಟಲಾಗಿದೆ. ಖಾತರಿ ಯೋಜನೆಯಡಿ ಗೋದಾಮು ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಗ್ರಾಮಸ್ಥರೆಲ್ಲ ಒಟ್ಟಾಗಿ ಕೆಲಸ ಮಾಡಿಸಲು ಸಜ್ಜಾಗಿದ್ದಾರೆ.

ಗ್ರಾಮವು ಬಯಲು ಬಹಿರ್ದೆಸೆ ಮುಕ್ತವಾಗಲು ಸ್ವಚ್ಛಗ್ರಹಿ ಎಂದು ನೇಮಿಸಿರುವ ಈರಮ್ಮ ಅವರು ಪಾತ್ರ ಬಹಳ ಮುಖ್ಯ. ಜನರನ್ನು ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹಿಸಿ, ಬಯಲಿಗೆ ಹೋಗದಂತೆ ತಡೆದಿದ್ದಾರೆ. ಅನೇಕ ಜನರು ನಿಂದಿಸಿದರೂ ಹಿಂದೇಟು ಹಾಕದೆ ಈರಮ್ಮ ಕೆಲಸ ಮಾಡಿದ್ದಾರೆ ಎಂದು ಗ್ರಾಮದ ಜನರು ಈರಮ್ಮ ಅವರನ್ನು ಹೊಗಳುತ್ತಾರೆ.

ಗ್ರಾಮ ಪಂಚಾಯಿತಿ ಪುನರ್‌ ರಚನೆಗೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿದ್ದು, ಪಂಚಾಯಿತಿಗೆ ಸದಸ್ಯರು, ಅಧ್ಯಕ್ಷರು ಇಲ್ಲ. ಗ್ರಾಮಸ್ಥರೆಲ್ಲ ಒಟ್ಟಾಗಿ ಅಧಿಕಾರಿಗಳ ನೆರವಿನಿಂದ ಯೋಜನೆ ಅನುಷ್ಠಾನ ಮಾಡಿಸುತ್ತಿದ್ದಾರೆ. 

ಪ್ರತಿಕ್ರಿಯಿಸಿ (+)