ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಸ್ಕಿ: ಅಭಿವೃದ್ಧಿ ಕಾಣದ ವಾರದ ಸಂತೆ ಮಾರುಕಟ್ಟೆ

Published 4 ಜುಲೈ 2024, 6:16 IST
Last Updated 4 ಜುಲೈ 2024, 6:16 IST
ಅಕ್ಷರ ಗಾತ್ರ

ಮಸ್ಕಿ: ಪುರಸಭೆಗೆ ವರ್ಷಕ್ಕೆ ಲಕ್ಷಗಟ್ಟಲೇ ವರಮಾನ ನೀಡುವ ಪಟ್ಟಣದ ವಾರದ ತರಕಾರಿ ಸಂತೆ ಮಾರುಕಟ್ಟೆ ಅಭಿವೃದ್ಧಿಯಿಂದ ವಂಚಿತಗೊಂಡಿದೆ. ಮಾರುಕಟ್ಟೆಗೆ ಬರುವ ವ್ಯಾಪಾರಿಗಳು ಪರದಾಡುವಂತಾಗಿದೆ.

ಅತಿದೊಡ್ಡ ವಾರದ ಮಾರುಕಟ್ಟೆ ಇದಾಗಿದೆ. ತಾಲ್ಲೂಕಿನ ವಿವಿಧ ಹಳ್ಳಿಗಳ ರೈತರು ತರಕಾರಿ, ಒಣ ಮೆಣಸಿನಕಾಯಿ, ಕಾಳು–ಕಡಿ ಮಾರಾಟಕ್ಕೆ ಈ ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ.

ಪ್ರತಿ ವರ್ಷ ಮಾರುಕಟ್ಟೆ ಕರ ಸಂಗ್ರಹಕ್ಕೆ ಪುರಸಭೆ ಬಹಿರಂಗ ಹರಾಜಿನ ಮೂಲಕ ಟೆಂಡರ್ ನಡೆಸುತ್ತದೆ. ಕಳೆದ ವರ್ಷ ₹8 ಲಕ್ಷಕ್ಕೆ ಟೆಂಡರ್ ಆಗಿತ್ತು. ಅದು ಈ ವರ್ಷ ಜಿಎಸ್‌ಟಿ ಸೇರಿ ₹10.5 ಲಕ್ಷಕ್ಕೆ ಆಗಿದೆ. ವರ್ಷಕ್ಕೆ ಲಕ್ಷಗಟ್ಟಲೇ ವರಮಾನ ನೀಡುವ ಈ ಮಾರುಕಟ್ಟೆಯಲ್ಲಿ ಅಭಿವೃದ್ಧಿ ಕುಂಟಿತಗೊಂಡಿದೆ.

ಮಾರುಕಟ್ಟೆಯಲ್ಲಿ ಶೌಚಾಲಯ ವ್ಯವಸ್ಥೆ ಬಿಟ್ಟರೆ ಕುಡಿಯುವ ನೀರು, ಮಳೆ ಬಂದರೆ ರಕ್ಷಣಾ ವ್ಯವಸ್ಥೆ ಸೇರಿ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. ಮಳೆಗಾಲದಲ್ಲಿ ತರಕಾರಿ ಮಾರಾಟಕ್ಕೆ ಬಂದ ರೈತರು ಪರದಾಡುವ ಸ್ಥಿತಿ ಇದೆ. ಮಳೆ ನೀರಿಗೆ ತರಕಾರಿಗಳು ಕೊಚ್ಚಿಹೋಗಿ ರೈತರು ಸಂಕಷ್ಟಕ್ಕೆ ಸಿಲುಕಿದ ಉದಾಹರಣೆಗಳೂ ಸಾಕಷ್ಟಿವೆ. ವ್ಯಾಪಾರಿಗಳು ಕುಳಿತು ವ್ಯಾಪಾರ ಮಾಡಲು ಕಟ್ಟಿಸಿದ ಕಟ್ಟೆಗಳು ಶಿಥಿಲಗೊಂಡಿವೆ. ಕೆಲವರು ಅವುಗಳ ಮೇಲೆ ವ್ಯಾಪಾರ ಮಾಡುತ್ತಿದ್ದರೆ, ಮತ್ತೆ ಕೆಲವರು ನೆಲದ ಮೇಲೆ ಕುಳಿತು ತರಕಾರಿ ಮಾರಾಟ ಮಾಡುತ್ತಿದ್ದಾರೆ.

ಮಾರುಕಟ್ಟೆ ಅಭಿವೃದ್ಧಿಗೆ ಮುಂದಾದ ಶಾಸಕ ಆರ್.ಬಸನಗೌಡ ತುರುವಿಹಾಳ ಪುರಸಭೆಯಿಂದ ಹಣ ಮೀಸಲಿಟ್ಟು ಟೆಂಡರ್ ಕರೆಸುವಲ್ಲಿ ಯಶಸ್ವಿಯಾದರು. ಮಾರುಕಟ್ಟೆ ಅಭಿವೃದ್ಧಿಗೆ ಭೂಮಿ ಪೂಜೆ ಸಹ ಮಾಡಿದರೂ, ಆದರೆ, ಕೆಲವು ಕಾರಣಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ. ಕಾರಣ ಗುತ್ತಿಗೆದಾರರು ಕಾಮಗಾರಿ ಆರಂಭಿಸಲು ಆಗದೇ ತ್ರಿಶಂಖು ಸ್ಥಿತಿ ಎದುರಿಸುವಂತಾಗಿದೆ. ಶೀಘ್ರ ಮಾರುಕಟ್ಟೆ ಅಭಿವೃದ್ಧಿಯಾಗುತ್ತದೆ ಎಂದು ಕನಸು ಕಂಡಿದ್ದ ರೈತರ ಕನಸು ಕನಸಾಗಿಯೇ ಉಳಿದಿದೆ. ಶಾಸಕರು, ಪುರಸಭೆ ಅಧಿಕಾರಿಗಳು ಕೂಡಲೇ ಸಮಸ್ಯೆ ಇತ್ಯರ್ಥಪಡಿಸಿ ಕಾಮಗಾರಿ ಆರಂಭಿಸಿ ಸಂತೆ ಮಾರುಕಟ್ಟೆ ಅಭಿವೃದ್ಧಿ ಪಡಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT