ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಮುಗಿಸದಿದ್ದರೆ ಅನುದಾನ ವಾಪಸ್‌

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ಅವರಿಂದ ಪ್ರಗತಿ ಪರಿಶೀಲನೆ
Last Updated 27 ಜನವರಿ 2021, 13:44 IST
ಅಕ್ಷರ ಗಾತ್ರ

ರಾಯಚೂರು: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನದ ಬಾಕಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸದಿದ್ದಲ್ಲಿ ಅನುದಾನ ಹಿಂಪಡೆಯಲಾಗುವುದು ಎಂದಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪ್ರದೇಶ ಮಂಡಳಿ ಅನುದಾನದ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪೂರ್ಣವಾಗದ ಕಾಮಗಾರಿಗಳ ಅನುದಾನ ವಾಪಾಸ್ ಪಡೆದು, ಏಜಿನ್ಸಿ ಬದಲಾಯಿಸಿ ಬೇರೆ ಏಜಿನ್ಸಿಗೆ ಕಾಮಗಾರಿ ನಿರ್ವಹಿಸಲು ಗುತ್ತಿಗೆ ನೀಡಲಾಗುತ್ತದೆ. ನಿರ್ಮಿತಿ ಕೇಂದ್ರ ಹಾಗೂ ಕ್ಯಾಶುಟೆಕ್‍ಗೆ ವಹಿಸಿದ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣ ಮಾಡುವುದಕ್ಕೆ ಅಧಿಕಾರಿಗಳು ಇಚ್ಛಾಶಕ್ತಿ ತೋರಿಸುತ್ತಿಲ್ಲ ಎಂದು ಜಿಲ್ಲೆಯ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಮಾನ್ವಿ ತಾಲ್ಲೂಕಿನಲ್ಲಿ 2016-18 ನೇ ಸಾಲಿನಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಹೈ ಮಾಸ್ಟ್‌ ದೀಪ ಅಳವಡಿಸುವಲ್ಲಿ ಬೇಜವಾಬ್ದಾರಿ ವರ್ತನೆ ತೋರಿಸಲಾಗುತ್ತಿದೆ ಎಂದು ಮಾನ್ವಿ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಮನಸಿಗೆ ಬಂದಾಗ ಹಣ ಪಡೆದುಕೊಳ್ಳಬಹುದು ಎಂದು ಭಾವಿಸಿದ್ದರೆ ತೆಗೆದುಹಾಕಿ, ಕೆಕೆಆರ್‌ಡಿಬಿಯನ್ನು ಎಟಿಎಂ ಯಂತ್ರ ಎಂದು ತಿಳಿದುಕೊಳ್ಳಬೇಡಿ’ ಎಂದು ಖಾರವಾಗಿ ಹೇಳಿದರು.

‘ಈ ಭಾಗದ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ಸಿದ್ದಪಡಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಚುರುಕು ಮುಟ್ಟಿಸಬೇಕಾಗಿದೆ. ಆದರೆ ಕಾಮಗಾರಿ ಬಗ್ಗೆ ಅಸಡ್ಡೆ ತೋರಿಸುವುದು ಸರಿಯಲ್ಲ’ ಎಂದು ತಿಳಿಸಿದರು.

ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ರಾಯಚೂರು ಜಿಲ್ಲಾ ವಿಮಾನ ನಿಲ್ದಾಣ, ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ವರ್ತುಲ ರಸ್ತೆ ನಿಮಾರ್ಣಕ್ಕೆ ಹೆಚ್ಚಿನ ಅನುದಾನವನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿವತಿಯಿಂದ ನೀಡಬೇಕು ಎಂದು ಮನವಿ ಮಾಡಿದರು.
‘ಜಿಲ್ಲೆ ಸಮಗ್ರ ಅಭಿವೃದ್ಧಿ ಮಾಡುವುದು ಸೇರಿದಂತೆ ಇಡೀ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯೇ ನಮ್ಮ ಗುರಿ. 371 –ಜೆ ಕಲಂ ವಿಶೇಷ ಮೀಸಲಾತಿಯಡಿ ಹೆಚ್ಚಿನ ಅನುದಾನ ಹರಿದು ಬರುತ್ತಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿಯೇ ರಾಯಚೂರು ವಿಮಾನ ನಿಲ್ದಾಣ ನಿರ್ಮಿಸಬೇಕು’ ಕೋರಿದರು.

ನಗರದ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ಕಾಮಗಾರಿ ಆಮೆಗತ್ತಿಯಲ್ಲಿ ನಡೆದಿದ್ದು, ಕ್ರೀಡಾಪಟುಗಳು ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಒಳಾಂಗಣದ ಕ್ರೀಡಾಂಗಣದಲ್ಲಿ ಬಾಕಿಯಿರುವ ಕಾಮಗಾರಿ ಪೂರ್ಣಗೊಳಿಸಿ, ಒಳಚರಂಡಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿ, ನೀರು ಸರಾಗವಾಗಿ ಹರಿಯುವಂತೆ ಮಾಡಬೇಕಾಗಿದೆ. ಹೊರಂಗಾಣ ಕ್ರೀಡಾಂಗಣ ಬಳಿಯಿರುವ ಈಜುಕೊಳವನ್ನು ಬೇರೆಡೆ ಸ್ಥಳಾಂತರಿಸಲಾಗುತ್ತದೆ ಎಂದರು.

ಸಿಂಧನೂರು ತಾಲ್ಲೂಕಿನಲ್ಲಿ ಗ್ರಂಥಾಲಯ, ಕ್ರೀಡಾಂಗಣ, ಮಾನ್ವಿ ತಾಲ್ಲೂಕಿ ಒಳ ಕ್ರೀಡಾಂಗಣ, ಮುಖ್ಯಮಂತ್ರಿ ಮಾದರಿ ಗ್ರಾಮದ ಸಿಸಿ ರಸ್ತೆ, ಒಳಚರಂಡಿ, ಚಾಗಭಾವಿ ಆರೋಗ್ಯ ಕೇಂದ್ರ, ರಾಯಚೂರು ನಗರದ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಐದು ಸ್ಮಾರ್ಟ್ ಕ್ಲಾಸ್ ರೂಮ್, ಯುಜಿಡಿ ಕಾಮಗಾರಿ ಸೇರಿದಂತೆ ದೇವದುರ್ಗ ಮತ್ತು ಲಿಂಗಸೂಗೂರು ತಾಲೂಕಿನಲ್ಲಿ ಕೈಗೆತ್ತಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ದತ್ತಾತ್ರೇಯ ಪಾಟೀಲ ಅವರು ಮಾಹಿತಿ ಪಡೆದರು.

ಶಾಸಕರಾದ ವೆಂಕಟರಾವ್ ನಾಡಗೌಡ, ಬಸನಗೌಡ ದದ್ದಲ್, ಡಿ.ಎಸ್.ಹುಲಗೇರಿ, ಕೆಕೆಆರ್‌ಡಿಬಿ ಕಾರ್ಯದರ್ಶಿ ಎನ್.ವಿ.ಪ್ರಸಾದ್, ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಅಸೀಫ್, ಹೆಚ್ಚುವರಿ ಜಿಲ್ಲಾಧಿಕಾರಿ ದುರಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT