ಮಾನಪ್ಪ ವಜ್ಜಲ ವಿರುದ್ಧ ತೇಜೋವಧೆ ಸಲ್ಲ: ಗುಂಡಪ್ಪಗೌಡ ಪೊಲೀಸ್ ಪಾಟೀಲ್

ಹಟ್ಟಿಚಿನ್ನದಗಣಿ: ‘ವೈದ್ಯಕೀಯ ಅನರ್ಹತೆ ಮೇರೆಗೆ ಕಾರ್ಮಿಕರ ಮಕ್ಕಳಿಗೆ ಉದ್ಯೋಗ ನೀಡುವ ವಿಚಾರದಲ್ಲಿ ಹಟ್ಟಿ ಚಿನ್ನದಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ ಅವರು ನೀಡಿರುವ ಹೇಳಿಕೆಗೆ ರಾಜಕೀಯ ಬಣ್ಣ ಬೆರೆಸಿ ತೇಜೋವಧೆ ಮಾಡುತ್ತಿರುವುದು ಖಂಡನೀಯವಾಗಿದೆ‘ ಎಂದು ಹಿರಿಯ ಬಿಜೆಪಿ ಮುಖಂಡ ಗುಂಡಪ್ಪಗೌಡ ಪೊಲೀಸ್ ಪಾಟೀಲ್ ಹೇಳಿದರು.
ಪಟ್ಟಣದ ಲಿಂಗಾವಧೂತ ದೇವಸ್ಥಾನದಲ್ಲಿ ಈಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘2017ರಿಂದ ವೈದ್ಯಕೀಯ ಅನರ್ಹತೆ ಮೇರೆಗೆ ಕಾರ್ಮಿಕ ಮಕ್ಕಳನ್ನು ನೌಕರಿಗೆ ಸೇರಿಸಿಕೊಳ್ಳುವುದು ಸ್ಥಗಿತೊಂಡಿದೆ. ಕೆಲವು ತಾಂತ್ರಿಕ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಹೇಳಿರುವ ಹೇಳಿಕೆಗೆ ರಾಜಕೀಯ ಬೆರೆಸಿದ ಕೆಲ ಕಾರ್ಮಿಕ ಮುಖಂಡರು, ನಾನಾ ಸಂಘಟನೆಯವರು ಚಿನ್ನದಗಣಿ ಕಂಪನಿ ಕಾರ್ಮಿಕರ ಮಕ್ಕಳಿಗೆ ನೌಕರಿ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ‘ ಎಂದು ಆಪಾಧಿಸಿದರು.
‘ಮಾನಪ್ಪ ವಜ್ಜಲ ಅವರು ಅಧಿಕಾರಕ್ಕೆ ಬಂದು 4 ತಿಂಗಳಾಗಿವೆ. ಕಳೆದ 4 ವರ್ಷದಿಂದ ಕಂಪನಿಯಲ್ಲಿ ಕಾರ್ಮಿಕ ಮಕ್ಕಳಿಗೆ ನೌಕರಿ ಕೊಡುವುದನ್ನು ಸ್ಥಗಿತಗೊಳಿಸಲಾಗಿದೆ. ಕಾರ್ಮಿಕ ಸಂಘದವರು ಉಡಾಫೆ ಮಾತುಗಳನ್ನಾಡಿ ತಮ್ಮ ತಪ್ಪುಗಳನ್ನು ಮರೆಮಾಚಲು ಅನಗತ್ಯ ಆರೋಪದಲ್ಲಿ ತೊಡಗಿದ್ದಾರೆ. ಸ್ಥಗಿತಗೊಂಡ ‘ಅನ್‌ಫಿಟ್‘ ಯೋಜನೆಯನ್ನು ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಜಾರಿಗೊಳಿಸುತ್ತಾರೆ. ಅವರೇನಾದರೂ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸಿದರೆ ನಾವು ಸಹ ಹೋರಾಟಕ್ಕೆ ಕೈಜೋಡಿಸುತ್ತೇವೆ‘ ಎಂದು ಹೇಳಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಗುಂಡಪ್ಪಗೌಡ ಗುರಿಕಾರ, ಪ್ರಮುಖರಾದ ಪರಮೇಶ ಯಾದವ್, ಶಂಕರಗೌಡ ಬಳಗಾನೂರು, ವೆಂಕೋಬ್ ಪವಾಡೆ, ರಮೇಶ್ ಉಳಿಮೇಶ್ವರ, ರಾಜುಗೌಡ ಗುರಿಕಾರ, ಶಿವಪ್ರಸಾದ್, ಅಮರೇಶ, ಸಾಬಣ್ಣ ಯಲಗಟ್ಟಾ, ವೆಂಕೋಬ್ ಯರಜಂತಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.