ಬುಧವಾರ, ಜೂನ್ 29, 2022
26 °C
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ

ಸಾಮೂಹಿಕ ವಿವಾಹದಿಂದ ಸಮ ಸಮಾಜ ಸಾಧ್ಯ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಬ್ಬೂರು (ದೇವದುರ್ಗ ತಾಲ್ಲೂಕು): ಸಾಮೂಹಿಕ ವಿವಾಹಗಳ ಮೂಲಕ ಸಮ ಸಮಾಜ ನಿರ್ಮಾಣ ಸಾಧ್ಯವಾಗಬಲ್ಲದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಗಬ್ಬೂರು ಗ್ರಾಮದ ಗುರುವಿನ ಕುಟುಂಬದಿಂದ ಶುಕ್ರವಾರ ಆಯೋಜಿಸಿದ್ದ 75 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದರು.

ಸಂವಿಧಾನದ ಮೂಲ ಅಶಯವು ಈ ಮೂಲಕ ನೆರವೇರಬಲ್ಲದು. ಜಾತಿ ವ್ಯವಸ್ಥೆಯನ್ನು ದೇವರು ಸೃಷ್ಟಿಸಿಲ್ಲ. ಆದರೆ ಮನುಷ್ಯರು ಜಾತಿ ವ್ಯವಸ್ಥೆ ಸೃಷ್ಟಿಸಿಕೊಂಡು ಅಸಮಾನತೆ ಪೋಷಿಸುತ್ತಿದ್ದಾರೆ. ಇದರಿಂದ ಬಡವರು ಬಡವರಾಗಿಯೇ ಉಳಿದಿದ್ದು, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ ಎಂದರು.

ಸಮಾನವಾಗಿ ಬಾಳಬೇಕು ಎಂಬುದು ಸಮಾಜದಲ್ಲಿ ಪ್ರತಿಯೊಬ್ಬರಲ್ಲಿ ಬಂದರೆ ಮಾತ್ರ ಸಮಸಮಾಜ ನಿರ್ಮಾಣವಾಗುತ್ತದೆ. ಕೆಲವರು ಸಮಾಜ ಒಡೆಯುವ ಕೆಲಸ ಮಾಡಿ, ವಿಜೃಂಭಿಸುತ್ತಿರುವ ಈ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಮಾನವ ಧರ್ಮದ ಶ್ರೇಷ್ಠತೆಯನ್ನು ಸಾರಬೇಕಿದೆ. ಈ ಸಾಮೂಹಿಕ ವಿವಾಹದಲ್ಲಿ ಭಾಗಿಯಾದವರಿಗೆಲ್ಲ ಸಮಾನ ಮನಸ್ಸು ಸೃಷ್ಟಿಯಾಗಲಿ ಎಂದು ಹೇಳಿದರು.

ಸ್ವಾರ್ಥಕ್ಕಾಗಿ ಧರ್ಮ ಹಾಗೂ ಜಾತಿಗಳ ಹೆಸರಿನಲ್ಲಿ ಭಾವನೆಗಳನ್ನು ಕೆರಳಿಸುತ್ತಿದ್ದು, ಈ ಅಪಾಯಕ್ಕೆ ತಡೆಯೊಡ್ಡಬೇಕಿದೆ. ಸ್ವಾರ್ಥ ರಾಜಕೀಯಕ್ಕಾಗಿ ಸಮಾಜವನ್ನು ಬಲಿಕೊಡುತ್ತಿರುವುದು ಕಳವಳಕಾರಿ ಎಂದರು.

ಮದುವೆ ಮಾಡುವುದು ಈ ಕಾಲದಲ್ಲಿ ಸುಲಭವಲ್ಲ. ಯಾವುದೇ ಕಾರಣಕ್ಕೂ ಬಡವರು ಶ್ರೀಮಂತರನ್ನು ಅನುಸರಿಸಿ, ದುಂದುವೆಚ್ಚದ ಮದುವೆ ಮಾಡಬಾರದು. ದುಬಾರಿ ಮದುವೆ ಮಾಡಿದ ಬಡವರು ಸಾಲಗಾರರಾಗುತ್ತದೆ. ಮದುವೆಯಲ್ಲಿ ಶ್ರೀಮಂತರು ತಮ್ಮ ಸಂಪತ್ತನ್ನು ಪ್ರದರ್ಶಿಸುತ್ತಾರೆ. ಸರಳ ರೀತಿಯಲ್ಲಿ ಮದುವೆ ಮಾಡಿದರೂ ಪತಿ, ಪತ್ನಿ ಆಗುತ್ತಾರೆ ಎಂಬುದನ್ನು ನೆನಪಿಡಬೇಕು ಎಂದು ಕಿವಿಮಾತು ಹೇಳಿದರು.

ಸಾನಿಧ್ಯ ವಹಿಸಿದ್ದ ಬಾಳೆಹೊನ್ನೂರು ರಂಭಾಪುರಿ ಮಠದ ಪೀಠಾಧಿಪತಿ ವೀರಪ್ರಸನ್ನ ಸೋಮೇಶ್ವರ ಶಿವಾಚಾರ್ಯರು ಮಾತನಾಡಿ, ಸಮಾಜದಲ್ಲಿ ಸಂಘರ್ಷ ಒಳ್ಳೆಯದಲ್ಲ. ಪ್ರತಿಯೊಬ್ಬರೂ ಪ್ರೀತಿ, ಸೌಹಾರ್ದದಿಂದ ಬದುಕಬೇಕು ಎಂದರು.

‘ಇದುವರೆಗೂ ಸಿದ್ದರಾಮಯ್ಯ ರಂಭಾಪುರ ಮಠಕ್ಕೆ ಯಾವತ್ತೂ ಬಂದಿಲ್ಲ. ಈ ಮದುವೆ ಕಾರ್ಯಕ್ರಮಕ್ಕೆ ನಾನು ಮತ್ತು ಅವರು ಬಂದಿದ್ದು ಯೋಗಾಯೋಗ. ಸಿದ್ದರಾಮಯ್ಯ ರಂಭಾಪುರಿ ಮಠಕ್ಕೆ ಭೇಟಿ ನೀಡಬೇಕು’ ಎಂದು ಆಹ್ವಾನಿಸಿದರು.

ಬೂದಿ ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಬೂದಿಬಸವೇಶ್ವರ ಶಿವಾಚಾರ್ಯ, ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ,  ನವಲಕಲ್ ಮಠದ ಸೋಮನಾಥ ಶಿವಾಚಾರ್ಯ, ಗುರುವಿನ ಸಿದ್ದಯ್ಯಸ್ವಾಮಿ, ಶಾಸಕರಾದ ಬಸನಗೌಡ ದದ್ದಲ, ಬಸನಗೌಡ ತುರ್ವಿಹಾಳ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ನಾಯಕ, ಎಐಸಿಸಿ ಕಾರ್ಯದರ್ಶಿ ಎನ್‌.ಎಸ್‌.ಬೋಸರಾಜ, ಮುಖಂಡರಾದ ಹಂಪನಗೌಡ ಬಾದರ್ಲಿ, ಕೆ.ವಿರೂಪಾಕ್ಷಪ್ಪ, ಬಸನಗೌಡ ಬಾದರ್ಲಿ, ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಎ.ವಸಂತಕುಮಾರ್‌, ರವಿ ಬೋಸರಾಜ, ಕೆ.ಶಾಂತಪ್ಪ, ರುದ್ರಪ್ಪ ಅಂಗಡಿ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು