ಶುಕ್ರವಾರ, ಜುಲೈ 30, 2021
28 °C
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಪ್ರತಿಭಟನೆ

ಸರ್ಕಾರದಿಂದ ರೈತ ವಿರೋಧಿ ಕಾಯ್ದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಸಿರುಶಾಲು ಹಾಕಿಕೊಂಡು ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದರೂ, ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯಿಂದ ಸೋಮವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಭೂಸುಧಾರಣೆ ಕಾಯ್ದೆಯ ತಿದ್ದುಪಡಿ ಮಾಡಿರುವುದರ ವಿರುದ್ಧ ಘೋಷಣೆಗಳನ್ನು ಕೂಗಿದ ರೈತರು, ಕಾಯ್ದೆಯ ನಕಲು ಕರಡು ಪ್ರತಿಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ರೈತರಿಗೆ ಮಾರಕವಾಗುವ ಕಾಯ್ದೆಗಳೇ ಜಾರಿಗೆ ಬರುತ್ತಿವೆ. ಜೂನ್‌ 12 ರಂದು ಭೂಸುಧಾರಣೆ ಕಾಯ್ದೆ ತಿದ್ದುಪಡಿಗಾಗಿ ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ಸಣ್ಣ, ಅತೀಸಣ್ಣ ರೈತರನ್ನು ಒಕ್ಕಲೆಬ್ಬಿಸಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಸ್ವರ್ಗಸೋಪಾನ ನಿರ್ಮಾಣ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಸಂಘದ ರಾಜ್ಯ ಘಟಕದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಅಕ್ರೋಶ ವ್ಯಕ್ತಪಡಿಸಿದರು.

ಭೂಮಿತಿಯನ್ನು ಹೆಚ್ಚಿಸಿ ಬಹುರಾಷ್ಟ್ರೀಯ ಕಂಪೆನಿಗಳು ರೈತರಿಂದ ಭೂಮಿ ವಶಪಡಿಸಿಕೊಳ್ಳಲು ಅನುಕೂಲ ಮಾಡಿದ್ದಾರೆ. ಎಪಿಎಂಸಿ ತಿದ್ದುಪಡಿ ಕಾಯ್ದೆ ಮತ್ತು ಭೂಸುಧಾರಣೆ ತಿದ್ದುಪಡಿ ಕಾಯ್ದೆಗಳನ್ನು ತಕ್ಷಣವೇ ಕೈಬಿಡಬೇಕು. ಇಲ್ಲದಿದ್ದರೆ ಕೋವಿಡ್‌ನಿಂದಾಗಿ ವಿಧಿಸಿದ 144 ಸೆಕ್ಷನ್‌ ಮುಗಿದ ಬಳಿಕ ರಾಜ್ಯದಾದ್ಯಂತ ಜನಾಂದೋಲನ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸದ್ಯಕ್ಕೆ ಸಾಂಕೇತಿಕವಾಗಿ ಕರುಡು ಪ್ರತಿಯನ್ನು ಸುಟ್ಟು ಎಚ್ಚರಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಉಗ್ರಸ್ವರೂಪದಲ್ಲಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಸೂಗುರಯ್ಯಸ್ವಾಮಿ, ಬೂದಯ್ಯಸ್ವಾಮಿ ಗಬ್ಬೂರು, ಮಲ್ಲಣ್ಣ ದಿನ್ನಿ, ಬಸವರಾಜ ಪಾಟೀಲ, ಲಿಂಗಾರೆಡ್ಡಿ ಪಾಟೀಲ, ಸಿದ್ದರಾಮಯ್ಯಸ್ವಾಮಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.