ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತರರಿಗಾಗಿ ಬದುಕಿದರೆ ಜೀವನ ಸಾರ್ಥಕ: ಸಿ ಸೋಮಶೇಖರ

ಡಾ.ಎಂ.ನಾಗಪ್ಪ ವಕೀಲರ ಪ್ರತಿಷ್ಠಾನದ ವಾರ್ಷಿಕೋತ್ಸವ 
Published 30 ಮಾರ್ಚ್ 2024, 15:28 IST
Last Updated 30 ಮಾರ್ಚ್ 2024, 15:28 IST
ಅಕ್ಷರ ಗಾತ್ರ

ರಾಯಚೂರು: ‘ಇತರರಿಗಾಗಿ ಬದುಕಿದವರ ಜೀವನ ಸಾರ್ಥಕ ಎನಿಸಿಕೊಳ್ಳುತ್ತದೆ. ತಮಗಾಗಿ ಬದುಕುವವರು ಇರುವಾಗಲೇ ಸತ್ತಂತೆ. ನಾಗಪ್ಪನವರು ಕೇವಲ ತಮಗಾಗಿ ಬಾಳದೆ ಸಮಾಜಕ್ಕಾಗಿ ಬಾಳಿದರು. ಹೀಗಾಗಿಯೇ ಅವರು ಇತಿಹಾಸದ ಭಾಗವಾದರು’ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ ತಿಳಿಸಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಡಾ.ಎಂ.ನಾಗಪ್ಪ ವಕೀಲರ ಪ್ರತಿಷ್ಠಾನದ 20ನೇ ವಾರ್ಷಿಕೋತ್ಸವ ಹಾಗೂ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 

‘ನಾಡು ಕಂಡ ಧೀಮಂತ ಹೋರಾಟಗಾರ ಡಾ.ಎಂ.ನಾಗಪ್ಪನವರು. ಅವರು ಇಡೀ ಸಮಾಜಕ್ಕಾಗಿ ಬಾಳಿದವರು. ನಮ್ಮ ಮನೆಯಲ್ಲಿನ ಹೆಜ್ಜೆಗಳು ಮನೆಯವರಿಗಷ್ಟೇ ಕಂಡರೆ ಸಮಾಜದಲ್ಲಿನ ಹೆಜ್ಜೆಗಳು ಶಾಶ್ವತವಾಗಿ ಉಳಿಯಲಿದೆ. ಅಸಮಾನತೆ ಮೆಟ್ಟಿ ನಿಲ್ಲುವವರು, ಶೋಷಣೆ ವಿರೋಧಿಸುವವರು ನಿಜವಾದ ಸಮಾಜವಾದಿಗಳು ಎನಿಸಿಕೊಳ್ಳುತ್ತಾರೆ. ಅಂಥ ವ್ಯಕ್ತಿತ್ವ ನಾಗಪ್ಪನವರಾಗಿತ್ತು. ಅವರ ಜೀವನವನ್ನು ಶಾಲಾ ಪಠ್ಯಕ್ಕೆ ಸೇರಿಸುವುದು ಸೂಕ್ತ’ ಎಂದರು. 

‘ಅವರು ತಮ್ಮ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಚಿಂತಿಸದೆ ಮುಂದಿನ ಪೀಳಿಗೆ ಬಗ್ಗೆ ಚಿಂತನೆ ಮಾಡಿದರು. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವ ಮೂಲಕ ದೇಶಭಕ್ತಿ ಮೆರೆದರು. ಸರಳ ಜೀವನ ನಡೆಸಿದರೂ ಉದಾತ್ತ ಚಿಂತನೆ ಹೊಂದಿದ್ದರು. ಉಪಮುಖ್ಯಮಂತ್ರಿ ಪದವಿಯನ್ನೇ ತಿರಸ್ಕರಿಸಿದ್ದರು’ ಎಂದು ಹೇಳಿದರು.

ಚಿತ್ತರಗಿ  ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಗುರು ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿ,‌ ‘ಇದು ವ್ಯಕ್ತಿಯ ಸ್ಮರಣೆಯಲ್ಲ. ವ್ಯಕ್ತಿತ್ವದ ಸ್ಮರಣೆ. ಎಂ.ನಾಗಪ್ಪನವರದು ತಾಯಿಯ ಹೃದಯವಿತ್ತು. ಎಂ.ನಾಗಪ್ಪನವರು ಉತ್ತರ ಭಾರತದಲ್ಲಿ ಇದ್ದಿದ್ದರೆ ದೇಶದ ದೊಡ್ಡ ನಾಯಕರಾಗುತ್ತಿದ್ದರು‘ ಎಂದರು.

‘ಉತ್ತರ ಕರ್ನಾಟಕ ಭಾಗದ ಜನರಿಗೆ ಮಾಡಿದ ಕೆಲಸಗಳನ್ನು ಹೇಳಿಕೊಳ್ಳುವ ಗುಣವಿಲ್ಲ. ಅಲ್ಪ ಸ್ವಲ್ಪ ಕೆಲಸ ಮಾಡಿದವರ ಹೆಸರುಗಳು ಪಠ್ಯದಲ್ಲಿ ಸೇರಿಸಲಾಗಿದೆ. ಆದರೆ, ಮನೆ ಮಠ ಬಿಟ್ಟು ಹೋರಾಟ ಮಾಡಿದ ನಾಗಪ್ಪನಂಥವರನ್ನು ಇತಿಹಾಸದಿಂದ ಮರೆ ಮಾಚುವ ಕೆಲಸವಾಗಿದೆ. ಸಮಾಜವಾದಿ ಹಿನ್ನೆಲೆಯಲ್ಲಿ ಹೊಂದಿದ್ದ ಅವರು ಬಸವಾದಿ ಶರಣರು ತತ್ವ ಪಾಲಿಸಿಕೊಂಡು ಬಂದಿದ್ದರು‘ ಎಂದು ತಿಳಿಸಿದರು.

‘ಇಂದಿಗೂ ಜನ ಅಜ್ಞಾನದಿಂದ ಮೌಢ್ಯದಲ್ಲಿ ಸಿಲುಕಿದ್ದಾರೆ. ಎಲ್ಲರೂ ಕೂಡಿ ದುಡಿದು ಹಂಚಿ ತಿನ್ನುವುದೇ ಬಸವತತ್ವವಾಗಿದೆ. ಉಳ್ಳವರು ಹಂಚಿ ತಿನ್ನಬೇಕು’ ಎಂದು ಹೇಳಿದರು.

ಶಿರೂರಿನ ಬಸವಲಿಂಗ ಸ್ವಾಮೀಜಿ ಮಾತನಾಡಿ, ‘ಬಸವಾದಿ ಶರಣರ ಚಿಂತನೆಗಳು ಜಾಗತಿಕವಾಗಿ ಸ್ವೀಕೃತವಾಗಿದೆ. ಬಸವಣ್ಣನವರು ವಿಶ್ವ ಸಂವಿಧಾನ ಸ್ಥಾಪಕರು. ಎಲ್ಲರೂ ಕೂಡಿ ಇರಬೇಕು ಎನ್ನುವುದೇ ಅನುಭವ ಮಂಟಪದ ಮೂಲ ಉದ್ದೇಶವಾಗಿದೆ’ ಎಂದು ಹೇಳಿದರು.

ಪರಿಸರ ಪ್ರೇಮಿ, ಗ್ರೀನ್ ರಾಯಚೂರು ಸಂಸ್ಥೆಯ ಕಾರ್ಯದರ್ಶಿ ರಾಜೇಂದ್ರ ಎಸ್.ಶಿವಾಳೆ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಜಯಮಹಾಂತ ಶಾಖಾಮಠದ ಲಿಂಗಸೂರಿನ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಪ್ರತಿಷ್ಠಾನದ ಅಧ್ಯಕ್ಷ ಬಸಪ್ಪ ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಂಬಾಪತಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮಿರೆಡ್ಡಿ ಹೊಸೂರು,  ಪಂ.ನರಸಿಂಹಲು ವಡವಾಟಿ ವಚನ ಗಾಯನ ಪ್ರಸ್ತುತಪಡಿಸಿದರು. ಉಪಾಧ್ಯಕ್ಷ ನಾಗರಾಜ ವಕೀಲ ಸ್ವಾಗತಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT