ಎನ್‌ಆರ್‌ಸಿಯಲ್ಲಿ ಹೆಸರು ಕೈಬಿಟ್ಟಿರುವುದಕ್ಕೆ ವಿರೋಧ

7
ಸೋಷಲಿಸ್ಟ್ ಸೆಂಟರ್ ಆಫ್ ಇಂಡಿಯಾ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ

ಎನ್‌ಆರ್‌ಸಿಯಲ್ಲಿ ಹೆಸರು ಕೈಬಿಟ್ಟಿರುವುದಕ್ಕೆ ವಿರೋಧ

Published:
Updated:
Deccan Herald

ರಾಯಚೂರು: ಅಸ್ಸಾಂನಲ್ಲಿ ಎನ್ಆರ್‌ಸಿ ಅಂತಿಮ ಕರಡು ಪಟ್ಟಿಯಲ್ಲಿ 40 ಲಕ್ಷ ಜನರ ಹೆಸರು ಕೈಬಿಟ್ಟಿರುವುದು ವಿರೋಧಿಸಿ ಸೋಷಲಿಸ್ಟ್ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಜಿಲ್ಲಾ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿ, ಮೂರು ದಶಕಗಳಿಂದ ಅಕ್ರಮ ವಲಸಿಗರ ವಿವಾದ ನಡೆಯುತ್ತಿದ್ದು, ಐದು ವರ್ಷಗಳಲ್ಲಿ ₹1,200 ಕೋಟಿ ವೆಚ್ಚದಲ್ಲಿ ಪೌರತ್ವ ನೋಂದಣಿ ಕಾರ್ಯ ನಡೆಸಿ, ಅಂತಿಮ ಕರಡು ಪಟ್ಟಿಯಲ್ಲಿ 40 ಲಕ್ಷ ಜನರ ಹೆಸರು ಕೈ ಬಿಟ್ಟಿರುವುದು ಖಂಡನೀಯ ಎಂದರು.

ಜುಲೈ 30 ರಂದು ಬಿಡುಗಡೆ ಮಾಡಿರುವ ಕರಡಿನಲ್ಲಿ ಮಾಜಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅವರ ವಂಶಸ್ಥರು, 1857ರ ಸಿಪಾಯಿ ದಂಗೆಯಲ್ಲಿ ಭಾಗವಹಿಸಿ ಶಿಕ್ಷೆ ಅನುಭವಿಸಿದ ಬಹಾದುರ್ ಗಾಂವ್ ಬುರಾ ವಂಶಸ್ಥರು ಹಾಗೂ ಸರ್ಕಾರಿ ನೌಕರರನ್ನು ಕೈಬಿಟ್ಟಿರುವುದು ಪ್ರಕ್ರಿಯೆಯ ವೈಫಲ್ಯವನ್ನು ತೋರಿಸುತ್ತದೆ. ಈ ಪ್ರಜೆಗಳು 1971ರ ಮಾರ್ಚ್‌ 25ಕ್ಕಿಂತ ಮುನ್ನ ಭಾರತದಲ್ಲಿ ವಾಸಿಸುತ್ತಿದ್ದರು ಎಂಬುದಕ್ಕೆ ದಾಖಲೆಗಳನ್ನು ಒದಗಿಸಬೇಕಾಗಿದೆ. ಆದರೆ, ಇವರು ಅಕ್ರಮ ವಲಸಿಗರೆಂದು ಸಾಬೀತಾಗಿದೆ ಎಂದು ಅಸ್ಸಾಂ ಗಣ ಪರಿಷತ್ (ಎಜಿಪಿ) ಸಿಹಿ ಹಂಚಿ ಸಂಭ್ರಮಿಸಿರುವುದು ಆತಂಕದ ವಿಷಯವಾಗಿದೆ. ಭಾಷಾ, ಅಲ್ಪಸಂಖ್ಯಾತರ ವಿರುದ್ಧ ಇಂತಹ ಫ್ಯಾಸಿವಾದಿ ದಾಳಿ ಜನತಂತ್ರ ವಿರೋಧಿ ಕ್ರಮವಾಗಿದೆ ಎಂದು ದೂರಿದರು.

1985ರ ಸುಮಾರಿಗೆ ಎಜಿಪಿ ಸರ್ಕಾರ ಅಸ್ಸಾಂಯೇತರ ವಿರುದ್ಧ ಚಳವಳಿ ಬೆಳೆಸಿತ್ತು. ಲಕ್ಷಾಂತರ ಅಕ್ರಮ ವಲಸಿಗರಿದ್ದಾರೆ ಎಂದು ವಾದಿಸಿತ್ತು. ಆದರೆ, ದಾಖಲೆ ಸಮೇತ ಸಾಬೀತು ಮಾಡಲು ಸಾಧ್ಯವಾಗಲಿಲ್ಲ. ಕೇವಲ 3.7 ಲಕ್ಷ ಜನರನ್ನು ಸಂಶಯಾಸ್ಪದ ಮತದಾರರು ಎಂದು ಗುರುತಿಸಲಾಗಿತ್ತು. ಇದರಲ್ಲಿ ನ್ಯಾಯಾಲಯ ಮೊರೆಹೋದ ಶೇ 95ರಷ್ಟು ಜನರು ಭಾರತೀಯರೆಂದು ಸಾಬೀತಾಗಿದ್ದಾರೆ. ಆದ್ದರಿಂದ ಎಲ್ಲ ನೈಜ ಭಾರತೀಯ ಪ್ರಜೆಗಳನ್ನು ಎನ್‌ಆರ್‌ಸಿಯಲ್ಲಿ ಸೇರಿಸಲು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕಾರ್ಯದರ್ಶಿ ಟಿ.ಎಸ್.ಸುನೀತಕುಮಾರ ಮಾತನಾಡಿ, ಅಸ್ಸಾಂನಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಎಜಿಪಿ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಈ ವಲಸಿಗರ ಸಮಸ್ಯೆಯನ್ನು ಚುನಾವಣೆಯ ವಿಷವನ್ನಾಗಿಸಿ ಜನರ ನಡುವೆ ದ್ವೇಷ ಬಿತ್ತುವ ಕಾರ್ಯ ಮಾಡುತ್ತಿದೆ. ಹಿಟ್ಲರ್‌ನಂತೆ ನಿರ್ದಿಷ್ಟ ಜನಾಂಗದ ವಿರುದ್ಧ ದ್ವೇಷ ಬಿತ್ತಿ ರಾಷ್ಟ್ರಾಂಧವಾದ ಬೆಳೆಸಲಾಗುತ್ತಿದೆ ಎಂದು ಆರೋಪಿಸಿದರು.

ಜಿಲ್ಲಾ ಸಮಿತಿ ಸದಸ್ಯೆ ಬಿ.ಆರ್.ಅಪರ್ಣಾ, ಎನ್.ಎಸ್.ವೀರೇಶ, ಚಂದ್ರಗಿರೀಶ್, ಚೆನ್ನಬಸವ ಜಾನೆಕಲ್, ಎಂ.ರಾಮಣ್ಣ, ಮಹೇಶ್ ಚೀಕಲಪರ್ವಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !