5
ಕೇಂದ್ರ ಬಸ್‌ ನಿಲ್ದಾಣ ನಿರ್ಗಮನ ದ್ವಾರದ ಎದುರು ವಾಹನಗಳ ಸಂಚಾರ ಸಂಕಷ್ಟ

ಆವಾಂತರ ಸೃಷ್ಟಿಸಿದರೂ ಮುಕ್ತಿ ಪಡೆಯದ ಹೊಂಡ!

Published:
Updated:
ರಾಯಚೂರಿನ ಕೇಂದ್ರ ಬಸ್‌ ನಿಲ್ದಾಣ ಮಾರ್ಗದಲ್ಲಿ ನಿರ್ಮಾಣಗೊಂಡ ಅಪಾಯಕಾರಿ ಹೊಂಡದಲ್ಲಿ ವಾಹನಗಳ ಸಂಚಾರ

ರಾಯಚೂರು: ನಗರದ ಕೇಂದ್ರ ಬಸ್‌ ನಿಲ್ದಾಣ ನಿರ್ಗಮನ ದ್ವಾರದಲ್ಲಿ ಬ್ರೇಕ್‌ ವಿಫಲದಿಂದಾಗಿ ಸರ್ಕಾರಿ ಬಸ್‌ ಡಿಕ್ಕಿಯಿಂದ ಯುವಕನೊಬ್ಬ ಮೃತಪಟ್ಟ ಘಟನೆ ನಡೆದು ಒಂದು ವರ್ಷ ಉರುಳಿದೆ. ಆದರೆ, ಅಪಘಾತ ನಡೆದ ಸ್ಥಳದಲ್ಲಿದ್ದ ರಸ್ತೆ ಹೊಂಡ ಹಾಗೇ ಉಳಿದುಕೊಂಡಿದೆ.

ಸರ್ಕಾರಿ ಬಸ್‌ಗಳು ಮತ್ತು ಖಾಸಗಿ ವಾಹನಗಳು ಹಗಲು ರಾತ್ರಿ ಈ ಮಾರ್ಗದಲ್ಲಿ ಸಂಚರಿಸುವುದರಿಂದ ಹೊಂಡವು ಸದಾ ದೂಳು ಎಬ್ಬಿಸುವ ತಾಣವಾಗಿದೆ. ಮಳೆಗಾಲದಲ್ಲಿ ಅದು ಮಳೆ ಕೊಯ್ಲು ಮಾಡುವುದಕ್ಕೆ ನಿರ್ಮಿಸಿದ ಹೊಂಡವಾಗಿ ಗೋಚರಿಸುತ್ತದೆ. ಈಚೆಗೆ ಸುರಿದ ಸಣ್ಣ ಪ್ರಮಾಣದ ಮಳೆಯಿಂದಾಗಿ ರಾಡಿ ನಿರ್ಮಾಣಗೊಂಡಿದ್ದು, ವಾಹನಗಳ ಚಕ್ರಗಳ ಮೂಲಕ ರಾಡಿಯು ಸ್ಥಳಾಂತರವಾಗಿ ಹೊಂಡವು ದಿನದಿಂದ ದಿನಕ್ಕೆ ಆಳವಾಗುತ್ತಿದೆ.

ನಗರದಲ್ಲಿ ಸಮಸ್ಯೆಗಳಿಗೆ ಕೊರತೆಯಿಲ್ಲ. ಆದರೆ ಕೇಂದ್ರ ಬಸ್‌ ನಿಲ್ದಾಣದ ಎದುರು ಸರ್ಕಾರಿ ವಾಹನಗಳು ಸೇರಿದಂತೆ ಜನರನ್ನು ನಿತ್ಯವೂ ಸಂಕಷ್ಟಕ್ಕೀಡು ಮಾಡುತ್ತಿರುವ ಹೊಂಡಕ್ಕೆ ಕನಿಷ್ಠ ಮಣ್ಣು ಸುರಿಯುವ ತುರ್ತು ಕೆಲಸಗಳೂ ಆಗುತ್ತಿಲ್ಲ. ಹೊಂಡದ ಮೂಲಕ ವಾಹನಗಳು ತುಂಬಾ ನಿಧಾನವಾಗಿ ವಾಹನಗಳು ಸಂಚರಿಸುವುದರಿಂದ ರಸ್ತೆಯ ಎರಡೂ ಕಡೆಗಳಲ್ಲಿ ಸಂಚಾರ ದಟ್ಟಣೆ ನಿರ್ಮಾಣವಾಗುತ್ತಿದೆ. ಹೊಂಡವನ್ನು ದಾಟಿಕೊಂಡು ನುಗ್ಗುವ ಭರದಲ್ಲಿ ವಾಹನಗಳು ದಿಢೀರ್‌ ಸ್ಥಗಿತಗೊಳ್ಳುತ್ತವೆ.

ಈ ಹೊಂಡದ ಅಕ್ಕಪಕ್ಕದಲ್ಲಿ ಬೀದಿ ವ್ಯಾಪಾರಿಗಳು ಹಾಗೂ ಹೋಟೆಲ್‌ಗಳು ಇವೆ. ವಾಹನಗಳ ಸಂಚಾರ ದಟ್ಟಣೆ ಮಧ್ಯೆದಲ್ಲಿ ಪ್ರಯಾಣಿಕರು ರಸ್ತೆ ದಾಟುವ ಸಾಹಸ ಮಾಡಬೇಕಾಗಿದೆ. ಮಕ್ಕಳು, ಮಹಿಳೆಯರು ಹಾಗೂ ವಯೋವೃದ್ಧರು ರಸ್ತೆ ದಾಟಲು ಪರದಾಡಬೇಕಾಗುತ್ತದೆ. ನಿರ್ಗಮನ ದ್ವಾರದಿಂದ ಬರುವ ಸರ್ಕಾರಿ ಬಸ್‌ಗಳು ಯಾವ ಕಡೆಗೆ ಸಂಚರಿಸುತ್ತವೆ ಎನ್ನುವುದು ಕೆಲವು ಸಲ ಪಾದಚಾರಿಗಳಲ್ಲಿ ಗೊಂದಲ ಉಂಟು ಮಾಡುತ್ತಿದೆ. ಬಸ್‌ ಡಿಪೊ ಪಕ್ಕದಲ್ಲಿ ಇರುವುದರಿಂದ ಸರ್ಕಾರಿ ಬಸ್‌ಗಳು ನಾಲ್ಕು ಮಾರ್ಗಗಳಲ್ಲಿ ಸಂಚರಿಸುತ್ತವೆ.

ಬಸ್‌ ನಿಲ್ದಾಣಕ್ಕೆ ಹೊಂದಿಕೊಂಡಿರುವ ಕೋಟೆ ದ್ವಾರದಲ್ಲಿ ಒಳಚರಂಡಿ ನಿರ್ಮಿಸುವ ಕಾಮಗಾರಿ ಇದೆ ಎನ್ನುವ ಕಾರಣಕ್ಕೆ ಹೊಂಡದ ದುರಸ್ತಿ ಇಲ್ಲಿಯವರೆಗೂ ನನೆಗುದಿಗೆ ಬಿದ್ದಿತ್ತು. ಒಳಚರಂಡಿ ನಿರ್ಮಿಸಲು ಬಸ್‌ ಸಂಚಾರ ಸ್ಥಗಿತಗೊಳಿಸಿ ಈಗಾಗಲೇ ಕೋಟೆ ಬಾಗಿಲಲ್ಲಿ ಒಳಚರಂಡಿ ಕೆಲಸವನ್ನೂ ಮುಗಿಸಲಾಗಿದೆ. ಆದರೆ, ಪಕ್ಕದಲ್ಲಿ ಸಮಸ್ಯೆ ಹರಡಿದ ಈ ರಸ್ತೆ ಹೊಂಡವನ್ನು ಮಾತ್ರ ಕಡೆಗಣಿಸಲಾಗಿದೆ.

‘ಸರ್ಕಾರಿ ಬಸ್ ನಿಲ್ದಾಣದ ಎದುರಿನಲ್ಲೆ ಇಷ್ಟು ದೊಡ್ಡ ತಗ್ಗು ನಿರ್ಮಾಣವಾಗಿದ್ದರೂ ಸರ್ಕಾರಿ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತ ಮತ್ತು ನಗರಸಭೆ ಮೂಲಕ ಮಾರ್ಕೆಟ್‌ಗೆ ಹೋಗಲು ಇದು ಪ್ರಮುಖ ಮಾರ್ಗ. ಕೂಡಲೇ ನಗರಸಭೆ, ಬಸ್‌ ನಿಲ್ದಾಣ ಅಧಿಕಾರಿಗಳು ಅಥವಾ ಜಿಲ್ಲಾಧಿಕಾರಿಗಳು ಕ್ರಮ ವಹಿಸಿ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು’ ಎಂದು ನಿಜಲಿಂಗಪ್ಪ ಕಾಲೊನಿ ನಿವಾಸಿ ಸೂರ್ಯಕಾಂತ ಒತ್ತಾಯಿಸಿದರು.

ಜನಸಾಮಾನ್ಯರಿಂದ ಹಿಡಿದು ದೊಡ್ಡ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೆಲ್ಲರೂ ಈ ಹೊಂಡದ ದರ್ಶನ ಮಾಡಿಕೊಂಡು ಹೋಗಿದ್ದಾರೆ. ಆದರೆ, ಕೆಲಸ ಮಾಡಿಸಬೇಕಾದವರಿಗೆ ಇಚ್ಛಾಶಕ್ತಿಯಿಲ್ಲ.
ಮಲ್ಲೇಶ ಕೆ.ವಿ, ಹಣ್ಣಿನ ವ್ಯಾಪಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !