ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ ಉಪಚುನಾವಣೆಗೆ ಮತದಾನ ನಾಳೆ

ಮತಗಟ್ಟೆ ತಲುಪಿದ ಸಿಬ್ಬಂದಿ ಹಾಗೂ ಸಲಕರಣೆಗಳು
Last Updated 16 ಏಪ್ರಿಲ್ 2021, 16:34 IST
ಅಕ್ಷರ ಗಾತ್ರ

ಮಸ್ಕಿ (ರಾಯಚೂರು): ಜಿಲ್ಲೆಯ ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ಶನಿವಾರ ಮತದಾನ ಪ್ರಕ್ರಿಯೆ ಕೈಗೊಳ್ಳಲು ಶುಕ್ರವಾರವೇ ಮತಗಟ್ಟೆ ಸಿಬ್ಬಂದಿಯು ಸಲಕರಣೆಗಳ ಸಮೇತವಾಗಿ ಮತಗಟ್ಟೆಗಳಿಗೆ ತಲುಪಿದ್ದಾರೆ.

ಮಸ್ಕಿ ಪಟ್ಟಣದ ದೇವನಾಂಪ್ರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ತೆರಳಿದರು. ಇದಕ್ಕೂ ಪೂರ್ವದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಆರ್‌.ವೆಂಕಟೇಶಕುಮಾರ್‌, ಕ್ಷೇತ್ರದ ಚುನಾವಣಾಧಿಕಾರಿ ರಾಜಶೇಖರ್‌ ಡಂಬಳ ಸೇರಿದಂತೆ ಹಿರಿಯ ಅಧಿಕಾರಿಗಳು ಅಗತ್ಯ ಮಾರ್ಗಸೂಚಿಗಳನ್ನು ನೀಡಿದರು. ಕರ್ತವ್ಯಕ್ಕೆ ಗೈರುಹಾಜರಿಯಾದ ಮತ್ತು ಕರ್ತವ್ಯದ ಸ್ಥಳ ಬದಲಾವಣೆಗಳನ್ನು ಅಧಿಕಾರಿಗಳು ಪರಿಶೀಲಿಸಿ, ಸೂಕ್ತ ನಿಯೋಜನೆಗಳನ್ನು ಕೈಗೊಂಡರು.

ಇವಿಎಂ, ವಿವಿಪ್ಯಾಟ್‌, ಸೆಂಟ್ರಲ್‌ ಸಿಸ್ಟಮ್‌, ಸೂಚನಾ ಫಲಕಗಳು ಸೇರಿದಂತೆ ವಿವಿಧ ಸಲಕರಣೆಗಳನ್ನು ಮತಗಟ್ಟೆ ಅಧಿಕಾರಿಗಳಿಗೆ ಹಸ್ತಾಂತರಿಸಿ ಸೂಚನೆಗಳನ್ನು ನೀಡಲಾಯಿತು. ತಾಂತ್ರಿಕ ದೋಷಗಳು ಕಂಡುಬಂದಲ್ಲಿ ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಲಾಯಿತು. ಮತಗಟ್ಟೆ ಕೇಂದ್ರದಲ್ಲೇ ವಾಸ್ತವ್ಯ ಉಳಿದು, ಶನಿವಾರ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೂ ಮತದಾನ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ತಿಳಿಸಲಾಯಿತು.

ಕೋವಿಡ್‌ ಕಾರಣದಿಂದ ಹೆಚ್ಚುವರಿ 74 ಮತಗಟ್ಟೆಗಳನ್ನು ಪ್ರಾರಂಭಿಸಲಾಗಿದ್ದು, ಒಟ್ಟು 305 ಮತಗಟ್ಟೆಗಳಲ್ಲಿ ಒಟ್ಟು 2,369ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಾಲ್ಕು ಪ್ರದೇಶಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದ್ದು, ಈ ಪ್ರದೇಶದಲ್ಲಿ ಒಟ್ಟು ಏಳು ಮತಗಟ್ಟೆಗಳಿವೆ. 62 ಸೂಕ್ಷ್ಮ ಮತಗಟ್ಟೆಗಳಿವೆ. 153 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ಮಾಡಲಾಗುತ್ತಿದ್ದು, ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಒಟ್ಟು 427 ಇವಿಎಂ ಯಂತ್ರಗಳು, 427 ಸೆಂಟ್ರಲ್‌ ಸಿಸ್ಟಂ ಹಾಗೂ 519 ವಿವಿಪ್ಯಾಟ್‌ ಯಂತ್ರಗಳನ್ನು ಮತಗಟ್ಟೆಗಳಿಗೆ ರವಾನಿಸಲಾಗಿದೆ.

ಪ್ರತಿ ಮತಗಟ್ಟೆಯಲ್ಲೂ ಅಂಗವಿಕಲರು ಮತದಾನ ಮಾಡಲು ಅನುಕೂಲವಾಗುವಂತೆ ಗಾಲಿಕುರ್ಚಿಗಳನ್ನು ಇರಿಸಲಾಗಿದೆ. ಗಾಲಿಕುರ್ಚಿ ಚಲಿಸಲು ಮೆಟ್ಟಿಲುಗಳ ಬದಲು ರ‍್ಯಾಂಪ್‌ ಇವೆ. ಮತಗಟ್ಟೆಯಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಾಡಲಾಗಿದೆ. ವಿವಿಧ ಮತಗಟ್ಟೆಗಳಲ್ಲಿ ಒಟ್ಟು 610 ಸ್ವಯಂ ಸೇವಕರಿದ್ದಾರೆ.

ಸಖಿ ಮತಗಟ್ಟೆಗಳು: ಮಸ್ಕಿ ಪಟ್ಟಣದ ಬಾಲಕಿಯರ ಸರ್ಕಾರಿ ಪಿಯು ಕಾಲೇಜು (ಮತಗಟ್ಟೆ ಸಂ. 85) ಹಾಗೂ ತುರ್ವಿಹಾಳ ಪಟ್ಟಣದ ಗ್ರಾಮ ಪಂಚಾಯಿತಿ ಕಟ್ಟಡ (ಮತಗಟ್ಟೆ ಸಂ.213)ದಲ್ಲಿ ‘ಸಖಿ’ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ‌

ಕ್ಷೇತ್ರದಲ್ಲಿ ಒಟ್ಟು 2,407 ಅಂಗವಿಕಲ ಮತದಾರರಿದ್ದಾರೆ. ಅಂಧರು 289, ಮೂಕ–ಕಿವುಡರು 370, ದೈಹಿಕ ಅಂಗವಿಕಲರು 1,379 ಹಾಗೂ 399 ಇತರೆ ಅಂಗವಿಕರು ಇದ್ದಾರೆ.

ಮತಪೆಟ್ಟಿಗೆಗಳನ್ನು ರಾಯಚೂರಿನ ಎಸ್‌ಆರ್‌ಪಿಎಸ್‌ ಭದ್ರತಾ ಕೋಣೆಗೆ ಸಾಗಿಸಲಾಗುತ್ತದೆ. ಮೇ 2 ರಂದು ಮತಗಳ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT