ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾನ್ವಿ: ಪರಿಸರ ಜಾಗೃತಿಗೆ ಯುವಕರ ತಂಡ

ಗ್ರಾಮೀಣ ಜನರಿಗೆ ಉಚಿತ ಸಸಿಗಳ ವಿತರಣೆ, ನಿರಂತರ ಜನಜಾಗೃತಿ
Last Updated 3 ಜುಲೈ 2021, 19:30 IST
ಅಕ್ಷರ ಗಾತ್ರ

ಮಾನ್ವಿ: ತಾಲ್ಲೂಕಿನ ಪ್ರಮುಖ ವಾಣಿಜ್ಯ ಕೇಂದ್ರ ಪೋತ್ನಾಳ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಯುವಕರ ತಂಡವೊಂದು ಸ್ವಯಂ ಪ್ರೇರಣೆಯಿಂದ ಸದ್ದಿಲ್ಲದೆ ಪರಿಸರ ಜಾಗೃತಿ ಕಾರ್ಯದಲ್ಲಿ ಸಕ್ರೀಯವಾಗಿದೆ.

ಗ್ರಾಮೀಣ ಜನರಿಗೆ ಸಸಿಗಳ ವಿತರಣೆ, ಸಸಿಗಳನ್ನು ನೆಡುವ ವಿಧಾನ ಹಾಗೂ ಪೋಷಣೆ ಕುರಿತು ಜನಜಾಗೃತಿ ಮೂಡಿಸುತ್ತಿರುವ ಯುವಕರ ಕಾರ್ಯ ಹಿರಿಯರು ಹಾಗೂ ಸಂಘ ಸಂಸ್ಥೆಗಳ ಮೆಚ್ಚುಗೆಗೆ ಕಾರಣವಾಗಿದೆ.

ಖರಾಬದಿನ್ನಿ ಗ್ರಾಮದ ಪರಿಸರ ಪ್ರೇಮಿ ಯುವಕ ರವಿಗೌಡ, ಚನ್ನಬಸವನಾಯಕ ಗುಜ್ಜಲ್ ಮತ್ತವರ ಗೆಳೆಯರ ಬಳಗದಿಂದ ಪ್ರಮುಖ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವುದರ ಜತೆಗೆ ಪರಿಸರದ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

ರವಿಗೌಡ ಅವರು ಕಳೆದ 6ವರ್ಷಗಳಿಂದ ಎಸ್‍ಡಿಆರ್ ಫೌಂಡೇಶನ್ ಮೂಲಕ ಪರಿಸರ ಸಂರಕ್ಷಣೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಪೋತ್ನಾಳ ಭಾಗದ ಹಿರಿಯರು ಹಾಗೂ ಸಂಘ ಸಂಸ್ಥೆಗಳ ಪ್ರಮುಖರ ಸಹಾಯ, ಸಹಕಾರದಿಂದ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿದ್ದಾರೆ.

ಗ್ರಾಮಗಳ ಶಾಲಾ ಆವರಣ, ದೇವಸ್ಥಾನ, ಗ್ರಾಮ ಪಂಚಾಯಿತಿ ಕಚೇರಿ, ಮಾರುಕಟ್ಟೆ ಸ್ಥಳ ಹಾಗೂ ರೈತರ ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಪೋತ್ನಾಳದ ಸುತ್ತಲಿನ ಪ್ರತಿ ಗ್ರಾಮದಲ್ಲಿ ಸಸಿಗಳನ್ನು ನೆಟ್ಟು ಬೆಳೆಸಲು ಪ್ರತ್ಯೇಕ ಯುವಕರ ತಂಡಗಳನ್ನು ರಚಿಸಿದ್ದಾರೆ. ಆಯಾ ಗ್ರಾಮಗಳ ಯುವಕರ ತಂಡಗಳಿಗೆ ಹಿರಿಯರ ಮಾರ್ಗದರ್ಶನದಲ್ಲಿ ಸಸಿ ನೆಡುವ ಕಾರ್ಯದ ಜವಾಬ್ದಾರಿ ವಹಿಸಲಾಗಿದೆ.

ರವಿಗೌಡ ಆರಂಭದಲ್ಲಿ ಸ್ವಂತ ಹಣದಲ್ಲಿ ಸಸಿಗಳನ್ನು ಖರೀದಿಸಿ ಜನರಿಗೆ ಉಚಿತವಾಗಿ ವಿತರಿಸುತ್ತಿದ್ದರು. ಈಗ ಪೋತ್ನಾಳದ ಹಿರಿಯರು, ವರ್ತಕರು ರವಿಗೌಡ ಹಾಗೂ ಗೆಳೆಯರಿಗೆ ಸಸಿಗಳ ಖರೀದಿ ಮತ್ತು ಉಚಿತ ವಿತರಣೆಗೆ ಪ್ರೋತ್ಸಾಹಿಸುತ್ತಿದ್ದಾರೆ. ಈ ಬಾರಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ 20ದಿನಗಳಲ್ಲಿ ಸುಮಾರು 1ಸಾವಿರಕ್ಕೂ ಅಧಿಕ ಸಸಿಗಳನ್ನು ಪೋತ್ನಾಳ ಹಾಗೂ ಸುತ್ತಲಿನ ಗ್ರಾಮಗಳ ಪ್ರಮುಖ ಸ್ಥಳಗಳಲ್ಲಿ ನೆಡಲಾಗಿದೆ.

ಪೋತ್ನಾಳದ ಯುವಕರ ಪರಿಸರ ಜಾಗೃತಿ ಕಾರ್ಯಕ್ಕೆ ವಲಯ ಅರಣ್ಯಾಧಿಕಾರಿ ರಾಜೇಶ್ ನಾಯಕ ಕೂಡ ಸಾಥ್ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಪೋತ್ನಾಳದಲ್ಲಿ ಸಸಿಗಳನ್ನು ಬೆಳೆಸಿ ಜನರಿಗೆ ಉಚಿತವಾಗಿ ವಿತರಿಸಲು ನರ್ಸರಿ ಆರಂಭಿಸಲು ಯುವಕರು ನಿರ್ಧರಿಸಿದ್ದಾರೆ.

ಸಸಿಗಳನ್ನು ನೆಡುವುದರ ಜತೆಗೆ ಪೋಷಣೆ ಮಾಡುವ ವಿಧಾನ, ಪರಿಸರದ ಮಹತ್ವದ ಕುರಿತು ನಿರಂತರವಾಗಿ ಜನಜಾಗೃತಿ ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ. ಪರಿಸರ ಪ್ರೇಮಿ ರವಿಗೌಡ ಖರಾಬದಿನ್ನಿ ಅವರ ಸೇವೆ ಗುರುತಿಸಿ. ಮಾನ್ವಿ ತಾಲ್ಲೂಕಿನ ಉಟಕನೂರು ಶ್ರೀಮಠ, ರಾಯಚೂರಿನ ಕಲಾ ಸಂಕುಲ ಸಂಸ್ಥೆ, ಸಿಂಧನೂರಿನ ವನಸಿರಿ ಫೌಂಡೇಶನ್, ಮಾನ್ವಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸೇರಿ ಜಿಲ್ಲೆಯ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಿವೆ.

*
ಪೋತ್ನಾಳ ಗ್ರಾಮದಲ್ಲಿ ಸಸಿಗಳನ್ನು ಬೆಳೆಸಲು ನರ್ಸರಿ ಆರಂಭಿಸಿ ಸಾರ್ವಜನಿಕರಿಗೆ ಉಚಿತವಾಗಿ ಸಸಿಗಳ ವಿತರಣೆ ಹಾಗೂ ತರಬೇತಿ ನೀಡುವ ಉದ್ದೇಶ ಇದೆ.
–ರವಿಗೌಡ ಖರಾಬದಿನ್ನಿ, ಗೆಳೆಯರ ಬಳಗದ ಸದಸ್ಯ

*
ಗಿಡ–ಮರಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಪೋತ್ನಾಳದ ಗೆಳೆಯರ ಬಳಗದ ಸದಸ್ಯರು ಅರಣ್ಯ ಇಲಾಖೆಯ ಯೋಜನೆಗಳ ಜಾರಿಯಲ್ಲಿ ಹೆಚ್ಚು ಸಹಕಾರ ನೀಡುತ್ತಾರೆ.
–ರಾಜೇಶ ನಾಯಕ, ವಲಯ ಅರಣ್ಯಾಧಿಕಾರಿ, ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT