ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಚಿವ ಚೆಲುವರಾಯಸ್ವಾಮಿ, ದದ್ದಲ್ ಬಸನಗೌಡ ರಾಜೀನಾಮೆ ನೀಡಲಿ: ಮಾಲಿ ಪಾಟೀಲ

ಸರ್ವೋದಯ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಒತ್ತಾಯ
Published 18 ಜೂನ್ 2024, 15:26 IST
Last Updated 18 ಜೂನ್ 2024, 15:26 IST
ಅಕ್ಷರ ಗಾತ್ರ

ರಾಯಚೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ₹187 ಕೋಟಿ ಭ್ರಷ್ಟಾಚಾರ ಹಾಗೂ ಭೂ ಒಡೆತನ ಯೋಜನೆಯಡಿ ಫಲಾನುಭವಿಗಳಿಗೆ ಸಬ್ಸಿಡಿಯಲ್ಲಿ ಅವ್ಯವಹಾರದ ಹೊಣೆಹೊತ್ತು ಕೃಷಿ ಸಚಿವ ಚೆಲುವರಾಯಸ್ವಾಮಿ ಹಾಗೂ ಮಹರ್ಷಿ ವಾಲ್ಮೀಕಿ ನಿಗಮ ಮಂಡಳಿಯ ಅಧ್ಯಕ್ಷರೂ ಆಗಿರುವ ಶಾಸಕ ಬಸನಗೌಡ ದದ್ದಲ್ ರಾಜೀನಾಮೆ ನೀಡಬೇಕು ಎಂದು ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಒತ್ತಾಯಿಸಿದರು.

‘ಭ್ರಷ್ಟಾಚಾರದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಭಾಗಿಯಾಗಿದ್ದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಮಗ್ರ ತನಿಖೆ ನಡೆಸಿ ಕೃಷಿ ಸಚಿವರ ರಾಜೀನಾಮೆ ಪಡೆಯಬೇಕು’ ಎಂದು ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಆಗ್ರಹಿಸಿದರು.

‘ಮಹರ್ಷಿ ವಾಲ್ಮೀಕಿ ನಿಗಮ ಮಂಡಳಿಯಲ್ಲಿ ₹187 ಕೋಟಿ ಭ್ರಷ್ಟಾಚಾರ ನಡೆದಿದ್ದು, ಅಧ್ಯಕ್ಷರ ಭಾಗಿಯಾಗಿರದೇ ಇರಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಪರಿಶಿಷ್ಟ ಪಂಗಡ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದು, ಭೂ ಒಡೆತನ ಯೋಜನೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕೃಷಿ ಇಲಾಖೆಯ ವಿವಿಧ ಯೋಜನೆಗಳಲ್ಲಿಯೂ ಅವ್ಯವಹಾರ ನಡೆದಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತರಲಾಗಿದೆ’ ಎಂದು ತಿಳಿಸಿದರು.

‘ಪರಿಶಿಷ್ಟ ಪಂಗಡ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣ ದುರ್ಬಳಕೆ ಮಾಡಿಕೊಂಡ ಪ್ರಕರಣಕ್ಕೆ ಸಬಂಧಿಸಿ ಸಮಾಜದ ಶಾಸಕರು ಧ್ವನಿ ಎತ್ತಬೇಕು. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಅಚಾತುರ್ಯವಲ್ಲ. ನಿಷ್ಪಕ್ಷಪಾತ ತನಿಖೆ ನಡೆಸಬೇಕು’ ಎಂದರು.

‘ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿ ರಾಜ್ಯ ಸರ್ಕಾರ ಆತುರದ ನಿರ್ಧಾರ ಮಾಡಿದ್ದು ಮರು ಪರಿಶೀಲಿಸಬೇಕು. ಇಂಧನ ದರ ಏರಿಕೆಯಿಂದ ಜನ ಸಾಮಾನ್ಯರಿಗೆ ಹಾಗೂ ರೈತರಿಗೆ ಬರೆ ಎಳೆದಂತಾಗಿದೆ. ಬೀಜ, ರಸಗೊಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ರೈತರು ಬೆಳೆ ಕಟಾವು ಮಾಡಲು, ಉಳುಮೆ ಮಾಡಲು, ಬೆಳೆ ಕಟಾವು ಸಂದರ್ಭದಲ್ಲಿ ಟ್ರ್ಯಾಕ್ಟರ್ ಬಳಸುತ್ತಾರೆ. ಡೀಸೆಲ್ ದರ ಏರಿಕೆಯಿಂದ ಸಂಕಷ್ಟ ಎದುರಿಸುವಂತಾಗಿದೆ’ ಎಂದು ಹೇಳಿದರು.

‘ವಿವಿಧ ಇಲಾಖೆಯಲ್ಲಿನ ಭ್ರಷ್ಟಾಚಾರ, ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಅಕ್ರಮ ನೀರಾವರಿ, ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ, ದುರಸ್ತಿ, ನೀರಾವರಿ ಯೋಜನೆಗಳ ಕಾಮಗಾರಿಯಲ್ಲಿನ ಭ್ರಷ್ಟಾಚಾರ ಹಾಗೂ ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ವಿರುದ್ಧ ಹೋರಾಟ ಮಾಡಲು ರೂಪರೇಷ ನಡೆಸಲು ಜೂನ್ 20ರಂದು ಬೆಂಗಳೂರಿನಲ್ಲಿ ಸರ್ವೋದಯ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗಿದೆ’ ಎಂದು ತಿಳಿಸಿದರು.

ಪರ್ಯಾಯ ರಾಜಕಾರಣ: ‘ಸರ್ವೋದಯ ಪಕ್ಷದ ಬೆಳೆವಣಿಗೆಗೆ ತಾಲ್ಲೂಕು ಮಟ್ಟದ ಯುವ ಪಡೆ ಸಜ್ಜುಗೊಳಿಸಿ ಪರ್ಯಾಯ ರಾಜಕಾರಣಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ವಿವಿಧ ತಾಲ್ಲೂಕು ಮಟ್ಟದ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷ ಸಂಘಟಿಸಿ ಬಲವರ್ಧನೆ ಮಾಡಲಾಗುವುದು’ ಎಂದು ಚಾಮರಸ ಮಾಲಿಪಾಟೀಲ ಹೇಳಿದರು.

ದೇವರಾಜ ನಾಯಕ, ಬೂದಯ್ಯ ಸ್ವಾಮಿ ಗಬ್ಬೂರು, ಹೊನ್ನಪ್ಪ ಚಂದ್ರಬಂಡಾ, ಶಣ್ಮುಖಪ್ಪ, ಪ್ರಭಾಕರ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT