ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಮಾರುಕಟ್ಟೆಯಲ್ಲಿ ಹಣ್ಣಿನ ರಾಜನ ದರ್ಬಾರು

ಗ್ರಾಹಕರ ಆಕರ್ಷಿಸುತ್ತಿರುವ ಬೇನಿಷಾನ್, ಕೇಸರ, ತೋತಾಪುರಿ ಮಾವಿನ ಹಣ್ಣು
Published 12 ಮೇ 2024, 4:48 IST
Last Updated 12 ಮೇ 2024, 4:48 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಮೂರು ತಿಂಗಳಿಂದ ಬೆಂಬಿಡದ ರಣ ಬಿಸಿಲು, ಯಾವುದೇ ಸಂದರ್ಭದಲ್ಲಿ ಆಲಿಕಲ್ಲು ಮಳೆ ಸುರಿಯುವ ಆತಂಕ ಮಾವು ಬೆಳೆಗಾರರನ್ನು ಕಾಡುತ್ತಿದೆ. ರೈತರು ಕೈಗೆ ಬಂದಷ್ಟು ಬೆಲೆಗೆ ಮಾರಾಟ ಮಾಡುತ್ತಿರುವ ಕಾರಣ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾವಿನ ಬೆಲೆ ಇಳಿಕೆಯಾಗಿದೆ.

ಬೇನಿಷಾನ್, ಕೇಸರ, ದಸೇರಿ, ಮಲ್ಲಿಕಾ ಹಾಗೂ ತೋತಾಪುರಿ ಮಾವು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಕನಿಷ್ಠ ₹ 40ರಿಂದ ಗರಿಷ್ಠ ₹ 90 ಗೆ ಪ್ರತಿ ಕೆ.ಜಿಯಂತೆ ಮಾವಿನ ಹಣ್ಣು ಮಾರಾಟವಾಗುತ್ತಿದೆ.

ಸ್ಟೇಷನ್‌ ರಸ್ತೆ, ಯರಮರಸ್‌ ರಸ್ತೆ, ಮಂತ್ರಾಲಯ ರಸ್ತೆ ಹಾಗೂ ತೀನ್‌ ಖಂದಿಲ್‌ ವೃತ್ತದಲ್ಲಿ ದೊಡ್ಡ ಪ್ರಮಾಣದಲ್ಲಿ ಮಾವಿನ ಹಣ್ಣುಗಳು ಮಾರಾಟವಾಗುತ್ತಿವೆ. ಸಣ್ಣಪುಟ್ಟ ವ್ಯಾಪಾರಿಗಳ ಕೈಗಾಡಿಗಳ ಮೇಲೆಯೇ ವ್ಯಾಪಾರಸ್ಥರು ಹಣ್ಣು ಮಾರಾಟ ಮಾಡಿದರೆ, ರೈತರು ಟಾಟಾಎಸ್‌ ಹಾಗೂ ಬುಲೇರೊ ವಾಹನಗಳಲ್ಲಿ ಹಣ್ಣು ತಂದು ಮಾರಾಟ ಮಾಡುತ್ತಿದ್ದಾರೆ.

ಹಣ್ಣುಗಳ ಮಾರಾಟಕ್ಕೆ ಪೈಪೋಟಿಗೆ ಇಳಿದಿರುವ ವ್ಯಾಪಾರಸ್ಥರು ₹ 100ಗೆ ಎರಡೂವರೆ ಕೆಜಿ ಮಾವಿನ ಹಣ್ಣು ಕೊಟ್ಟು ಗ್ರಾಹಕರನ್ನು ಖುಷಿ ಪಡಿಸುತ್ತಿದ್ದಾರೆ. ಇನ್ನು ಬಹಳ ಅಂದರೆ 20 ದಿನಗಳ ಅವರಿಗೆ ಮಾವು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಮಳೆಯಾದರೆ ಹಣ್ಣುಗಳಲ್ಲಿ ಹುಳು ಕಾಣಿಸಿಕೊಳ್ಳಲಿವೆ ಹೀಗಾಗಿ ಗ್ರಾಹಕರು ಮೂರು, ನಾಲ್ಕು ಕೆಜಿ ಮಾವುಗಳನ್ನು ಒಂದೇ ಬಾರಿಗೆ ಖರೀದಿಸಿ ಒಯ್ದು ಸೀಕರಣೆ ಮಾಡಿ ಸೇವಿಸುತ್ತಿದ್ದಾರೆ.

ಮಾವಿನ ಹಣ್ಣುಗಳ ಮಾರಾಟ ಹಂಗಾಮು ಮೊದಲು ನಾಲ್ಕು ತಿಂಗಳು ಇರುತ್ತಿತ್ತು. ಕಳೆದ ವರ್ಷ ಮಳೆಯಾಗಿಲ್ಲ. ಅನೇಕ ಮರಗಳಿಗೆ ಸರಿಯಾಗಿ ಹೂವು ಬಿಟ್ಟಿರಲಿಲ್ಲ. ಪರಿಣಾಮ ಕಡಿಮೆ ಪ್ರಮಾಣದಲ್ಲಿ ಮಾವು ಮಾರುಕಟ್ಟೆಗೆ ಬರುತ್ತಿದೆ ಎಂದು ಹಣ್ಣಿನ ವ್ಯಾಪಾರಿ ಮಂಜುನಾಥ ತಿಳಿಸಿದರು.

‘ಮೊದಲು ನಾಲ್ಕು ತಿಂಗಳು ಮಾವಿನಹಣ್ಣುಗಳು ಮಾರುಕಟ್ಟೆಗೆ ಬರುತ್ತಿದ್ದವು. ಇದೀಗ ಕೇವಲ ರಾಯಚೂರು ತಾಲ್ಲೂಕಿನ ಯಾಪಲದಿನ್ನಿ, ನೆರೆಯ ರಾಜ್ಯದ ಗದ್ವಾಲ್, ಜುಲಮಗೇರಾ ಹಾಗೂ ಮಕ್ತಲ್‌ ಸುತ್ತಮುತ್ತಲಿನ ಗ್ರಾಮಗಳಿಂದ ಹಣ್ಣುಗಳು ಬರುತ್ತಿವೆ’ ಎಂದು ಮಹಮ್ಮದ್ ಅಪ್ಸರ್‌ ಫ್ರೂಟ್ಸ್‌ ಮರ್ಚಂಟ್‌ನ ಮಾಲೀಕರು ಹೇಳಿದರು.

‘ಗುಣಮಟ್ಟದ ಮಾವು ದೆಹಲಿ, ಗುಜರಾತ, ಸೋಲಾಪುರ, ವಿಜಯಪುರ ಹಾಗೂ ಬಾಗಲಕೋಟೆಗೆ ಕಳಿಸಿದ್ದೇವೆ. ಎರಡು ತಿಂಗಳ ಹಿಂದೆ ನಿತ್ಯ 20 ಗಾಡಿಗಳು ರಾಯಚೂರಿಗೆ ಬರುತ್ತಿದ್ದವು. ಒಂದು ವಾರದಿಂದ ಕೇವಲ 15 ಗಾಡಿಗಳು ಬರುತ್ತಿವೆ’ ಎಂದು ತಿಳಿಸಿದರು.

‘ಹಣ್ಣುಗಳನ್ನು ಸಂಗ್ರಹಿಸಿ ಇಡಲು ಜಿಲ್ಲಾ ಕೇಂದ್ರದಲ್ಲಿ ಕೋಲ್ಡ್‌ಸ್ಟೋರೇಜ್‌ ಇಲ್ಲ. ಕೋಲ್ಡ್‌ ಸ್ಟೋರೇಜ್‌ ನಿರ್ಮಾಣಕ್ಕೆ ಜಾಗದ ಕೊರತೆ ಇಲ್ಲ. ತೋಟಗಾರಿಕೆ ಇಲಾಖೆಯಿಂದ ಕೋಲ್ಡ್‌ ಸ್ಟೋರೇಜ್‌ ನಿರ್ಮಾಣ ಮಾಡಿದರೆ ತೋಟಗಾರಿಕೆ ಬೆಳೆಗಾರರು ಹಾಗೂ ವ್ಯಾಪಾರಸ್ಥರಿಗೂ ಅನುಕೂಲವಾಗಲಿದೆ’ ಎಂದರು.

ಜಿಲ್ಲೆಯ 4,161 ಹೆಕ್ಟೇರ್‌ ಪ್ರದೇಶದಲ್ಲಿ ಮಾವು, ದಾಳಿಂಬೆ, ಪಪ್ಪಾಯ, ಮೊಸಂಬಿ, ಈರುಳ್ಳಿ ಹಾಗೂ ಟೊಮೆಟೊ ಇತ್ಯಾದಿ ಪ್ರಮುಖ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಬರದ ಕಾರಣ ಈ ಬಾರಿ ಮಾವಿನ ಉತ್ಪಾದನೆ ಕಡಿಮೆಯಾಗಿದೆ ಎಂದು ತೋಟಗಾರಿಕೆ ಇಲಾಖೆ ಸಿಬ್ಬಂದಿ ಹೇಳಿದರು.

ಮಾವಿನ ಹಣ್ಣಿನ ಬೆಲೆ ಪ್ರತಿ ಕೆಜಿಗೆ ₹ 60ರಿಂದ ₹ 40ಗೆ ಇಳಿದಿದೆ. 20 ದಿನಗಳಲ್ಲಿ ಹಂಗಾಮು ಮುಗಿಯುವ ಕಾರಣ ಗ್ರಾಹಕರು ಆಸಕ್ತಿಯಿಂದ ಹಣ್ಣು ಖರೀದಿಸುತ್ತಿದ್ದಾರೆ.
ಶಾಂತಮ್ಮ, ಹಣ್ಣಿನ ವ್ಯಾಪಾರಿ
ರಾಯಚೂರಿನ ಎಪಿಎಂಸಿಯ ಉಪ ಪ್ರಾಂಗಣದಲ್ಲಿ ಕಾರ್ಮಿಕರು ಹಣ್ಣಿನ ಗಾತ್ರಕ್ಕೆ ಅನುಗುಣವಾಗಿ ಟ್ರೇಗಳಲ್ಲಿ ವಿಂಗಡಿಸಿ ಇಡುತ್ತಿದ್ದಾರೆ / ಚಿತ್ರ: ಶ್ರೀನಿವಾಸ ಇನಾಮದಾರ್
ರಾಯಚೂರಿನ ಎಪಿಎಂಸಿಯ ಉಪ ಪ್ರಾಂಗಣದಲ್ಲಿ ಕಾರ್ಮಿಕರು ಹಣ್ಣಿನ ಗಾತ್ರಕ್ಕೆ ಅನುಗುಣವಾಗಿ ಟ್ರೇಗಳಲ್ಲಿ ವಿಂಗಡಿಸಿ ಇಡುತ್ತಿದ್ದಾರೆ / ಚಿತ್ರ: ಶ್ರೀನಿವಾಸ ಇನಾಮದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT