ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಠಾಣೆ ಎದುರು ಶಾಸಕಿ ಅಹೋರಾತ್ರಿ ಧರಣಿ

ದೇವದುರ್ಗ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲು
Published 13 ಫೆಬ್ರುವರಿ 2024, 0:08 IST
Last Updated 13 ಫೆಬ್ರುವರಿ 2024, 0:08 IST
ಅಕ್ಷರ ಗಾತ್ರ

ರಾಯಚೂರು: ‘ರಾಜಕೀಯ ದುರುದ್ದೇಶದಿಂದ ನನ್ನ ಕುಟುಂಬದ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಅಲ್ಲದೇ ನನ್ನ ಆಪ್ತ ಸಹಾಯಕನ ಮೇಲೆ ಪೊಲೀಸರು ದೌರ್ಜನ್ಯ ಎಸಗಿ ಉದ್ದೇಶ ಪೂರ್ವಕವಾಗಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ’ ಎಂದು ಆರೋಪಿಸಿ ಶಾಸಕಿ ಕರೆಮ್ಮ ನಾಯಕ ಜೆಡಿಎಸ್ ಕಾರ್ಯಕರ್ತರೊಂದಿಗೆ ದೇವದುರ್ಗ ಪೊಲೀಸ್‌ ಠಾಣೆ ಎದುರು ಅಹೋರಾತ್ರಿ ಧರಣಿ ನಡೆಸಿದರು.

‘ಕಾನ್‌ಸ್ಟೆಬಲ್ ಮೇಲೆ ನನ್ನ ಪುತ್ರ ಸೇರಿ ಯಾರೇ ಹಲ್ಲೆ ಮಾಡಿದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ. ಆದರೆ, ಸುಳ್ಳು ಆರೋಪ ಹಾಗೂ ರಾಜಕೀಯ ತೇಜೋವಧೆಗೆ ಪ್ರಯತ್ನಿಸುವುದನ್ನು ಸಹಿಸಿಕೊಳ್ಳಲಾಗದು’ ಎಂದು ಶಾಸಕಿ ಕರೆಮ್ಮ ಹೇಳಿದರು.

‘ನನ್ನ ಆಪ್ತ ಸಹಾಯಕ ಇಲಿಯಾಸ್ ಅವರನ್ನು ಪೊಲೀಸರು ಸರ್ಕಾರಿ ಆಸ್ಪತ್ರೆಯಿಂದ ಎಳೆದು ತಂದು ದೌರ್ಜನ್ಯ ಎಸಗಿದ್ದಾರೆ. ಅವರ ಮೇಲೆ ಉದ್ದೇಶ ಪೂರ್ವಕವಾಗಿ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ. ನಾನು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದಲೇ ಆಯ್ಕೆಯಾಗಿರುವೆ. ಇಂತಹ ಸುಳ್ಳು ಜಾತಿ ನಿಂದನೆ ಪ್ರಕರಣ ಸಹಿಸಲ್ಲ’ ಎಂದು ಎಚ್ಚರಿಸಿದರು.

ಪೊಲೀಸ್‌ ಇನ್‌ಸ್ಪೆಕ್ಟರ್ ಅಶೋಕ ಸದಲಗಿ ಹಾಗೂ ಐವರು ಪೊಲೀಸ್‌ ಕಾನ್‌ಸ್ಟೆಲ್‌ಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸ್‌ ಠಾಣೆಯ ಅಧಿಕಾರಿಗಳಿಗೆ ಸೂಚಿಸಿದರು. ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ್ ಅವರಿಗೂ ಮೌಖಿಕ ದೂರು ನೀಡಿದರು. ಆದರೆ ಪೊಲೀಸ್‌ ಅಧಿಕಾರಿಗಳು ದೂರು ದಾಖಲಿಸಲು ಹಿಂದೇಟು ಹಾಕಿದರು.

ಕಾರ್ಯಕರ್ತರು ತಂದಿದ್ದ ಊಟ ಮಾಡಿ ಧರಣಿ ಮುಂದುವರಿಸಿದರು. ಮಧ್ಯರಾತ್ರಿ ಸ್ಥಳಕ್ಕೆ ಬಂದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ದಂಡಿನ್ ಅವರು ಶಾಸಕಿ ಮನವೊಲಿಸುವ ಪ್ರಯತ್ನ ಮಾಡಿದರೂ ಪ್ರಯತ್ನ ಫಲಿಸಲಿಲ್ಲ. ಹೀಗಾಗಿ ಬೆಳಗಿನ ಜಾವ 4 ಗಂಟೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಬಿ. ಅವರು ದೇವದುರ್ಗ ಪೊಲೀಸ್ ಠಾಣೆಗೆ ಬಂದು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು.

‘ಶಾಸಕರು ಕೊಡುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಭರವಸೆ ನೀಡಿದ ನಂತರ ಬೆಳಿಗ್ಗೆ 6 ಗಂಟೆಗೆ ಪ್ರತಿಭಟನೆ ಕೈಬಿಟ್ಟರು.

‘ದೇವದುರ್ಗ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ಗಳಾದ ಹನುಮಂತರಾಯ, ಹನುಮೇಶ ಹಾಗೂ ಮಹೇಶ ವಿರುದ್ಧ ಐಪಿಸಿ 324, 341, 506 ಮತ್ತು 504 ರಡಿ ಪ್ರಕರಣ ದಾಖಲಾಗಿದೆ. ಪೊಲೀಸ್‌ ಇನ್‌ಸ್ಪೆಕ್ಟರ್ ಅಶೋಕ ಸದಲಗಿ ಅವರನ್ನು ಇಲಾಖೆ ವಿಚಾರಣೆಗೆ ಒಳಪಡಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಡಿವೈಎಸ್‌ಪಿ ದತ್ತಾತ್ರೇಯ ಕಾರ್ನಾಡ್ ತಿಳಿಸಿದರು.

ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಶಾಸಕಿ ಪುತ್ರ ಸಂತೋಷ ನಾಯಕ, ಶಾಸಕಿ ಆಪ್ತ ಕಾರ್ಯದರ್ಶಿ ಇಲಿಯಾಸ್, ತಿಮ್ಮಾರೆಡ್ಡಿ, ಮಲ್ಲಪ್ಪ, ರಫಿಕ್, ದಾವುದ್‌ ಆವಂತಿ, ಭೀಮಣ್ಣ ಹಾಗೂ ರಮೇಶ ಕರ್ಕಿಹಳ್ಳಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಐಬಿಗೆ ಕರೆಸಿಕೊಂಡು ಹೊಡೆದರು: ಕಾನ್‌ಸ್ಟೆಬಲ್ ಆರೋ‍ಪ

‘ಶಾಸಕಿ ಪುತ್ರ ಸಂತೋಷ, ಸಹೋದರ ತಿಮ್ಮರಡ್ಡಿ ಹಾಗೂ ಪಿಎ ಇಲಿಯಾಸ್ ಸೇರಿ 15ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರಕ್ಕೆ ಕರೆಯಿಸಿಕೊಂಡು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೆಡ್ ಕಾನ್‌ಸ್ಟೆಬಲ್ ಹನುಮಂತರಾಯ ಆರೋಪಿಸಿದ್ದಾರೆ.

‘ಶನಿವಾರ ತಾಲ್ಲೂಕಿನ ದೊಂಡಂಬಳಿ ಗ್ರಾಮದಲ್ಲಿ ಮರಳು ಅಕ್ರಮ ಸಾಗಿಸುತ್ತಿದ್ದ ಜೆಡಿಎಸ್ ಕಾರ್ಯಕರ್ತರಿಗೆ ಸೇರಿದ್ದ ಎನ್ನಲಾದ ಎರಡು ಟ್ರ್ಯಾಕ್ಟರ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಫೋನ್‌ ಮಾಡಿ ಕರೆಯಿಸಿಕೊಂಡು ಹೊಡೆದಿದ್ದಾರೆ’ ಎಂದು ಹೇಳಿದ್ದಾರೆ.

‘ದೊಂಡಂಬಳಿ ಗ್ರಾಮದಲ್ಲಿ ಮರಳು ಅಕ್ರಮ ಸಾಗಿಸುತ್ತಿರುವ ಬಗ್ಗೆ ಬಿಟ್ ಪೊಲೀಸರಾದ ಪ್ರೇಮಾ ಹಾಗೂ ಅಲ್ಲಭಕ್ಷ ಪೊಲೀಸ್ ಠಾಣೆಗೆ ಮಾಹಿತಿ ನೀಡದೆ ಇರುವುದು ಘಟನೆಗೆ ಮುಖ್ಯ ಕಾರಣ’ ಎಂದು ಪೊಲೀಸ್ ವಲಯದಲ್ಲಿ ಕೇಳಿ ಬರುತ್ತಿದೆ.

ಶಾಸಕರ ಆಪ್ತ ಸಹಾಯಕ ಪೊಲೀಸ್‌ ಕಾನ್‌ಸ್ಟೆಬಲ್‌ಗೆ ಕರೆ ಮಾಡಿ ಅತಿಥಿಗೃಹಕ್ಕೆ ಬರುವಂತೆ ಒತ್ತಾಯಿಸುತ್ತಿರುವ ಹಾಗೂ ಪೊಲೀಸ್‌ ಕಾನ್‌ಸ್ಟೆಬಲ್‌ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಠಾಣೆಯ ಎದುರು ಕುಳಿತು ಊಟ ಮಾಡಿದ ಶಾಸಕಿ ಹಲ್ಲೆ: ಆತಂಕದಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ಗಳು ಹೆಚ್ಚಿದ ಅಕ್ರಮ ಸಾಗಣೆ ದಂದೆಕೋರರ ದಬ್ಬಾಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT