ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಾಪುರದಿಂದ ಶ್ರೀಶೈಲದವರೆಗೆ ಭಕ್ತರ ಪಾದಯಾತ್ರೆ

26 ವರ್ಷಗಳ ನಂತರ ಮೆರವಣಿಗೆಯಲ್ಲಿ ಪಂಚ ನಂದಿಕೋಲು
Published 27 ಮಾರ್ಚ್ 2024, 16:28 IST
Last Updated 27 ಮಾರ್ಚ್ 2024, 16:28 IST
ಅಕ್ಷರ ಗಾತ್ರ

ರಾಯಚೂರು: ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಯುಗಾದಿಯ ದಿನ ನಡೆಯಲಿರುವ ಜಾತ್ರೆಯಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರದ ಸೋಲಾಪುರದ ಸಿದ್ಧೇಶ್ವರ ಗುಡಿಯಿಂದ ಹೊರಟಿರುವ ಪಂಚ ನಂದಿಕೋಲು ಮೆರವಣಿಗೆ ಬುಧವಾರ ಸಂಜೆ ರಾಯಚೂರು ಮೂಲಕ ಸಾಗಿತು.

ಭಾರಿ ಗಾತ್ರದ ನಂದಿಕೋಲುಗಳನ್ನು ಹೊತ್ತ ಭಕ್ತರು ಶ್ವೇತ ವರ್ಣದ ಸಾಂಪ್ರದಾಯಿಕ ಉಡುಗೆಯಲ್ಲೇ ಪಾದಯಾತ್ರೆಯಲ್ಲಿ ಶ್ರೀಶೈಲದತ್ತದ ಹೆಜ್ಜೆ ಹಾಕಿದರು.

ರಾಜಶೇಖರ ಹಿರೇಹಪ್ಪು ನೇತೃತ್ವದಲ್ಲಿ 25 ಮಹಿಳೆಯರು, 25 ವೃದ್ಧರು, ದಂಪತಿಗಳು ಸೇರಿ ಒಟ್ಟು 200ಕ್ಕೂ ಅಧಿಕ ಜನ ಪಾದಯಾತ್ರೆಯಲ್ಲಿ ಹೊರಟಿದ್ದಾರೆ. ಮಾರ್ಗ ಮಧ್ಯದಲ್ಲಿ ಮತ್ತಷ್ಟು ಭಕ್ತರು ಮೆರವಣಿಗೆಯಲ್ಲಿ ಸೇರಿಕೊಳ್ಳುತ್ತಿದ್ದಾರೆ.

‘ಪ್ರತಿ ವರ್ಷ ಮಹಾಶಿವರಾತ್ರಿಯ ನಂತರ ಸೋಲಾಪುರದಿಂದ ಶ್ರೀಶೈಲಕ್ಕೆ ಪಾದಯಾತ್ರೆ ಹೊರಡುತ್ತೇವೆ. ಯುಗಾದಿಯ ಮುನ್ನಾ ದಿನ ಶ್ರೀಶೈಲಕ್ಕೆ ತಲುಪುತ್ತೇವೆ. ಈ ಬಾರಿ ಮಾರ್ಚ್ 13ರಂದು ಸೋಲಾಪುರದ ಸಿದ್ಧೇಶ್ವರ ಗುಡಿಯಿಂದ ಪಾದಯಾತ್ರೆ ಹೊರಟಿದ್ದೇವೆ’ ಎಂದು ಭಕ್ತ ಸುಹಾಸ ತೋರವಿ ತಿಳಿಸಿದರು.

‘ಸೋಲಾಪುರ, ಅಕ್ಕಲಕೋಟೆ, ಆಳಂದ, ಕಲಬುರಗಿ ಮಾರ್ಗವಾಗಿ ರಾಯಚೂರು ನಗರಕ್ಕೆ ಬಂದಿದ್ದೇವೆ. ಮಂತ್ರಾಲಯ, ಕರ್ನೂಲ್‌ ಮಾರ್ಗವಾಗಿ ಶ್ರೀಶೈಲ ತಲುಪಲಿದ್ದೇವೆ. ಮಾರ್ಗ ಮಧ್ಯೆದಲ್ಲಿ ಭಕ್ತರು ಊಟದ ವ್ಯವಸ್ಥೆ ಮಾಡುತ್ತಾರೆ. ಮಾಡದಿದ್ದರೂ ನಮ್ಮೊಂದಿಗೆ ಇರುವ ವಾಹನದಲ್ಲಿ ಅಡುಗೆ ಸಾಮಗ್ರಿ ಇದೆ. ರಾತ್ರಿ ಹಾಗೂ ಮಧ್ಯಾಹ್ನ ವಾಸ್ತವ್ಯ ಹೂಡುವ ಸ್ಥಳದಲ್ಲೇ ಅಡುಗೆ ಮಾಡಿ ಸೇವಿಸಿ ಪ್ರಯಾಣ ಮುಂದುವರಿಯುತ್ತೇವೆ’ ಎಂದು ಹೇಳಿದರು.

‘ಒಂದು ನಂದಿಕೋಲು ಕನಿಷ್ಠ ಒಂದು ಕ್ವಿಂಟಲ್‌ನಷ್ಟು ಭಾರ ಹಾಗೂ ಗರಿಷ್ಠ 29 ಅಡಿ ಎತ್ತರ ಇದೆ. 26 ವರ್ಷಗಳ ನಂತರ ಮೊದಲ ಬಾರಿಗೆ ಐದು ನಂದಿಕೋಲುಗಳನ್ನು ಮೆರವಣಿಗೆಯಲ್ಲಿ ಶ್ರೀಶೈಲಕ್ಕೆ ಒಯ್ಯಲಾಗುತ್ತದೆ. ಕಾಡು ಹಾಗೂ ಊರುಗಳು ಬಂದಾಗ ಹಲಗಿ ಬಾರಿಸುತ್ತ ಮುಂದೆ ಸಾಗುತ್ತೇವೆ’ ಎಂದು ತಿಳಿಸಿದರು.

‘ಮಲ್ಲಿಕಾರ್ಜುನ ದೇವರು 11 ತಿಂಗಳು ಸೋಲಾಪುರದ ಸಿದ್ಧೇಶ್ವರ ಮಂದಿರದಲ್ಲಿ ಹಾಗೂ ಒಂದು ತಿಂಗಳು ಶ್ರೀಶೈಲದಲ್ಲಿ ವಾಸ ಮಾಡುತ್ತಾನೆ ಎನ್ನುವ ನಂಬಿಕೆ ಭಕ್ತರಲ್ಲಿ ಇದೆ. ಹೀಗಾಗಿ ಪ್ರತಿ ವರ್ಷ ಯುಗಾದಿಯ ಸಂದರ್ಭದಲ್ಲಿ ಶ್ರೀಶೈಲಕ್ಕೆ ಹೋಗುತ್ತೇವೆ. ಯುಗಾದಿಗೆ ಮೊದಲ ದಿನ ಸೋಲಾಪುರದ ಭಕ್ತರಿಂದಲೇ ಪೂಜೆ ಆರಂಭವಾಗುತ್ತದೆ’ ಎಂದು ಸುಹಾಸ ತಿಳಿಸಿದರು.

ಮಹಾರಾಷ್ಟ್ರದ ಸೋಲಾಪುರದಿಂದ ಶ್ರೀಶೈಲಕ್ಕೆ ರಾಯಚೂರು ಮಾರ್ಗವಾಗಿ ಪಂಚ ನಂದಿಕೋಲುಗಳೊಂದಿಗೆ ಭಕ್ತರು ಪಾದಯಾತ್ರೆಯಲ್ಲಿ ಸಾಗಿದರು / ಚಿತ್ರ: ಶ್ರೀನಿವಾಸ ಇನಾಮದಾರ್
ಮಹಾರಾಷ್ಟ್ರದ ಸೋಲಾಪುರದಿಂದ ಶ್ರೀಶೈಲಕ್ಕೆ ರಾಯಚೂರು ಮಾರ್ಗವಾಗಿ ಪಂಚ ನಂದಿಕೋಲುಗಳೊಂದಿಗೆ ಭಕ್ತರು ಪಾದಯಾತ್ರೆಯಲ್ಲಿ ಸಾಗಿದರು / ಚಿತ್ರ: ಶ್ರೀನಿವಾಸ ಇನಾಮದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT