ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ವಿ: ಕೆರೆ ಪುನಶ್ಚೇತನಕ್ಕೆ ಯೋಜನೆ ಸದ್ಬಳಕೆ

ಕೇಂದ್ರ ಸರ್ಕಾರದ ಅಮೃತ ಸರೋವರ ಯೋಜನೆಗೆ ಆಯ್ಕೆ
Last Updated 7 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಮಾನ್ವಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಅಮೃತ ಸರೋವರ ಯೋಜನೆ ಅಡಿಯಲ್ಲಿ ಪುನಶ್ಚೇತನಗೊಂಡಿರುವ ತಾಲ್ಲೂಕಿನ ಹಿರೇಕೊಟ್ನೇಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮರೇಶ್ವರ ಕ್ಯಾಂಪಿನ ಕುಡಿಯುವ ನೀರಿನ ಕೆರೆ ಗಮನ ಸೆಳೆಯುತ್ತಿದೆ.

ದಶಕಗಳ ಹಿಂದೆ ಕೂಲಿಗಾಗಿ ಕಾಳು ಹಾಗೂ ಜಲ ನಿರ್ಮಲ ಯೋಜನೆಗಳ ಅಡಿಯಲ್ಲಿ ಸದರಿ ಕೆರೆಯನ್ನು ನಿರ್ಮಿಸಲಾಗಿತ್ತು. ಸುಮಾರು ವರ್ಷಗಳಿಂದ ಕೆರೆಯ ಸುತ್ತ ಮುಳ್ಳು ಕಂಟಿ, ಬೇಲಿ ಗಿಡಗಳು ಬೆಳೆದು ಹೂಳು ತುಂಬಿ ಕೆರೆಯ ನೀರು ಕಲುಷಿತಗೊಂಡಿತ್ತು.

ಇದೀಗ ಅಮೃತ ಸರೋವರ ಯೋಜನಗೆ ಆಯ್ಕೆ ಮಾಡಿ ನರೇಗಾ ಯೋಜನೆ ಮೂಲಕ ಕುಡಿಯುವ ನೀರಿನ ಕೆರೆ ಅಭಿವೃದ್ಧಿಪಡಿಸಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಕಾರ್ಯವೈಖರಿ ಸ್ಥಳೀಯರ ಮೆಚ್ಚುಗೆಗೆ ಕಾರಣವಾಗಿದೆ.

ಅಂದಾಜು ಮೊತ್ತ ₹ 10ಲಕ್ಷ ವೆಚ್ಚದಲ್ಲಿ 307 ಮಾನವ ದಿನಗಳನ್ನು ಸೃಜಿಸಿ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿಗೆ ಕೂಲಿ ಹಣ ₹ 95ಸಾವಿರ ಹಾಗೂ ಸಾಮಾಗ್ರಿಗಳಿಗಾಗಿ ₹ 6.25 ಲಕ್ಷ ವ್ಯಯಿಸಲಾಗಿದೆ. 500ಅಡಿ ಉದ್ದ ಹಾಗೂ 300 ಅಡಿ ಅಗಲ ವ್ಯಾಪ್ತಿಯ 3 ಎಕರೆ 20ಗುಂಟೆ ವಿಸ್ತೀರ್ಣ ಹೊಂದಿರುವ ಕೆರೆ ಭರ್ತಿಗೆ ತುಂಗಭದ್ರಾ ಎಡದಂಡೆ ನಾಲೆಯ ನಂ.76ನೇ ವಿತರಣಾ ಕಾಲುವೆ ನೀರು ಹಾಗೂ ಮಳೆಯ ನೀರು ಸಂಗ್ರಹಿಸುವ ಯೋಜನೆ ರೂಪಿಸಲಾಗಿದೆ.

ಕೆರೆಯ ರಕ್ಷಣೆಗೆ ಸುತ್ತಲೂ ತಂತಿ ಬೇಲಿ ಹಾಕಲಾಗಿದೆ. ಕೆರೆಯ ನೀರನ್ನು ಶುದ್ಧೀಕರಿಸಿ ಪೂರೈಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರಿನ ಕೆರೆ ಹತ್ತಿರ ಈಚೆಗೆ ಸ್ವಾತಂತ್ರö್ಯ ಅಮೃತ ಮಹೋತ್ಸವದ ಪ್ರಯುಕ್ತ ರಾಷ್ಟಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕುಡಿಯುವ ನೀರಿನ ಕೆರೆ ಇರುವ ಸ್ಥಳ ಈಗ ಆಕರ್ಷಣೀಯ ತಾಣವಾಗಿ ಪರಿವರ್ತನೆಗೊಂಡಿದ್ದು ಗ್ರಾಮಸ್ಥರ ಸಂತಸಕ್ಕೆ ಕಾರಣವಾಗಿದೆ.

**

ಅಮೃತ ಸರೋವರ ಯೋಜನೆ ಅಡಿಯಲ್ಲಿ ತಾಲ್ಲೂಕಿನ ವಿವಿಧೆಡೆ ಇರುವ 5 ಕೆರೆಗಳನ್ನು ಪುನಶ್ಚೇತನಗೊಳಿಸುವ ಗುರಿ ಇದೆ.
ಅಣ್ಣಾರಾವ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ, ಮಾನ್ವಿ

**

ಬಹುದಿನಗಳ ಬೇಡಿಕೆಯಾಗಿದ್ದ ಅಮರೇಶ್ವರ ಕ್ಯಾಂಪಿನ ಕುಡಿಯುವ ನೀರಿನ ಕೆರೆಯನ್ನು ಅಭಿವೃದ್ಧಿಪಡಿಸಿರುವುದು ಶ್ಲಾಘನೀಯ.

-ವೆಂಕೋಬ ಹಿರೇಕೊಟ್ನೇಕಲ್, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT