ಶನಿವಾರ, ಏಪ್ರಿಲ್ 1, 2023
33 °C
ವಸತಿ ನಿಲಯಗಳ ಕಾರ್ಮಿಕರ ಸಂಘ ಧರಣಿ

ಬಾಕಿ ವೇತನ ಪಾವತಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕರು ಮತ್ತು ಬಾಲಕಿಯರ ವಸತಿ ನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ದಿನಗೂಲಿ ನೌಕರರಿಗೆ ಕಳೆದ 14 ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ವಸತಿ ನಿಲಯಗಳ ಕಾರ್ಮಿಕರ ಸಂಘ (ಟಿಯುಸಿಐ) ಸೋಮವಾರ ಇಲ್ಲಿನ ಮಿನಿವಿಧಾನಸೌಧ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿತು.

‘ವಸತಿ ನಿಲಯಗಳಲ್ಲಿ ಕಳೆದ 20 ವರ್ಷಗಳಿಂದ ಅನೇಕ ಮಹಿಳೆಯರು ಅಡುಗೆ ಸಿಬ್ಬಂದಿ ಹಾಗೂ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಸಮಾನ ದುಡಿಮೆಗೆ ಸಮಾನ ವೇತನ, ಪಿಎಫ್, ಇಎಸ್‍ಐ ನೀಡುತ್ತಿಲ್ಲ. ಮೇಲಾಧಿಕಾರಿಗಳು ಹಾಗೂ ವಸತಿ ನಿಲಯದ ಮೇಲ್ವಿಚಾರಕರು ನಿಯಮ ಗಾಳಿಗೆ ತೂರಿ ಕಾನೂನು ಬಾಹಿರವಾಗಿ 10 ರಿಂದ 12ಗಂಟೆಗಳ ಕಾಲ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ’ ಎಂದು ಸಂಘದ ಗೌರವಾಧ್ಯಕ್ಷ ಎಂ.ಗಂಗಾಧರ್ ದೂರಿದರು.

14 ತಿಂಗಳ ಬಾಕಿ ವೇತನ ಕೂಡಲೇ ಪಾವತಿಸಬೇಕು. ಸಮಾನ ದುಡಿಮೆಗೆ ಸಮಾನ ವೇತನ ಜಾರಿಯಾಗಬೇಕು. 2020-21ರ ಹೊಸ ವೇತನ ಕಾಯ್ದೆಯನ್ನು ಜಾರಿ ಮಾಡಬೇಕು. ಪಿಎಫ್, ಇಎಸ್‍ಐ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು. ಸೇವಾ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಇಲಾಖೆ ಹಾಗೂ ಏಜೆನ್ಸಿ ಮುಖಾಂತರ ಈ ಕೂಡಲೇ ವಿತರಿಸಬೇಕು. ದಿನಕ್ಕೆ ಎಂಟು ಗಂಟೆ ಕೆಲಸ ನಿಗದಿ ಮಾಡಬೇಕು. ಕಾರ್ಮಿಕರ ಕಾಯ್ದೆ ಸೆಕ್ಷನ್ 5,6ರ ಪ್ರಕಾರ ತಿಂಗಳಿನ 7ನೇ ತಾರೀಖಿನೊಳಗೆ ವೇತನ ಪಾವತಿ ಮಾಡಬೇಕು. ವಸತಿ ನಿಲಯದ ಕಾರ್ಮಿಕರ ಮೇಲೆ ಮೇಲಾಧಿಕಾರಿಗಳಿಂದ ಆಗುವ ದೌರ್ಜನ್ಯ, ದಬ್ಬಾಳಿಕೆ ತಡೆಯಲು ಕ್ರಮ ವಹಿಸಬೇಕು. ತಿಂಗಳ ಸಾರ್ವತ್ರಿಕ ರಜಾ ದಿನಗಳನ್ನು ಪರಿಗಣಿಸಿ ವೇತನ ಪಾವತಿ ಆಗಬೇಕು. ಸೇವಾ ಹಾಗೂ ಉದ್ಯೋಗ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.

ಟಿಯುಸಿಐ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಅಮರೇಶ, ಮನುಜಮತ ಬಳಗದ ಅಧ್ಯಕ್ಷ ಡಿ.ಎಚ್.ಕಂಬಳಿ ಮಾತನಾಡಿದರು. ಶ್ರಮಜೀವಿ ಹಮಾಲರ ಸಂಘದ ಅಧ್ಯಕ್ಷ ಮಾಬುಸಾಬ ಬೆಳ್ಳಟ್ಟಿ, ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಮೌನೇಶ, ವಸತಿ ನಿಲಯಗಳ ಕಾರ್ಮಿಕರ ಸಂಘದ ಅಧ್ಯಕ್ಷೆ ಮಹಾನಂದಿ, ಉಪಾಧ್ಯಕ್ಷರಾದ ಸಂತೋಷ ಬಾಲಿ, ಸುಶೀಲಮ್ಮ, ಖಜಾಂಚಿ ವೀರೇಶ ಗಂಗೂಬಾಯಿ, ಸದಸ್ಯರಾದ ಶೇಖರಪ್ಪ, ಮೌನೇಶ, ಲಿಂಗರಾಜ, ಈರಮ್ಮ, ಕಮಲಮ್ಮ, ಸೀತಮ್ಮ, ರಾಯಪ್ಪ, ಹುಲಿಗೆಮ್ಮ, ಫಕೀರಮ್ಮ, ಮುದುಕಪ್ಪ, ಬಡೆಮ್ಮ, ಹುಸೇನಮ್ಮ, ರುಕ್ಮಿಣೆಮ್ಮ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.