ಜನಪರ ಆರ್ಥಿಕ ನೀತಿ ಜಾರಿಗೆ ಒತ್ತಾಯ

7
ಕರ್ನಾಟಕ ಪ್ರಾಂತ ರೈತ ಸಂಘದಿಂದ ಜಿಲ್ಲೆಯ ವಿವಿಧೆಡೆ ಜೈಲ್‌ ಭರೋ ಚಳವಳಿ

ಜನಪರ ಆರ್ಥಿಕ ನೀತಿ ಜಾರಿಗೆ ಒತ್ತಾಯ

Published:
Updated:
Deccan Herald

ರಾಯಚೂರು: ದೇಶದಲ್ಲಿ ಜನಪರ ಆರ್ಥಿಕ ನೀತಿಗಳನ್ನು ಜಾರಿಗೊಳಿಸಬೇಕು ಹಾಗೂ ರಾಯಚೂರು ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಮತ್ತು ಕಾರ್ಮಿಕರು ಗುರುವಾರ ಜೈಲ್‌ ಬರೋ ಚಳವಳಿ ನಡೆಸಿದರು.

ರಾಯಚೂರು ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದ ಜಿಲ್ಲಾ ಸಮಿತಿ ಸದಸ್ಯರನ್ನು ಪೊಲೀಸರು ಬಂಧಿಸಿ, ಆನಂತರ ಬಿಡುಗಡೆಗೊಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ರೈತರು, ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದ್ದಾರೆ. ಕಾರ್ಪೊರೇಟ್ ಕಂಪೆನಿಗಳ ಸಿಇಒ ರೀತಿಯಲ್ಲಿ ವರ್ತಿಸುತ್ತಿರುವ ಪ್ರಧಾನಿ ಬದಲಾಗಬೇಕು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ತೊಲಗಬೇಕು ಎಂದು ಆಗ್ರಹಿಸಿದರು.

ಚುನಾವಣೆ ಪೂರ್ವದಲ್ಲಿ ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೆ ತರುತ್ತೇವೆ ಎಂದು ಹೇಳಿದ್ದ ಪ್ರಧಾನಿ ಮೋದಿ ಅವರು ಅಧಿಕಾರ ಸಿಗುತ್ತಿದ್ದಂತೆ ಸುಪ್ರೀಂ ಕೋರ್ಟ್‌ನಲ್ಲಿ ಸ್ವಾಮಿನಾಥನ್ ವರದಿ ಜಾರಿ ಸಾಧ್ಯವಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸುವ ಮೂಲಕ ರೈತರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಕೂಡಾ ಜನಪರವಾಗಿಲ್ಲ. ರಾಯಚೂರು ಜಿಲ್ಲೆಯಲ್ಲಿ ಸತತ ಮೂರು ವರ್ಷಗಳಿಂದ ಬರಗಾಲ ಆವರಿಸಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳದೆ ಜನಜೀವನ ತೊಂದರೆಯಲ್ಲಿದೆ. ಬರಗಾಲದ ಹಿನ್ನೆಲೆಯಲ್ಲಿ ರೈತರು ಮತ್ತು ಸ್ತ್ರೀಶಕ್ತಿ ಗುಂಪುಗಳ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಕೂಡಲೇ ಬರಗಾಲ ಕಾಮಗಾರಿಗಳನ್ನು ಆರಂಭಿಸಬೇಕು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಒದಗಿಸುವ ಕೆಲಸ ಮಾಡಬೇಕು. ಕೃಷಿ ಆಸಕ್ತಿ ಇರುವವರಿಗೆಲ್ಲ ಐದು ಎಕರೆ ಜಮೀನು ನೀಡಬೇಕು. ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ವರ್ಗಾಯಿಸಲಾದ ಜಮೀನುಗಳನ್ನು ವಾಪಸ್‌ ಪಡೆದು, ಬಡವರಿಗೆ ಹಂಚಿಕೆ ಮಾಡಬೇಕು ಎಂದರು.

ಮಾಜಿ ದೇವದಾಸಿಯರಿಗೆ ಕೃಷಿಗೆ ಯೋಗ್ಯವಾದ ಎರಡು ಎಕರೆ ಜಮೀನು ನೀಡಬೇಕು. ಕೇಂದ್ರ ಸರ್ಕಾರವೂ ಮಾಸಾಶನ ನೀಡಬೇಕು ಎಂದು ಕೋರಿದರು.

ಕರ್ನಾಟಕ ಕೃಷಿ ಕೂಲಿಕಾರರ ಸಂಘಟನೆ, ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆ ವಿಮೋಚನಾ ಸಂಘ, ದಲಿತ ಹಕ್ಕುಗಳ ಸಮಿತಿ, ಜನವಾದಿ ಮಹಿಳಾ ಸಂಘಟನೆ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಕರಿಯಪ್ಪ ಹಚ್ಚೋಳ್ಳಿ, ಎಚ್‌. ಪದ್ಮಾ, ಕೆ.ಜಿ.ವೀರೇಶ, ಎಂ.ಶರಣಗೌಡ, ಡಿ.ಎಸ್‌.ಶರಣಬಸವ, ಅಯ್ಯಮ್ಮ, ಸುಲೋಚನಾ, ರಂಗನಗೌಡ, ಮಹಾದೇವಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !