ಶನಿವಾರ, ಡಿಸೆಂಬರ್ 7, 2019
22 °C
ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಪ್ರತಿಭಟನೆ

ಸಂಸದರಿಗೆ ಅಡ್ಡಿಪಡಿಸಿದವರನ್ನು ಗಡಿಪಾರು ಮಾಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿ ಗ್ರಾಮದೊಳಗೆ ಸಂಸದ ಎ.ನಾರಾಯಣಸ್ವಾಮಿ ಅವರು ಪ್ರವೇಶಿಸಲು ಅಡ್ಡಿಪಡಿಸಿರುವ ದುಷ್ಕರ್ಮಿಗಳನ್ನು ಗಡಿಪಾರು ಮಾಡಬೇಕು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಗುಡಿಸಲು ಮುಕ್ತ ರಾಜ್ಯದ ಆಶಯವನ್ನು ಈಡೇರಿಸಲು ಸಂಸದರು ಗ್ರಾಮಸ್ಥರೊಂದಿಗೆ ಮುಕ್ತವಾಗಿ ಚರ್ಚಿಸಲು ಹೋದಾಗ ಗ್ರಾಮದ ಕೆಲ ಕಿಡಿಗೇಡಿಗಳು ರಾಜಕೀಯ ಪ್ರೇರಿತವಾಗಿ ಗ್ರಾಮದೊಳಗೆ ಪ್ರವೇಶಿಸದಂತೆ ಅಡ್ಡಿಪಡಿಸಿರುವುದು ಕಾನೂನು ಬಾಹಿರವಾಗಿದೆ. ರಾಜಕೀಯವಾಗಿ ಉನ್ನತ ಶ್ರೇಣಿಯ ಹುದ್ದೆ ಹೊಂದಿರುವ ಸಂಸದರನ್ನು ದಲಿತರು ಎಂಬ ಕಾರಣಕ್ಕೆ ಕೊಳಕು ಮನಸ್ಸಿನ ಕೆಲ ಸವರ್ಣಿಯರು ಅಗೌರವದಿಂದ ಕಂಡಿರುವುದು ಅಪರಾಧವಾಗಿದೆ ಎಂದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೃತ್ಯವೆಸಗಿದ ದುಷ್ಕರ್ಮಿಗಳು ಯಾವುದೇ ಪಕ್ಷ ಅಥವಾ ಕೋಮಿನವರಾದರೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಕಠಿಣ ಕ್ರಮ ಜರುಗಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲು ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಬೇಕು. ಗೊಲ್ಲರಹಟ್ಟಿಯಲ್ಲಿ ಅಸ್ಪೃಶ್ಯತೆ ಜೀವಂತಾಗಿದ್ದು, ಅಲ್ಲಿರುವ ದಲಿತರೆಲ್ಲರೂ ಸಂಕಷ್ಟದ ಸುಳಿಯಲ್ಲಿದ್ದಾರೆ. ಗ್ರಾಮದಲ್ಲಿ ಭೀತಿಯ ವಾತಾವರಣ ಉಂಟಾಗಿರುವುದರಿಂದ ಜನರಲ್ಲಿ ಆತ್ಮವಿಶ್ವಾಸದ ಕೊರತೆ ಎದುರಾಗಿದೆ. ಕೂಡಲೇ ಇದನ್ನು ನೀಗಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಗುರುವಾರ ಮನವಿ ಸಲ್ಲಿಸಿದರು.

ನಗರಸಭೆ ಸದಸ್ಯ ಎನ್.ಕೆ.ನಾಗರಾಜ, ಚಂದ್ರಶೇಖರ ಯಕ್ಲಾಸಪುರ, ಜನಾರ್ದನ ಹಳ್ಳಿಬೆಂಚಿ, ಎಸ್.ರಾಜು, ಕೆ.ಪಿ.ಅನಿಲಕುಮಾರ, ಆರ್.ಆಂಜನೇಯ, ರೆಡ್ಡಪ್ಪ, ಎಸ್.ಹುಲಿಗೆಪ್ಪ, ಚಂದ್ರು ಭಂಡಾರಿ, ಎಸ್.ವೆಂಕಟೇಶ, ಭೀಮಣ್ಣ, ವೆಂಕಟೇಶ, ಬಸವರಾಜ, ನರಸಿಂಹಲು ಇದ್ದರು.

ಪ್ರತಿಕ್ರಿಯಿಸಿ (+)