ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳು ಸಾಗಣೆ: ಪಿಎಸ್‌ಐ ತರಾಟೆಗೆ ತೆಗೆದುಕೊಂಡ ಶಾಸಕಿ ಕರೆಮ್ಮ ನಾಯಕ

Published 11 ಡಿಸೆಂಬರ್ 2023, 11:25 IST
Last Updated 11 ಡಿಸೆಂಬರ್ 2023, 11:25 IST
ಅಕ್ಷರ ಗಾತ್ರ

ಜಾಲಹಳ್ಳಿ(ರಾಯಚೂರು): ಕೃಷ್ಣಾ ನದಿಯಿಂದ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ಮೂರು ಟಿಪ್ಪರ್‌ಗಳನ್ನು ವಶಪಡಿಸಿಕೊಂಡು ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಪೊಲೀಸರು ಮೂರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶುಕ್ರವಾರ ರಾತ್ರಿ ಶಾಸಕಿ ಕರೆಮ್ಮ ನಾಯಕ ಅವರು ಬೆಳಗಾವಿಯಲ್ಲಿ ನಡೆದ ಅಧಿವೇಶನ ಮುಗಿಸಿಕೊಂಡು ತಮ್ಮ ಕ್ಷೇತ್ರಕ್ಕೆ ಮರಳುತ್ತಿದ್ದ ಸಂದರ್ಭದಲ್ಲಿ ತಿಂಥಣಿ ಬ್ರಿಜ್‌ನಲ್ಲಿರುವ ಮರಳು ತಪಾಸಣಾ ಕೇಂದ್ರದ ಬಳಿ ಕಾರಿನಲ್ಲಿ ಕುಳಿತು ಎಲ್ಲ ದೃಶ್ಯವನ್ನೂ ನೋಡಿದ್ದಾರೆ. ನಂಬರ್ ಪ್ಲೇಟ್‌ ಇಲ್ಲದ ಟಿಪ್ಪರ್‌ಗಳು ಸಂಚರಿಸುವುದನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ.

ನಂತರ ಕರೆಮ್ಮ ಅವರು ಜಾಲಹಳ್ಳಿ ಪಿಎಸ್‌ಐ ಸುಜಾತಾ ನಾಯಕ ಅವರನ್ನು ಚಿಂಚೋಡಿ ಕ್ರಾಸ್ ಹತ್ತಿರ ಕರೆಸಿ ತರಾಟೆಗೆ‌ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮರಳು ಸಾಗಣೆ ಮಾಡುತ್ತಿರುವ ಮೂರು ಟಿಪ್ಪರ್‌ಗಳನ್ನು ತಡೆದು ರಾಜಸ್ವ ಪಾವತಿಸದೇ ಸಾಗಣೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ಮಾಡಿದ್ದಾರೆ.

‘ಯಾವ ಟಿಪ್ಪರ್ ಮಾಲೀಕರು ಅಕ್ರಮ ಮರಳು ಸಾಗಣೆ ಮಾಡಲು ಅವಕಾಶ ಕಲ್ಪಿಸುವಂತೆ ಕೋರಿ ನನ್ನ ಬಳಿ ಬಂದಿಲ್ಲ. ಯಾರೂ ಕೂಡ ನನಗೆ ಆಮಿಷ ನೀಡಿಲ್ಲ. ಆದರೆ, ನೀವೆಲ್ಲ ಸೇರಿ ನನ್ನ ಹೆಸರು ಕೆಡಿಸಲು ಪ್ರಯತ್ನಿಸುತ್ತಿದ್ದೀರಿ. ಅಲ್ಲದೇ ಇಲ್ಲ, ಸಲ್ಲದ ಅರೋಪ ಮಾಡುತ್ತಿರುವುದು ಸರಿ ಅಲ್ಲ’ ಎಂದು ಪಿಎಸ್ಐಗೆ ಏರಿದ ಧ್ವನಿಯಲ್ಲಿ ಹೇಳಿದರು.

‘ನಿಮ್ಮ ಕೆಲಸವನ್ನು ನೀವು ಸರಿಯಾಗಿ ಮಾಡಿ, ಇಲ್ಲವಾದರೆ ನಿಮ್ಮ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡಬೇಕಾಗುತ್ತೆ’ ಎಂದು ಶಾಸಕಿ ಎಚ್ಚರಿಕೆ ನೀಡಿದರು ಎಂದು ತಿಳಿದುಬಂದಿದೆ.

ಮೂರು ಟಿಪ್ಪರ್‌ಗಳ ಪೈಕಿ ಎರಡು ಟಿಪ್ಪರ್ ಮಾಲೀಕರ ಹಾಗೂ ಚಾಲಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉಳಿದ ಒಂದು ಟಿಪ್ಪರ್‌ನ ಮಾಲೀಕ ಯಾರು ತಿಳಿದು ಬಂದಿಲ್ಲ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT