ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರ ಬೆಳೆಗಳಿಗೆ ಲಾಭದಾಯಕ ಬೆಲೆ ದೊರೆಯಬೇಕು’

ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಘಟಕದ ಸಲಹಾ ಸಮಿತಿ ಸಭೆ
Last Updated 8 ಜುಲೈ 2022, 13:44 IST
ಅಕ್ಷರ ಗಾತ್ರ

ರಾಯಚೂರು: ರೈತರು ಬೆಳೆಯುವ ಬೆಳೆಗಳಿಗೆ ಲಾಭದಾಯಕ ಬೆಲೆ ದೊರೆಯಬೇಕು. ಆಗ ಮಾತ್ರ ಅವರ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಂತಾಗುತ್ತದೆ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದರು.

ನಗರದ ಕೃಷಿ ಮಹಾವಿದ್ಯಾಲಯದ ಸೆಮಿನಾರ್ ಸಭಾಂಗಣದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಹಾಗೂ ಕರ್ನಾಟಕ ಕೃಷಿ ಬೆಲೆ ಆಯೋಗದಿಂದ ಶುಕ್ರವಾರ ಏರ್ಪಡಿಸಿದ್ದ ‘ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಘಟಕದ ಸಲಹಾ ಸಮಿತಿ’ಯ ಸಭೆಯಲ್ಲಿ ಮಾತನಾಡಿದರು.

ಕೃಷಿ ಉತ್ಪನ್ನಗಳ ಸಾಗುವಳಿಗಾಗಿ ರೈತರು ಬೀಜ, ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು ಮುಂತಾದವುಗಳಿಗಾಗಿ ಹೇರಳವಾಗಿ ಹಣ ಖರ್ಚು ಮಾಡುತ್ತಾರೆ. ಸಾಗುವಳಿ ಮಾಡಿದ ಕೃಷಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾದಾಗ ಮಾತ್ರ ಮುಂದಿನ ಬೆಳೆಯ ಸಾಗುವಳಿ, ಕುಟುಂಬದ ನಿರ್ವಹಣೆ ಹಾಗೂ ಆರ್ಥಿಕವಾಗಿ ಸದೃಢರಾಗಲು ಅನುಕೂಲವಾಗುತ್ತದೆ ಎಂದರು.

ರೈತರು ಬೆಳೆದ ಬೆಳೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಕರ್ನಾಟಕ ಕೃಷಿ ಬೆಲೆ ಆಯೋಗದ ವತಿಯಿಂದ ವೈಜ್ಞಾನಿಕ ಶಿಫಾರಸುಗಳನ್ನು ಮಾಡಿದೆ. ಜೊತೆಗೆ ರೈತರ ಏಳಿಗೆಗಾಗಿ ವಿವಿಧ ಇಲಾಖೆಗಳು ಶ್ರಮಿಸಬೇಕು ಎಂದು ಹೇಳಿದರು.

ಎಣ್ಣೆಕಾಳು ಉತ್ಪಾದನಾ ಪ್ರಮಾಣ ಹಾಗೂ ಇಳುವರಿ ಮಟ್ಟವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ವಿಸ್ತೃತ ವರದಿ ಕೇಳಿದ್ದು, ಅದನ್ನು ಸಹ ಆದಷ್ಟು ಬೇಗನೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಸೋಯಾಬಿನ್ ಸೇರಿದಂತೆ ವಿವಿಧ ತಳಿಯ ಬೆಳೆಗಳ ಬಿತ್ತನೆ ಪ್ರಮಾಣವನ್ನು ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿ ವಲಯಕ್ಕೆ ಉತ್ತೇಜನ ನೀಡಲಾಗುತ್ತದೆ. ಅಲ್ಲದೆ ಕೃಷಿ ವಿಶ್ವವಿದ್ಯಾಲಯಗಳು ರೈತರ ಪರ ಸರ್ಕಾರಕ್ಕೆ ಸಲಹೆ ನೀಡಬೇಕೆಂದು ಹೇಳಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್. ಮಾತನಾಡಿ, ಕೃಷಿ ಇಲಾಖೆಯಿಂದ ದೊರೆಯುವ ಸರ್ಕಾರದ ವಿವಿಧ ಯೋಜನೆಗಳನ್ನು ರೈತರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.

ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಸತ್ಯನಾರಾಯಣ ರಾವ್, ಕರ್ನಾಟಕ ಕೃಷಿ ಬೆಲೆ ಆಯೋಗದ ಸದಸ್ಯ ಕೃಷ್ಣೇಗೌಡ, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸ ಡಾ.ಅಮೃತಾ ಟಿ.ಜೋಷಿ, ಜಿ.ಬಿ.ಲೋಕೇಶ್, ರೈತ ಸದಸ್ಯರಾದ ಸಿದ್ದರೆಡ್ಡಿ, ವೀರಭದ್ರಪ್ಪ, ಮಲ್ಲಿಕಾರ್ಜುನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT