ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಆಕ್ರಮಗಳ ತಡೆಗೆ ಹದ್ದಿನ ಕಣ್ಣು

ಅಂತರರಾಜ್ಯ ಗಡಿಗಳಲ್ಲಿ ಏಳು ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಣೆ
Last Updated 28 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆಯು ಗುರುವಾರದಿಂದ ಆರಂಭವಾಗಿದ್ದು, ಜಿಲ್ಲೆಯಾದ್ಯಂತ ಸಂಭವನೀಯ ಚುನಾವಣೆ ಅಕ್ರಮಗಳನ್ನು ತಡೆಯುವುದಕ್ಕೆ ಜಿಲ್ಲೆಯ ಪೊಲೀಸರು ಇನ್ನಷ್ಟು ಬಿಗಿಕ್ರಮಗಳನ್ನು ಕೈಗೊಂಡಿದ್ದಾರೆ.

ರಾಯಚೂರು ಜಿಲ್ಲೆಗೆ ಹೊಂದಿಕೊಂಡ ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಗಡಿಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಹಗಲಿರುಳು ವಾಹನಗಳನ್ನು ತಪಾಸಣೆ ಮಾಡಿ ಬಿಡಲಾಗುತ್ತಿದೆ. ರಾಯಚೂರು ತಾಲ್ಲೂಕು ಗಡಿಯ ಮಾರ್ಗಗಳಾದ ಶಕ್ತಿನಗರ, ಕೊತ್ತದೊಡ್ಡಿ, ಸಿಂಗನೋಡಿ, ಕರ್ನೂಲ್‌ ಕ್ರಾಸ್‌ ಹಾಗೂ ಗಿಲ್ಲೇಸಗೂರಿನಲ್ಲಿ ಚೆಕ್‌ಪೋಸ್ಟ್‌ಗಳಿವೆ. ಮಾನ್ವಿ ತಾಲ್ಲೂಕು ರಾಜಲಬಂಡಾ ಹಾಗೂ ಸಿಂಧನೂರು ತಾಲ್ಲೂಕು ಐನೂರಲ್ಲಿ ಕೂಡಾ ಅಂತರರಾಜ್ಯ ಗಡಿ ಚೆಕ್‌ಪೋಸ್ಟ್‌ ಕಾರ್ಯನಿರ್ವಹಿಸುತ್ತಿವೆ.

ಅಂತರರಾಜ್ಯ ಗಡಿಗಳಲ್ಲಿರುವ ಏಳು ಚೆಕ್‌ಪೋಸ್ಟ್‌ ಸೇರಿ ಒಟ್ಟು 31 ಚೆಕ್‌ಪೋಸ್ಟ್‌ಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಿ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರತಿ ಚೆಕ್‌ಪೋಸ್ಟ್‌ನಲ್ಲಿ ಎರಡು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಎಲ್ಲವೂ ಚಿತ್ರೀಕರಣವಾಗುತ್ತದೆ. ಇದಲ್ಲದೆ, ಕರ್ತವ್ಯ ನಿರತ ಸಿಬ್ಬಂದಿ ಬಳಿ ಒಂದು ಹ್ಯಾಂಡಿಕ್ಯಾಮ್‌ ಇರುತ್ತದೆ. ಅಗತ್ಯಬಿದ್ದರೆ ಅದರಲ್ಲೂ ಚಿತ್ರೀಕರಣ ಮಾಡುವುದಕ್ಕೆ ಜಿಲ್ಲಾ ಪೊಲೀಸ್‌ ಇಲಾಖೆ ಮುನ್ನಚ್ಚರಿಕೆ ವಹಿಸಿದೆ.

ರಾಯಚೂರು ನಗರದಲ್ಲಿ 38 ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯ ಕಂಟ್ರೊಲ್‌ ರೂಮ್‌ ಮೂಲಕ ನಿಗಾ ಇಡಲಾಗಿದೆ. ಕರ್ನಾಟಕ ಸಾರ್ವಜನಿಕ ಆಸ್ತಿ ರಕ್ಷಣೆ ಕಾಯ್ದೆ ಅಡಿಯಲ್ಲಿ ಜನಸಂದಣಿ ಸೇರುವ ಕಡೆಗಳಲ್ಲಿ ಸಿಸಿಟಿವಿ ಅಳವಡಿಸಲು ಖಾಸಗಿಯವರಿಗೆ ಪೊಲೀಸರು ಸೂಚನೆ ನೀಡಿದ್ದಾರೆ. ರಾಯಚೂರು ನಗರದಲ್ಲಿ ಸುಮಾರು 400 ತಾಣಗಳಲ್ಲಿ ಸಿಸಿಟಿವಿ ಕ್ಯಾಮರಾಗಳಿರುವ ಬಗ್ಗೆ ಪೊಲೀಸರು ನೋಂದಣಿ ಮಾಡಿಕೊಂಡಿದ್ದಾರೆ.

ಯಾವುದೇ ಗಲಾಟೆ ಅಥವಾ ಶಾಂತಿ ಸುವ್ಯವಸ್ಥೆ ಹಾಳಾಗದಂತೆ ರೌಡಿ ಸೀಟರ್‌ಗಳಿಗೆ ಸೂಕ್ತ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ. 2093 ರೌಡಿ ಸೀಟರ್‌ಗಳನ್ನು ಆಯಾ ಪೊಲೀಸ್‌ ಠಾಣೆಗಳಿಗೆ ಕರೆತಂದು ಪರೇಡ್‌ ಮಾಡಿಸಿ, ಸೂಚನೆಗಳನ್ನು ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ಕಿಶೋರಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯ ವಿವಿಧೆಡೆ ಕಳ್ಳಬಟ್ಟಿ ಹಾಗೂ ಸೇಂದಿ ತಯಾರಿಸುವ ಸಂಶಯಾಸ್ಪದ ಗ್ರಾಮಗಳು ಹಾಗೂ ತಾಂಡಾಗಳ ಮೇಲೆ ಪೊಲೀಸರು ವಿಶೇಷ ನಿಗಾ ವಹಿಸಿದ್ದಾರೆ. ಇವರೆಗೂ 1,800 ಲೀಟರ್‌ ಅಕ್ರಮ ಮದ್ಯವನ್ನು ಜಪ್ತಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT