ಭಾನುವಾರ, ಸೆಪ್ಟೆಂಬರ್ 26, 2021
28 °C
ಸಗಮಕುಂಟ: ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಗ್ರಹ

ಫಲಾನುಭವಿಗಳಿಗೆ ಹಣ ಮಂಜೂರು ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಸಗಮಕುಂಟ (ಶಕ್ತಿನಗರ): ‘ಸರ್ಕಾರದ ವಿವಿಧ ಯೋಜನೆಗಳಿಂದ ಮಂಜೂರಾದ ಮನೆಗಳನ್ನು ಸಾಲ ಮಾಡಿ ಕಟ್ಟಿಕೊಳ್ಳುತ್ತಿದ್ದಾರೆ. ಫಲಾನುಭವಿಗಳಿಗೆ ಹಣ ಮಂಜೂರು ಮಾಡಿ‘ ಎಂದು ಸಗಮಕುಂಟ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮರೆಡ್ಡಿ ಯರಗುಂಟ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.

ಬಸವ ವಸತಿ ಯೋಜನೆ ಸೇರಿ ಇನ್ನಿತರ ಯೋಜನೆಗಳಲ್ಲಿ ಮಂಜೂರಾದ ಮನೆಗಳ ಹಣವನ್ನು ಹಂತ ಹಂತವಾಗಿ ಬಿಡುಗೊಡೆಗೊಳಿಸಿ ಫಲಾನುಭವಿಗಳ ಕುಟುಂಬಕ್ಕೆ ಅನುಕೂಲ ಮಾಡಿಕೊಡಬೇಕು.

ಗ್ರಾಮದಲ್ಲಿ ಕೆಲ ಓಣಿಗಳ ಮನೆಗಳಲ್ಲಿ ನಳಗಳು ಇವೆ. ಆದರೆ, ನೀರೇ ಬರುತ್ತಿಲ್ಲ. ಆ ಓಣಿಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಜೊತೆಗೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿ, ಶುದ್ಧ ನೀರಿನ ವ್ಯವಸ್ಥೆ ಒದಗಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಶಿವಪ್ಪ ಮಮಾಡದೊಡ್ಡಿ ಅವರು ಸಭೆಯಲ್ಲಿ ಮನವಿ ಮಾಡಿದರು.

ಸಾಕಷ್ಟು ವಿದ್ಯುತ್ ಕಂಬಗಳು ದುಸ್ಥಿತಿಯಲ್ಲಿವೆ. ಈ ಬಗ್ಗೆ ಜೆಸ್ಕಾಂ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ದುರಸ್ತಿಗೆ ಮುಂದಾಗುತ್ತಿಲ್ಲ. ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳುವಂತೆ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಶಂಕ್ರಪ್ಪ , ಶಿವಲಿಂಗಪ್ಪ ಅವರು ಒತ್ತಾಯಿಸಿದರು.

ಕೊರ್ತಕುಂದ ಏತ ನೀರಾವರಿ ಯೋಜನೆಯಲ್ಲಿ ಅಳವಡಿಸಿದ ವಿದ್ಯುತ್‌ ಪರಿವರ್ತಕ ಕೆಟ್ಟು ಹೋಗಿದೆ. ಅದನ್ನು ದುರಸ್ತಿಗೊಳಿಸಬೇಕು. ಬಿಸಿಯೂಟ ಕಟ್ಟಡದ ಅನುದಾನ ಮಂಜೂರು ಮಾಡಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ರುದ್ರಭೂಮಿ ಸಮಸ್ಯೆ, ಸಮುದಾಯ ಭವನ ದುರಸ್ತಿ, ಸಿಸಿರಸ್ತೆ , ಚರಂಡಿ ನಿರ್ಮಾಣ ಕುರಿತು ಗ್ರಾಮ ಪಂಚಾಯಿತಿ ಸದಸ್ಯರಾದ ಹನುಮಂತು ಕೊರ್ತಕುಂದ, ರಾಮಪ್ಪ ಸಗಮಕುಂಟ, ತಿಮ್ಮಪ್ಪ ಸಗಮಕುಂಟ ಅವರು ಸಭೆಯಲ್ಲಿ ಚರ್ಚಿಸಿದರು.

ಪಿಡಿಒ ರೇಣುಕಾಮ್ಮ ಮಾತನಾಡಿ, 15ನೇ ಹಣಕಾಸು ಯೋಜನೆ ಅಡಿಯಲ್ಲಿ ₹ 45 ಲಕ್ಷ ಅನುದಾನ ಮಂಜೂರು ಆಗಿದೆ. ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ₹ 2.29 ಲಕ್ಷ ಅನುದಾನದಲ್ಲಿ ಪ್ರತಿಯೊಂದು ಗ್ರಾಮದ ವಿದ್ಯುತ್‌ ಕಂಬಗಳಲ್ಲಿ ವಿದ್ಯುತ್ ದೀಪಗಳು ಅಳವಡಿಸಬಹುದು ಎಂದರು.

 ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶ್ರೀನಿವಾಸ, ನಾಗರಾಜ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.