ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಪ್ಯಾಕೇಜ್ ಘೋಷಣೆಗೆ ಛಾಯಾಗ್ರಾಹಕರ ಒತ್ತಾಯ

Last Updated 9 ಅಕ್ಟೋಬರ್ 2020, 13:02 IST
ಅಕ್ಷರ ಗಾತ್ರ

ರಾಯಚೂರು: ಕೋವಿಡ್‌ನಿಂದ ತತ್ತರಿಸಿದ ವೃತ್ತಿಪರ ಛಾಯಾಗ್ರಾಹಕರಿಗೆ ಆರ್ಥಿಕ ನೆರವು ನೀಡಬೇಕು ಹಾಗೂ ಸರ್ಕಾರದಿಂದ ವಿವಿಧ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಆನಂತರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಮಾರ್ಚ್‌ನಿಂದ ಜೂನ್‌ವರೆಗೂ ಮದುವೆ, ಸಮಾರಂಭಗಳು ನಡೆಯುತ್ತಿದ್ದವು. ಈ ಬಾರಿ ಕೋವಿಡ್‌ನಿಂದಾಗಿ ಎಲ್ಲಾ ಶುಭಕಾರ್ಯಗಳು ರದ್ದಾಗಿರುವ ಕಾರಣ ವೃತ್ತಿಪರ ಛಾಯಾಗ್ರಾಹಕರಿಗೆ ಆರ್ಥಿಕ ಹೊಡೆತ ಬಿದ್ದಿದೆ. ಇದರಿಂದ ರಾಜ್ಯದಲ್ಲಿ ಲಕ್ಷಾಂತರ ಛಾಯಾಗ್ರಾಹಕರು ಬೀದಿ ಪಾಲಾಗಿದ್ದಾರೆ ಎಂದು ಅಳಲು ತೋಡಿಕೊಂಡರು.

ವೃತ್ತಿಬಾಂಧವರಿಗೆ ಕೂಡಲೇ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಜಿಲ್ಲಾ ಮಟ್ಟದಲ್ಲಿ ನಿವೇಶನಗಳ ಹಂಚಿಕೆ ಮಾಡಬೇಕು. ಕೆಪಿಎ ಛಾಯಾ ಭವನಕ್ಕೆ ನಿವೇಶನ ಒದಗಿಸಬೇಕು. ಕರ್ನಾಟಕ ಛಾಯಾಗ್ರಹಣ ಅಕಾಡೆಮಿ ಸ್ಥಾಪನೆ ಮಾಡಬೇಕು. ವೃತ್ತಿಪರ ಛಾಯಾಗ್ರಾಹಕರಿಗೆ ವ್ಯಾಪಾರದ ನೆರವಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಬೇಕು ಎಂದು ಕೇಳಿಕೊಳ್ಳಲಾಗಿದೆ.

ವೃತ್ತಿಪರರಿಗೆ ಆದ್ಯತೆ ನೀಡಬೇಕು. ಆರೋಗ್ಯ ವಿಮೆ, ಅಪಘಾತ ವಿಮೆ ಪರಿಕರಗಳ ಹಾಗೂ ಜೀವವಿಮೆ ಯೋಜನೆ ಹಾಗೂ ಇತರೆ ಮೂಲ ಸೌಕರ್ಯ ಒದಗಿಸಬೇಕು ಎಂದು ಕೋರಲಾಗಿದೆ. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ರಾಜ್ಯದಾದ್ಯಂತ ಎಲ್ಲಾ ಛಾಯಾಗ್ರಾಹಕರು ಉದ್ಯಮ ಬಂದ್ ಮಾಡಿ ಅಕ್ಟೋಬರ್ 31ರಂದು ಬೆಂಗಳೂರು ಚಲೋ ಚಳವಳಿ ನಡೆಸಿ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ರಾಜು ಎನ್. ಇಲ್ಲೂರ್, ಕೆಪಿಎ ನಿರ್ದೇಶಕ ಶರಣಬಸವ ಹಿರೇಮಠ, ವಿಶ್ವನಾಥ ಚೌಧರಿ, ಅಕ್ಬರ್, ಶ್ರೀನಿವಾಸ ಇನಾಮದಾರ್‌, ಹರ್ಷಾ ಬಿ, ಅಬ್ದುಲ್ ನಬೀ, ಶಿವರಾಜ, ಮಹೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT