ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಅಕ್ರಮ ಸ್ಥಗಿತವಾಗದಿದ್ದರೆ ಡಿಸಿ, ಎಸ್‌ಪಿ ಹೊಣೆ

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಂದ ಅಧಿಕಾರಿಗಳಿಗೆ ಎಚ್ಚರಿಕೆ
Last Updated 25 ಜನವರಿ 2021, 12:32 IST
ಅಕ್ಷರ ಗಾತ್ರ

ರಾಯಚೂರು: ‘ಜಿಲ್ಲೆಯಲ್ಲಿ ಮರಳು ಅಕ್ರಮ ಮತ್ತು ಮಟಕಾ ಮುಂದುವರಿದರೆ ಅದಕ್ಕೆಲ್ಲ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರನ್ನು ಹೊಣೆಗಾರ ಮಾಡಲಾಗುವುದು’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಜಿಲ್ಲೆಯ ಯಾವುದೇ ಅಧಿಕಾರಿಯಿಂದ ಇದುವರೆಗೂ ಒಂದು ಕಪ್‌ ಚಹಾ ಕುಡಿದಿಲ್ಲ. ಒಂದು ಪೈಸೆ ಹಣ ಪಡೆದಿಲ್ಲ. ಆದರೆ ನನ್ನನ್ನು ದುರುಪಯೋಗ ಮಾಡಿಕೊಳ್ಳುವ ಕೆಲಸ ನಡೆದಿದೆ. ಅಕ್ರಮ ಮರಳು ದಂಧೆ, ಮಟಕಾ ನಡೆಯುತ್ತಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ. ಅಕ್ರಮಗಳಿಗೆ ಅಧಿಕಾರಿಗಳೇ ಅವಕಾಶ ಕೊಡುತ್ತಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡರು.

‘ಅಕ್ರಮ ಮರಳಿಗೆ ಅನುಮತಿ ನೀಡುತ್ತಿರುವ ಗಣಿ ಇಲಾಖೆಯ ಹಿರಿಯ ವಿಜ್ಞಾನಿಯನ್ನು ಅಮಾನತು ಮಾಡಬೇಕು. ಯಾವುದೇ ಕಾರಣಕ್ಕೂ ಅಕ್ರಮ ಮರಳುಗಾರಿಕೆ‌ ನಡೆಯಬಾರದು. ಎಷ್ಟೇ ಪ್ರಭಾವಿ ಇದ್ದರೂ ಪ್ರಕರಣ ದಾಖಲಿಸಬೇಕು. ಅಧಿಕೃತ ಕೇಂದ್ರಗಳಿಂದಲೇ ಮರಳು ತೆಗದುಕೊಂಡು ಹೋಗಬೇಕು. ಯಾವುದೇ ರಾಜಕಾರಣಿ ಫೋನ್ ಮಾಡಿದರೂ ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಬೇಕು. ಒಂದೇ ಒಂದುಮಟಕಾ ಪ್ರಕರಣ ಕಂಡುಬಂದರೆ, ಸಂಬಂಧಿಸಿದ ಠಾಣೆಯ ಪಿಎಸ್‌ಐ ಅಮಾನತು ಮಾಡಬೇಕು’ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಸೂಚಿಸಿದರು.

‘ಮಿತಿಗಿಂತಲೂ ಹೆಚ್ಚು ಮರಳು ಸಾಗಿಸುವ ವಾಹನಗಳ ಮೇಲೆ‌ನಿಗಾ ವಹಿಸಬೇಕಾಗಿದ್ದು ಡಿಸಿ, ಎಸ್‌ಪಿ ಹಾಗೂ ಆರ್‌ಟಿಓ ಅವರ ಜವಾಬ್ದಾರಿ. ಈ ಬಗ್ಗೆ ಆರ್‌ಟಿಒ ಏಕೆ ದೂರು ದಾಖಲಿಸಿಕೊಂಡಿಲ್ಲ. ಹೆಚ್ಚು ಭಾರದ ಸಾಗಿಸುವ ವಾಹನಗಳಿಗೆ ದಂಡ ವಿಧಿಸುವ ಕೆಲಸ ಕೂಡಲೇ ಆರಂಭಿಸಬೇಕು.ಅಕ್ರಮ‌ ಮರಳುಗಾರಿಕೆ ನಡೆಯುವ ಮಾಹಿತಿ ಎಸ್‌ಪಿ ಅವರಿಗೆ ಗೊತ್ತಿದ್ದರೂ ಏಕೆ‌ ಕ್ರಮ ಕೈಗೊಳ್ಳುತ್ತಿಲ್ಲ. ಇದರಲ್ಲಿ ಶಾಮೀಲಾಗಿದ್ದೀರಿ ಎನ್ನುವುದನ್ನು ತೋರಿಸುತ್ತದೆ. ಇನ್ನು ಮುಂದೆಯೂ ಕ್ರಮವಾಗದಿದ್ದರೆ ನಾನೂ ಅದರಲ್ಲಿ ಶಾಮೀಲಿದ್ದೇವೆ ಎನ್ನುವ ಭಾವನೆ ಜನರಲ್ಲಿ ಬರುತ್ತದೆ. ಅಕ್ರಮ ಸಹಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

ಕಾಲುವೆಗೆ ನೀರು: ‘ಈಗಿರುವ ನೀರಿನ ಪ್ರಮಾಣ ಹೆಚ್ವಿಸಿ ಟಿಎಲ್‌ಬಿಸಿ 69 ಮೈಲಿಗೆ ತಲುಪಿಸಬೇಕಾಗಿದೆ. ಹೊಸಪೇಟೆಯಲ್ಲಿ ಭಾನುವಾರ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ಅವರೊಂದಿಗೆ ಸಭೆ ಮಾಡಿದ್ದೇವೆ.‌ ಅಧಿಕಾರಿಗಳು ಕಾಲುವೆ ಭಾಗಕ್ಕೆ ಪರಿಶೀಲಿಸದೆ ಇರುವುದರಿಂದ ಈ ಸಮಸ್ಯೆ ಉದ್ಭವ ಆಗುತ್ತಿದೆ.‌ ಅನಗತ್ಯ ನೀರು ಪಡೆಯುವುದಕ್ಕೆ ಕಡಿವಾಣ ಹಾಕಬೇಕು. ಭದ್ರಾದಿಂದ‌ 4 ಟಿಎಂಸಿ ನೀರು ಪಡೆಯುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಬೆಳೆ ಒಣಗಲು ಬಿಡಬಾರದು. ನವಲಿ ಜಲಾಶಯ ಅನುಷ್ಠಾನಕ್ಕೆ ಸಚಿವ ಸಂಪುಟದಲ್ಲಿ‌ ಚರ್ಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಶಾಶ್ವತ ಪರಿಹಾರ ಆಗಲಿದೆ’ ಎಂದರು.

‘ಜಿಲ್ಲೆಯಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿತೀರಗಳಿಂದ ಸ್ಥಳಾಂತರಿಸುವ ಗ್ರಾಮಗಳಿಗೆ ಸಂಬಂಧಿಸಿ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಳ್ಳಬೇಕಿರುವ ಕಾಮಗಾರಿಗಳನ್ನು ಕೂಡಲೇ ಜಿಲ್ಲಾ ಪಂಚಾಯಿತಿ ಸಿಇಒ ಅವರು ಆರಂಭಿಸಬೇಕು’ ಎಂದು ಸೂಚಿಸಿದರು.ಶಾಸಕ ಶಿವನಗೌಡ ಮಾತನಾಡಿ, ಹಿಂದಿನ ಸಿಇಒ ಇದ್ದಾಗ ಉದ್ಯೋಗ ಖಾತ್ರಿ‌ ಜಾರಿ ವೇಗವಾಗಿತ್ತು. ಈಗ ವೇಗ ಕಡಿಮೆ ಆಗಿದೆ. ಇದಕ್ಕೆ ಕಾರಣ ಏನು ಎಂಬುದನ್ನು ತುಲನೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಸಿಇಒ ತನ್ವೀರ್‌ ಆಸೀಫ್‌ ಅವರು ಮಾತನಾಡಿ, ಕಾಮಗಾರಿಗಳಿಗೆ ಪೇಮೆಂಟ್‌ ಮಾಡುವ ವಿಷಯದಲ್ಲಿ ರಾಯಚೂರು ಜಿಲ್ಲೆ ರಾಜ್ಯದಲ್ಲೇ ಮುಂದಿದೆ. ರಸ್ತೆ ಜಂಗಲ್‌ ಕಟಿಂಗ್‌ ಕೆಲಸ ಮಾಡುವುದಕ್ಕೆ ಮತ್ತು ಸ್ಥಳಾಂತರವಾಗುವ ಗ್ರಾಮಗಳಲ್ಲಿ ಕೆಲಸ ಆರಂಭಿಸುವುದಕ್ಕೆ ತಿಳಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಮಾತನಾಡಿ, ಮರಳು ಅಕ್ರಮ ತಡೆಗೆ ಸಂಬಂಧಿಸಿ ಆರ್‌ಟಿಒ ಅವರಿಗೆ ಎರಡು ನೋಟಿಸ್‌ಗಳನ್ನು ನೀಡಲಾಗಿದೆ. ಪೊಲೀಸರಿಗೆ ಮತ್ತು ಗಣಿ ಅಧಿಕಾರಿಗಳಿಗೂ ಕೆಲವು ಸೂಚನೆ ನೀಡಿ ಅನುಷ್ಠಾನ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 87 ಕಂದಾಯ ಗ್ರಾಮಗಳನ್ನು ಗುರುತಿಸಿ ಪ್ರಸ್ತಾವನೆ ಕಳುಹಿಸಲಾಗಿದೆ. ಅಲ್ಲಿಂದ ಪ್ರತಿಕ್ರಿಯೆ ಬಂದಿಲ್ಲ. ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆ ಸಂಬಂಧ ಮತ್ತೆಮತ್ತೆ ವಿವರಣೆ ಕೇಳುತ್ತಿರುವುದರಿಂದ ನನೆಗುದಿಗೆ ಬಿದ್ದಿವೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಸಂಸದ ಕರಡಿ ಸಂಗಣ್ಣ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT