ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀರಾವರಿ ಯೋಜನೆ ಅನುಷ್ಠಾನಕ್ಕೆ ರಥಯಾತ್ರೆ’

‘ಜನತಾ ಜಲಧಾರೆ’ ಪೂರ್ವಭಾವಿ ಸಭೆಯಲ್ಲಿ ಶಾಸಕ ನಾಡಗೌಡ ಹೇಳಿಕೆ
Last Updated 11 ಏಪ್ರಿಲ್ 2022, 5:26 IST
ಅಕ್ಷರ ಗಾತ್ರ

ಸಿಂಧನೂರು: ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ರಾಜ್ಯದಲ್ಲಿ ಏಪ್ರಿಲ್ 16 ರಿಂದ ಏಕಕಾಲಕ್ಕೆ 15 ವಾಹನಗಳಲ್ಲಿ ರಥಯಾತ್ರೆಯನ್ನು ಆರಂಭಿಸಲಾಗುವುದು ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.

ಸಿಂಧನೂರಿನಲ್ಲಿ ಜೆಡಿಎಸ್ ಪಕ್ಷದಿಂದ ಭಾನುವಾರ ಹಮ್ಮಿಕೊಂಡಿದ್ದ ‘ಜನತಾ ಜಲಧಾರೆ’ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಏ.16 ರಿಂದ ರಾಜ್ಯದ ಆಲಮಟ್ಟಿ, ತುಂಗಭದ್ರ, ಬೀದರ್ ಹೀಗೆ ವಿವಿಧ 15 ಭಾಗಗಳಲ್ಲಿ ಜನತಾ ಜಲಧಾರೆಯ ರಥಯಾತ್ರೆ ಏಕಕಾಲಕ್ಕೆ ಆರಂಭಗೊಳ್ಳಲಿದೆ. ಕೊಪ್ಪಳದಿಂದ ರಾಯಚೂರು ಜಿಲ್ಲೆಗೆ ಏ.17 ಅಥವಾ 18 ರಂದು ಆಗಮಿಸಲಿದೆ. ಮಸ್ಕಿಯಿಂದ ಸಿಂಧನೂರಿಗೆ ರಥಯಾತ್ರೆ ಬರಲಿದೆ ಎಂದರು.

ಸಿಂಧನೂರು ತಾಲ್ಲೂಕಿನಲ್ಲಿ ಮೂರು ದಿನಗಳ ಕಾಲ ಈ ರಥಯಾತ್ರೆ ನಡೆಯಲಿದ್ದು, ವಿವಿಧ ಗ್ರಾಮಗಳಲ್ಲಿ ಸಂಚರಿಸಲಿವೆ ಎಂದರು.

ರಥಯಾತ್ರೆಯ ಯಶಸ್ವಿಗೆ ಮೂರು ತಂಡಗಳನ್ನು ರಚಿಸಲಾಗುತ್ತದೆ. ಆಯಾ ತಂಡದ ಮುಖಂಡರುಗಳು ತಮ್ಮ ಸದಸ್ಯರೊಂದಿಗೆ ಪ್ರತಿ ಗ್ರಾಮಗಳಿಗೆ ತೆರಳಿ ಜಲಧಾರೆಯ ಮಹತ್ವವನ್ನು ಕುರಿತ ಕರಪತ್ರಗಳನ್ನು ಹಂಚಬೇಕು. ರಥಯಾತ್ರೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಾಧನೆಗಳನ್ನು ಹಾಗೂ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜನಪರ ಕಾರ್ಯಕ್ರಮಗಳ ಮಾಹಿತಿಯನ್ನು ತಿಳಿಸುವ ಭಿತ್ತಿಪತ್ರಗಳು ಬರುತ್ತವೆ. ಅವುಗಳನ್ನೆಲ್ಲ ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದು ವಿವರಿಸಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ ಮಾತನಾಡಿ, ತುಂಗಭದ್ರ ಅಣೆಕಟ್ಟಿನಲ್ಲಿ 32 ಟಿಎಂಸಿ ಹೂಳು ತುಂಬಿದ್ದು, ಅದನ್ನು ತೆಗೆದು ಹಾಕುವ ತಂತ್ರಜ್ಞಾನ ವಿಶ್ವದ ಯಾವುದೇ ದೇಶಗಳಲ್ಲೂ ಇಲ್ಲ. ಹೀಗಾಗಿ ಈ ಭಾಗದ ರೈತರಿಗೆ ನವಲಿ ಸಮಾನಾಂತರ ಜಲಾಶಯವೊಂದೆ ಆಶಕಿರಣವಾಗಿದೆ. ಇದನ್ನು ಜಾರಿಗೊಳಿಸುವ ಹಿನ್ನೆಲೆಯಲ್ಲಿ ರಥಯಾತ್ರೆ ಹೆಚ್ಚು ಪರಿಣಾಮಕಾರಿಯಾಗಿ ರೈತರಿಗೆ ಮಾಹಿತಿ ನೀಡಬೇಕು ಎಂದರು.

ಈ ಹಿಂದೆ ಕುಮಾರಸ್ವಾಮಿ ರೈತರ ₹ 25 ಸಾವಿರ ಕೋಟಿ ಬೆಳೆ ಸಾಲಮನ್ನಾ ಮಾಡಿದ್ದಾರೆ. ಈ ಬಾರಿ ರೈತರ ಜಮೀನುಗಳಿಗೆ ನೀರಾವರಿ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ನೀರಾವರಿ ಯೋಜನೆಗಳ ಚಾಲನೆಗೆ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದರು.

ಜೆಡಿಎಸ್ ರೈತ ಘಟಕದ ಅಧ್ಯಕ್ಷ ಶಿವನಗೌಡ ಗೊರೇಬಾಳ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಂ.ಡಿ.ನದಿಮ್ ಮುಲ್ಲಾ, ಯುವ ಘಟಕದ ಅಧ್ಯಕ್ಷ ಹನುಮೇಶ ಕುರುಕುಂದಿ, ಅಶೋಕಗೌಡ ಗದ್ರಟಗಿ, ಅಯ್ಯನಗೌಡ ಆಯಾನೂರು, ಜಿ.ಎಸ್.ಸತ್ಯನಾರಾಯಣ, ವೆಂಕಟರಾಮ್ ರೆಡ್ಡಿ ಮುಕ್ಕುಂದಾ, ಪಗಡದಿನ್ನಿ ರಾಮರೆಡ್ಡಿ, ಲಕ್ಷ್ಮಣ ಬೋವಿ, ಗುರುರಾಜ, ಮರಿಯಪ್ಪ ಜಾಲಹಳ್ಳಿ, ಎಸ್.ಪಿ.ಟೈಲರ್, ಅಜಯಕುಮಾರ ದಾಸರಿ, ಗದ್ಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT