ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ದೇವರ ಹೆಸರಲ್ಲಿ ಶಾಲಾ ಜಾಗ ಒತ್ತುವರಿ

ಪದವಿ ಪೂರ್ವ ಕಾಲೇಜಿನ ಕಟ್ಟಡದಲ್ಲಿ ಮಕ್ಕಳಿಗೆ ಪಾಠ
Published 13 ಆಗಸ್ಟ್ 2023, 6:23 IST
Last Updated 13 ಆಗಸ್ಟ್ 2023, 6:23 IST
ಅಕ್ಷರ ಗಾತ್ರ

ರಾಯಚೂರು: ಇಲ್ಲಿನ ಎಲ್‌.ಬಿ.ಎಸ್ ನಗರದ ಸರ್ಕಾರಿ ಪ್ರೌಢಶಾಲಾ ನಿರ್ಮಾಣಕ್ಕೆ ರಾಯಚೂರು ನಗರಾಭಿವೃಧ್ಧಿ ಪ್ರಾಧಿಕಾರ ನೀಡಿದ ನಿವೇಶನವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ದೇವರ ಹೆಸರಲ್ಲಿ ಶಾಲೆಯ ಜಾಗ ಕಬಳಿಸುವ ಪ್ರಯತ್ನ ನಡೆದಿರುವುದು ಶಾಲಾ ಆಡಳಿತ ಮಂಡಳಿಗೆ ತಲೆನೋವಾಗಿದೆ.

ಎಲ್‌ಬಿಎಸ್ ನಗರದ ಅಲ್ಲಮಪ್ರಭು ಕಾಲೊನಿಯ ಸರ್ಕಾರಿ ಪ್ರೌಢಶಾಲೆ ನಿರ್ಮಾಣಕ್ಕೆ ಅದೇ ಬಡಾವಣೆಯ ಚಂದ್ರಬಂಡಾ ರಸ್ತೆಯಲ್ಲಿರುವ ವಿಶ್ವನಾಥ ಕಾಲೊನಿಯಲ್ ಸರ್ವೆ ನಂಬರ್ 384/1ರ ಐದು ಎಕರೆ ಸಿ.ಎ ಸೈಟನ್ನು ಶಿಕ್ಷಣ ಇಲಾಖೆ 2017ರ ಏಪ್ರಿಲ್ 20ರಂದು ಪ್ರಾಧಿಕಾರಕ್ಕೆ ₹6,61 343 ಪಾವತಿಸಿ ಮುಖ್ಯೋಪಾಧ್ಯಾಯ ಮಕ್ಬೂಲ್ ಅಹ್ಮದ್ ಅವರ ಹೆಸರಿನಲ್ಲಿ ನೋಂದಣಿ ಮಾಡಿಕೊಂಡಿದೆ. ಜಿ.ಪಂ ಸಿಇಒ ಆಗಿದ್ದ ಕೂರ್ಮರಾವ್ ಅವರು ಶಿಕ್ಷಣದ ಮೇಲಿನ ಕಾಳಜಿಯಿಂದ 2017ರಲ್ಲಿಯೇ ಸಿ.ಎ ಸೈಟ್ ಮಂಜೂರು ಮಾಡಿದ್ದರು.

ಭೂಗಳ್ಳರು ನಿವೇಶನದ ಬಳಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿ, ನಂತರ ಅಲ್ಲಿ ಶಿವಲಿಂಗ ಇಟ್ಟು ಒತ್ತುವರಿ ಮಾಡಿಕೊಳ್ಳಲು ಹುನ್ನಾರ ನಡೆಸಿದ್ದಾರೆ. ಶಾಲೆಯ ಆಡಳಿತ ಮಂಡಳಿಯವರ ಗಮನಕ್ಕೆ ಬಂದು ಪ್ರಶ್ನೆ ಮಾಡಿದರೆ ಗುಡಿಯ ಜಾಗ ಎಂದು ಕ್ಯಾತೆ ತೆಗೆಯುತ್ತಿದ್ದಾರೆ. ನಿವೇಶನಕ್ಕೆ ಬೇಲಿ ಹಾಕಲು ಸಹ ಭೂಗಳ್ಳರು ಅಡ್ಡಿಪಡಿಸುತ್ತಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ 2023ರ ಏಪ್ರಿಲ್ 13ರಂದು ಶಾಲೆಯ 6 ಕೊಠಡಿಗಳ ನಿರ್ಮಾಣಕ್ಕಾಗಿ ಮುಂದಾಗಿದೆ. ಕೆಲವರು ಇದಕ್ಕೆ ಅಡ್ಡಿಪಡಿಸಿದ ಕಾರಣ ಪ್ರಕರಣ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ಕಟ್ಟೆ ಏರಿದೆ. ರಾಜಕೀಯ ಮುಖಂಡರು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿ ತಾತ್ಕಾಲಿಕ ಶಮನ ಮಾಡಿದ್ದರು. ಆದರೆ ಇದುವರೆಗೂ ಒತ್ತುವರಿ ತಡೆಯಲು ಆಗಿಲ್ಲ.

‘ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಒತ್ತುವರಿ ಮಾಡಿಕೊಂಡವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಶಾಲೆ ನಿರ್ಮಾಣಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಶಾಲೆಯ ಎಲ್ಲ ಮಕ್ಕಳ ಪಾಲಕರೊಂದಿಗೆ ಧರಣಿ ನಡೆಸಲಾಗುವುದು’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನರಸಿಂಹಲು ಎಚ್ಚರಿಸಿದ್ದಾರೆ.

ಸದ್ಯ ಚಂದ್ರಬಂಡಾ ಮಾರ್ಗದಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮಹಿಳಾ ಪದವಿ ಪೂರ್ವ ಕಾಲೇಜಿನ ಕಟ್ಟಡದಲ್ಲಿ ಅಲ್ಲಮಪ್ರಭು ಕಾಲೊನಿಯ ಪ್ರೌಢಶಾಲೆ ನಡೆಯುತ್ತಿದೆ. ಈ ಶಾಲೆಯಲ್ಲಿ ಪ್ರಸ್ತುತ 8ನೇ ತರಗತಿಯಲ್ಲಿ 86, 9ನೇ ತರಗತಿ 60 ಹಾಗೂ 10ನೇ ತರಗತಿಯ 47 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಕೂಲಿ ಮಾಡುವವರ ಮಕ್ಕಳು ಹಾಗೂ ಅಲ್ಪಸಂಖ್ಯಾತರ ಮಕ್ಕಳೇ ಹೆಚ್ಚಿದ್ದಾರೆ. ಹೀಗಾಗಿ ‘ಶಿಕ್ಷಣ ಇಲಾಖೆ ಆದಷ್ಟು ಬೇಗ ಶಾಲಾ ಕಟ್ಟಡ ನಿರ್ಮಾಣ ಮಾಡಬೇಕು’  ಎಂದು ಶಿಕ್ಷಣ ಪ್ರೇಮಿ ಸಾದಿಕ್ ಪಾಶಾ ಹೇಳುತ್ತಾರೆ.

‘ಸರ್ಕಾರಿ ಪ್ರೌಢಶಾಲಾ ನಿರ್ಮಾಣಕ್ಕೆ ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳು ಸಹಕರಿಸಬೇಕಿದೆ. ಆದರೆ ಬಡಾವಣೆ ವ್ಯಾಪ್ತಿಯ ವಾರ್ಡ್ ನಂಬರ್ 31ರ ನಗರಸಭೆ ಸದಸ್ಯೆ, ನಗರ ಶಾಸಕ ಡಾ.ಶಿವರಾಜ ಪಾಟೀಲ ಅವರ ಗಮನಕ್ಕೂ ತರಲಾಗಿದೆ. ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಆಸಕ್ತಿ ತೋರಿಸುತ್ತಿಲ್ಲ ಎಂದು ಪಾಲಕರು ಆರೋಪಿಸುತ್ತಾರೆ. 

ರಾಯಚೂರಿನ ಹಳೆಯ ಆಶ್ರಯ ಕಾಲೊನಿಯಲ್ಲಿನ ಅಲ್ಪಸಂಖ್ಯಾತರ ಇಲಾಖೆಯ ಮಹಿಳಾ ಪದವಿ ಪೂರ್ವ ಕಾಲೇಜಿನ ಕಟ್ಟಡದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಲಮಪ್ರಭು ಕಾಲೊನಿ ಶಾಲೆಯ ವಿದ್ಯಾರ್ಥಿಗಳು
ರಾಯಚೂರಿನ ಹಳೆಯ ಆಶ್ರಯ ಕಾಲೊನಿಯಲ್ಲಿನ ಅಲ್ಪಸಂಖ್ಯಾತರ ಇಲಾಖೆಯ ಮಹಿಳಾ ಪದವಿ ಪೂರ್ವ ಕಾಲೇಜಿನ ಕಟ್ಟಡದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಲಮಪ್ರಭು ಕಾಲೊನಿ ಶಾಲೆಯ ವಿದ್ಯಾರ್ಥಿಗಳು
ಶಾಲೆಯ ಜಾಗ ಒತ್ತುವರಿ ಮಾಡಿರುವುದು ಅಪರಾಧ. ಈಗಾಗಲೇ ಪೊಲೀಸರಿಗೆ ದೂರು ಕೊಡಲಾಗಿದೆ. ಒಂದು ವಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಅತಿಕ್ರಮಣ ತೆರವಿಗೆ ಪ್ರಯತ್ನಿಸಲಾಗುವುದು. –
-ಚಂದ್ರಶೇಖರ ಭಂಡಾರಿ ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿ
ಶಾಲೆಯ ಸಮಗ್ರ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. ಶಿಕ್ಷಣ ಇಲಾಖೆಯಿಂದ ಮಾಹಿತಿ ಪಡೆದು ಒತ್ತುವರಿ ತೆರವುಗೊಳಿಸಲು ಸೂಚನೆ ನೀಡಲಾಗುವುದು.
ರಾಹುಲ್ ತುಕಾರಾಂ ಪಾಂಡ್ವೆ ಜಿ.ಪಂ. ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT