ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಧನೂರಿನ ಪಿಯು ಕಾಲೇಜಿಗೆ ‘ಆದರ್ಶ ವಿಜ್ಞಾನ ಕಾಲೇಜು’ ಗರಿ

ಬಡ ವಿದ್ಯಾರ್ಥಿಗಳಿಗೆ ವರದಾನ ಸಿಂಧನೂರಿನ ಪಿಯು ಕಾಲೇಜು
Published 12 ಜೂನ್ 2024, 6:19 IST
Last Updated 12 ಜೂನ್ 2024, 6:19 IST
ಅಕ್ಷರ ಗಾತ್ರ

ಸಿಂಧನೂರು: ರಾಯಚೂರು ಜಿಲ್ಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಅತ್ಯಧಿಕ ವಿದ್ಯಾರ್ಥಿಗಳನ್ನು ಹೊಂದಿರುವ ಸಿಂಧನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ರಾಜ್ಯ ಸರ್ಕಾರ ಆಯ್ಕೆ ಮಾಡಿರುವ ಆದರ್ಶ ವಿಜ್ಞಾನ ಕಾಲೇಜು ಪಟ್ಟಿಗೆ ಸೇರ್ಪಡೆಯಾಗಿರುವುದು ವಿಶೇಷವಾಗಿದೆ.

ಎಸ್‌ಎಸ್‌ಎಲ್‌ಸಿ ಮುಗಿದಾಕ್ಷಣ ಪಿ.ಯು.ಸಿ. ವಿಜ್ಞಾನ ಕಾಲೇಜು ಪ್ರವೇಶ ಬಯಸುವ ವಿದ್ಯಾರ್ಥಿಗಳು ಕನಿಷ್ಠ ₹40 ಸಾವಿರದಿಂದ ₹ 50 ಸಾವಿರದವರೆಗೆ ಖಾಸಗಿ ಕಾಲೇಜುಗಳಿಗೆ ಶುಲ್ಕ ಪಾವತಿಸಬೇಕಾಗುತ್ತಿದೆ. ಆದರೆ, ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೇವಲ ₹1,000 ಪಾವತಿಸಿದರೆ ಸಾಕು ಪ್ರವೇಶ ಲಭಿಸುತ್ತದೆ.

ಇಲ್ಲಿ ಪ್ರಸಕ್ತ ವರ್ಷ 175 ವಿದ್ಯಾರ್ಥಿಗಳು ಪ್ರಥಮ ಪಿ.ಯು.ಸಿ. ವಿಜ್ಞಾನ ತರಗತಿಗೆ ಪ್ರವೇಶ ಪಡೆದಿದ್ದಾರೆ. ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರವೇಶಕೊಡುವಂತೆ ರಾಜಕಾರಣಿಗಳು, ಸಂಘ–ಸಂಸ್ಥೆಗಳ ಮುಖಂಡರು ಮಾಡುತ್ತಿರುವ ಶಿಫಾರಸಿಗೆ ಪ್ರಾಚಾರ್ಯರು ಉತ್ತರಕೊಡಲು ಹೆಣಗಾಡಬೇಕಾಗಿದೆ.

ಬೇಡಿಕೆ ಹೆಚ್ಚಳದ ಗುಟ್ಟೆನು?:

2018ರಲ್ಲಿ ಪಿ.ಯು.ಸಿ. ವಿಜ್ಞಾನ ತರಗತಿಗೆ ವಿದ್ಯಾರ್ಥಿಗಳೇ ಇರಲಿಲ್ಲ. ಆ ವೇಳೆ ಪ್ರಭಾರ ಪ್ರಾಚಾರ್ಯರಾಗಿ ವರ್ಗವಾಗಿ ಬಂದ ಡಾ.ಎಸ್.ಶಿವರಾಜ ತಾಲ್ಲೂಕಿನ 50 ಪ್ರೌಢಶಾಲೆಗೆ ಭೇಟಿ ಕೊಟ್ಟು ತಮ್ಮ ಕಾಲೇಜಿನಲ್ಲಿರುವ ಸೌಲಭ್ಯ ಹಾಗೂ ಕನಿಷ್ಠ ಶುಲ್ಕವಿರುವ ಬಗ್ಗೆ ಮಾಹಿತಿ ನೀಡಿದರು.

2019ರಲ್ಲಿ ಕೇವಲ 14 ವಿದ್ಯಾರ್ಥಿಗಳಿಂದ ಪ್ರಾರಂಭವಾದ ವಿಜ್ಞಾನ ವಿಭಾಗವು 2020ರಲ್ಲಿ 57, 2021ರಲ್ಲಿ 80, 2022ರಲ್ಲಿ 110, 2023ರಲ್ಲಿ 135 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿತ್ತು. ಪ್ರಸ್ತುತ ವರ್ಷ 175 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ.

ಬೇಸಿಗೆ ತರಗತಿಗಳನ್ನು ನಡೆಸುವುದು, ಪಾಲಕರ ಸಭೆ, ನಿರಂತರ ಕಿರುಪರೀಕ್ಷೆ ನಡೆಸುವ ವಿಷಯ ಎಲ್ಲ ವಿದ್ಯಾರ್ಥಿಗಳಿಗೆ ತಿಳಿದಿದೆ. ಹೀಗಾಗಿ ಸಹಜವಾಗಿಯೇ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆದುಕೊಳ್ಳಲು ಇಷ್ಟಪಡುತ್ತಿದ್ದಾರೆ.

ಫಲಿತಾಂಶ: 2019ರಿಂದ 2021ರ ವರೆಗೆ ಶೇ 100, 2022ರಲ್ಲಿ ಶೇ 82, 2023ರಲ್ಲಿ ಶೇ 87, 2024ರಲ್ಲಿ ಶೇ 94ರಷ್ಟು ಫಲಿತಾಂಶ ಲಭಿಸಿದೆ. ವೈಯಕ್ತಿಕವಾಗಿ 2022ರಲ್ಲಿ ವೈಶಾಲಿ ಶೇಕಡ 96, 2023ರಲ್ಲಿ ನಿಂಗಮ್ಮ ಶೇಕಡ 95, 2024ರಲ್ಲಿ ಭಾಗ್ಯಶ್ರೀ, ಬಸವರಾಜ ಶೇಕಡ 94ರಷ್ಟು ಅಂಕ ಪಡೆದುಕೊಂಡು ಸಾಧನೆ ಮಾಡಿದ್ದಾರೆ.

ಪ್ರಸಕ್ತ ಅತ್ಯಧಿಕ 175 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕೊಠಡಿಗಳೇ ಇಲ್ಲವಾಗಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಹಿರಿಯ ಅಧಿಕಾರಿಗಳಿಗೆಗೆ ಪ್ರಾಚಾರ್ಯರು ಮನವಿ ಮಾಡಿದ್ದಾರೆ.

‘ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಸುಲಭವಾಗಿ ಮನವರಿಕೆಯಾಗುವ ರೀತಿಯಲ್ಲಿ ಪಾಠ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ವಿಜ್ಞಾನ ಉಪನ್ಯಾಸಕರಾದ ಸಿದ್ದನಗೌಡ ಮತ್ತು ಸುಜಾವುದ್ದೀನ್‌ರ ಅವರ ಪರಿಶ್ರಮವೂ ಗಮನಾರ್ಹವಾಗಿದೆ’ ಎನ್ನುತ್ತಾರೆ ಪ್ರಾಚಾರ್ಯ ಕೆ.ಶಿವರಾಜ.

‘ಸಿಂಧನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಡ ವಿದ್ಯಾರ್ಥಿಗಳಿಗೆ ಓದುವ ಅವಕಾಶ ಕಲ್ಪಿಸಲಾಗಿದೆ. ಹೆಚ್ಚುವರಿ ಕೊಠಡಿಗಳಿಗೆ ಪಕ್ಕದಲ್ಲಿರುವ ಆರ್‌.ಎಂ.ಎಸ್. ಶಾಲೆಯ ನೆಲ ಮಹಡಿ ಬಳಸಿಕೊಳ್ಳಬಹುದಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗೆ ಸ್ಥಳಾವಕಾಶ ಮಾಡಿಕೊಡಲು ಪತ್ರ ಬರೆದಿದ್ದೇನೆ’ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದ್ದಾರೆ.

ಸಿಂಧನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೊರನೋಟ
ಸಿಂಧನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೊರನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT