ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು| ಪಾಳುಬಿದ್ದ ಶಿಕ್ಷಕರ ವಸತಿ ಗೃಹಗಳು

ಶಿಕ್ಷಣ ಇಲಾಖೆಗೆ ‘ಗುರು ಸದನ’ ಹಸ್ತಾಂತರಕ್ಕೆ ನಿರ್ಲಕ್ಷ್ಯ
Last Updated 14 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಮಾನ್ವಿ: ತಾಲ್ಲೂಕಿನ ಪೋತ್ನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹತ್ತಿರ ಶಿಕ್ಷಕರ ವಸತಿಗಾಗಿ ನಿರ್ಮಿಸಲಾಗಿದ್ದ ‘ಗುರು ಸದನ’ ವಸತಿ ಗೃಹಗಳ ಸಮುಚ್ಚಯ ದಶಕ ಕಳೆದರೂ ಬಳಕೆಯಾಗದೆ ನಿರುಪಯುಕ್ತವಾಗಿವೆ.

ತಾಲ್ಲೂಕಿನ ವಿವಿಧೆಡೆ ಸರ್ಕಾರದ ಲಕ್ಷಾಂತರ ರೂಪಾಯಿ ಅನುದಾನದಲ್ಲಿ ನಿರ್ಮಿಸಲಾದ ಸಮುದಾಯ ಭವನ, ವಸತಿ ಗೃಹಗಳು ದುರ್ಬಳಕೆಯಾಗುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿವೆ.

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುವ ಶಿಕ್ಷಕರ ವಸತಿಗಾಗಿ 2008–09ನೇ ಸಾಲಿನಲ್ಲಿ ಅಂದಿನ ರಾಜ್ಯ ಸರ್ಕಾರ ‘ಗುರು ಸದನ’ ಹೆಸರಿನಡಿ ವಸತಿ ಗೃಹಗಳ ನಿರ್ಮಾಣಕ್ಕೆ ಕ್ರಮ ಕೈಗೊಂಡಿತ್ತು. ತಾಲ್ಲೂಕಿನ ಕವಿತಾಳ, ಪೋತ್ನಾಳ ಹಾಗೂ ಕುರ್ಡಿ ಗ್ರಾಮಗಳಲ್ಲಿ ಶಿಕ್ಷಕರ ವಾಸಕ್ಕೆ ಅನುಕೂಲ ಕಲ್ಪಿಸುವ 8 ಮನೆಗಳ ಸುಸಜ್ಜಿತ ವಸತಿ ಗೃಹಗಳ ನಿರ್ಮಾಣಕ್ಕೆ ಮಂಜೂರಾತಿ ದೊರಕಿತ್ತು.

ಕವಿತಾಳ ಹಾಗೂ ಪೋತ್ನಾಳ ಗ್ರಾಮಗಳಲ್ಲಿ ವಸತಿ ಗೃಹಗಳ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿದ್ದ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಕುರ್ಡಿ ಗ್ರಾಮದಲ್ಲಿ ಮಾತ್ರ ಕಾಮಗಾರಿ ಅಪೂರ್ಣಗೊಳಿಸಿದ್ದರು. ಕವಿತಾಳದಲ್ಲಿ ನಿರ್ಮಾಣವಾದ ಕಟ್ಟಡವನ್ನು ಮಾತ್ರ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿದ ಕಾರಣ ಆ ಭಾಗದಲ್ಲಿ ಸೇವೆ ಸಲ್ಲಿಸುವ ಶಿಕ್ಷಕರಿಗೆ ಮನೆಗಳ ಹಂಚಿಕೆ ಮೂಲಕ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪೋತ್ನಾಳ ಗ್ರಾಮದಲ್ಲಿ ಕಟ್ಟಡದ ಕಾಮಗಾರಿ ಗುತ್ತಿಗೆ ಪಡೆದಿದ್ದ ನಿರ್ಮಿತಿ ಕೇಂದ್ರದ ಅಧಿಕಾರಿಗಳು ತಾಂತ್ರಿಕ ಕಾರಣಗಳಿಂದ ಕಟ್ಟಡಗಳನ್ನು ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಶಿಕ್ಷಕರ 8 ವಸತಿ ಗೃಹಗಳ ಕಟ್ಟಡ ದಶಕ ಕಳೆದರೂ ಶಿಕ್ಷಣ ಇಲಾಖೆಗೆ ಹಸ್ತಾಂತರವಾಗದಿರುವುದು ತಾಲ್ಲೂಕು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಬೇಜವಾಬ್ದಾರಿ ಧೋರಣೆಯಾಗಿದೆ. ಸದರಿ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದರೂ ಅಧಿಕಾರಿಗಳು ಇತ್ತ ಗಮನಹರಿಸದಿರುವುದು ಖಂಡನೀಯ ಎಂದು ಸ್ಥಳೀಯರು ದೂರಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲೆಯ ಹತ್ತಿರ ನಿರ್ಮಿಸಲಾಗಿರುವ ವಸತಿ ಗೃಹಗಳನ್ನು ಸ್ಥಳೀಯ ಸರ್ಕಾರಿ ಶಾಲಾ ಶಿಕ್ಷಕರಿಗೆ ಹಂಚಿಕೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT