ಭಾನುವಾರ, ಮೇ 16, 2021
28 °C

ರೈತ ವಿರೋಧಿ ಬಿಜೆಪಿಗೆ ಮತ ನೀಡಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೃಷಿ ತಿದ್ದುಪಡಿ ಕಾಯ್ದೆ ಜಾರಿಗೆ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಸ್ಪಂದಿಸದೇ ಇಂಧನ, ಅಡುಗೆ ಅನಿಲ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಮಾಡಿ ರೈತ, ಕೃಷಿ ಜನವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿ ಪಕ್ಷಕ್ಕೆ ತಕ್ಕಪಾಠ ಕಲಿಸಬೇಕು ಎಂದು ಸಂಯುಕ್ತ ಕಿಸಾನ್ ಒಕ್ಕೂಟದ ಮುಖಂಡ ಚಾಮರಸ ಮಾಲಿಪಾಟೀಲ ಮನವಿ ಮಾಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ದಿನಬಳಕೆ, ಅಡುಗೆ ಅನಿಲದ ಜೊತೆಗೆ ಈಗ ರಸಗೊಬ್ಬರ, ಟ್ರ್ಯಾಕ್ಟರ್ ದರ ಏರಿಕೆ ರೈತ, ಕೃಷಿ, ವಿರೋಧಿ ನೀತಿ ಅನುಸರಿಸುತ್ತಿದ್ದು, ಕಾರ್ಪೋರೇಟ್ ಕಂಪನಿ ಪರ ಆಡಳಿತ ನಡೆಸುತ್ತಿದೆ. ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟನಿರತ 300 ರೈತರು ಸಾವನ್ನಪಿದ್ದರೂ ಪ್ರಧಾನಿ ಮೋದಿ ಸೇರಿ ಬಿಜೆಪಿ ನಾಯಕರು ಸಂತಾಪ ಸೂಚಿಸಿಲ್ಲ. ಮಸ್ಕಿಯಲ್ಲಿ ಫಸಲ್ ಭೀಮಾ ಯೋಜನೆಯಡಿ ರೈತರಿಗೆ ವಿಮಾ ಹಣ ಪಾವತಿಸಿಲ್ಲ ಈಗ ಚುನಾವಣೆ ಗೆಲ್ಲಲು ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅಭಿವೃದ್ಧಿ ಪರ ಮಾತನಾಡದೇ ಇಡೀ ಕ್ಷೇತ್ರದಲ್ಲಿ ಭ್ರಷ್ಟಾಚಾರ ಸಂಘಟನೆ ಮಾಡಿಕೊಂಡಿದ್ದಾರೆ. ಎನ್ಆರ್ ಬಿಸಿ 5ಎ ಕಾಲುವೆ ಬಗ್ಗೆ ಹೋರಾಟ ಮಾಡುತ್ತಿದ್ದರೂ ಸ್ಪಂದನೆಯಿಲ್ಲ. ನವಲಿ ಜಲಾಶಯ ಹೆಸರಿಗೆ ಘೋಷಣೆ ಮಾಡಿ ಕೈ ತೊಳೆದುಕೊಂಡಿದೆ. ಅನುದಾನ ನೀಡುತ್ತಿಲ್ಲ. ಭೂಸ್ವಾಧೀನ ಪ್ರಕ್ರಿಯೆಗೂ ಚಾಲನೆ ನೀಡಿಲ್ಲ ಚುನಾವಣೆಗಳಿಗೆ ಖರ್ಚು ಮಾಡಲು ಹಣವಿದೆ ಕಾಲುವೆ, ಜಲಾಶಯ ನಿರ್ಮಾಣಕ್ಕೆ ಹಣವಿಲ್ಲ ಎಂದು ಟೀಕಿಸಿದರು.

ಶ್ರೀ ರಾಮುಲು ಈಹಿಂದೆ ತನ್ನ ಸ್ವಂತ ಪಕ್ಷ ಕಟ್ಟಿ ಇಲ್ಲಿನ ನೀರಾವರಿ ಸಮಸ್ಯೆ ಬಗ್ಗೆ ಪಾದಯಾತ್ರೆ ಮಾಡಿದ್ದರು. ಈಗ ತಮ್ಮದೇ ಸರ್ಕಾರವಿದ್ದರೂ 5ಎ ಕಾಲುವೆ ಬಗ್ಗೆ ಸ್ಪಂದಿಸುತ್ತಿಲ್ಲ. ಪ್ರತಾಪಗೌಡರು ಹಣ ಹಾಗೂ ಮಂತ್ರಿ ಸ್ಥಾನದ ಆಮಿಷಕ್ಕೆ ಒಳಗಾಗಿ ಪಕ್ಷಾಂತರ ಮಾಡಿದ್ದು ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಹಣ ಖರ್ಚು ಮಾಡಿ ಗೆಲ್ಲಬಹುದು ಎನ್ನುವ ಧೋರಣೆಯಿಂದ ಸಂವಿಧಾನ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿಗೆ ಮತ ಹಾಕಬಾರದು. ರೈತ ವಿರೋಧಿ ಬಿಜೆಪಿಗೆ ಮತ ಹಾಕಿದ್ದರೆ ರೈತರಿಗೆ ಅವಮಾನ ಮಾಡಿದಂತೆ. ಈ ಬಗ್ಗೆ ರೈತರಿಗೆ ಮನ ಒಲಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.

ಮಲ್ಲಣ್ಣ ದಿನ್ನಿ, ಆರ್.ಎಸ್.ಮಠ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.