ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನಭಾಗ್ಯ | ಆಧಾರ್‌ ಜೋಡಣೆಯಾಗದ ಖಾತೆಗಳಿಗೆ ಜಮಾ ಆಗದ ಹಣ: ನಗದು ಪಡೆಯಲು ಹರಸಾಹಸ

Published 11 ಆಗಸ್ಟ್ 2023, 5:43 IST
Last Updated 11 ಆಗಸ್ಟ್ 2023, 5:43 IST
ಅಕ್ಷರ ಗಾತ್ರ

ರಾಯಚೂರು: ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಪಡಿತರ ಹಣ ಜಮಾ ಆಗದ ಕಾರಣ ನೂರಾರು ಜನರು ಬ್ಯಾಂಕ್, ಆಹಾರ ಇಲಾಖೆಯ ಕಚೇರಿಗೆ ನಿತ್ಯ ಅಲೆದಾಡುವಂತಾಗಿದೆ.

ಅನ್ನಭಾಗ್ಯ ಯೋಜನೆಯಡಿ ನೀಡುವ 10 ಕೆ.ಜಿ ಅಕ್ಕಿಯಲ್ಲಿ 5 ಕೆ.ಜಿ ಅಕ್ಕಿಯ ಬದಲು ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವುದಾಗಿ ಸರ್ಕಾರ ಹೇಳಿದೆ. ಅದರಂತೆ ಈಗಾಗಲೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರಿಗೆ ಜೂನ್‌ನಲ್ಲಿ ತಲಾ 5 ಕೆ.ಜಿ ಅಕ್ಕಿ ಕೊಡಲಾಗಿದೆ. ಉಳಿದ 5 ಕೆ.ಜಿಯ ತಲಾ ₹170( ಪ್ರತಿ ಸದಸ್ಯರಿಗೆ) ನಗದು ಹಣ ಇನ್ನೂ 1 ಲಕ್ಷ ಪಡಿತರ ಚೀಟಿದಾರರಿಗೆ ಹಣ ಜಮಾ ಆಗಿಲ್ಲ.

ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ 4,53,425 ಆದ್ಯತಾ ಪಡಿತರ ಚೀಟಿಗಳಲ್ಲಿ (ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳು ಸೇರಿ) 4,03,920 ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗಳು ಸಕ್ರಿಯವಾಗಿವೆ. ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆಯಾಗಿವೆ. ಬ್ಯಾಂಕ್ ಖಾತೆ ಜೋಡಣೆಯಾಗಿರುವ ಪಡಿತರ ಚೀಟಿದಾರರಲ್ಲಿ ಜೂನ್‌ನಲ್ಲಿ ಆಹಾರ ಧಾನ್ಯ ಪಡೆದ ಕುಟುಂಬಗಳಿಗೆ ಜುಲೈನಲ್ಲಿ ನಗದು ವರ್ಗಾವಣೆಗೆ ಪರಿಗಣಿಸಿಲಾಗಿತ್ತು. 

3,37,652 ಪಡಿತರ ಚೀಟಿದಾರರಿಗೆ ನಗದು ಜಮಾ ಮಾಡಲಾಗಿದೆ. 1,14,000 ಪಡಿತರ ಚೀಟಿದಾರರಿಗೆ ಹಣ ಜಮಾ ಆಗಿಲ್ಲ ಈ ಪೈಕಿ 61 ಸಾವಿರ ಪಡಿತರ ಚೀಟಿದಾರರು ಬ್ಯಾಂಕ್  ಖಾತೆ ಹೊಂದಿಲ್ಲದವರು, ಬ್ಯಾಂಕ್ ಕೆವೈಸಿ ಮಾಡದ ಹಾಗೂ 3 ತಿಂಗಳ ಕಾಲ ನಿರಂತರವಾಗಿ ಪಡಿತರ ಧಾನ್ಯ ಪಡೆಯದ ಅನೇಕ ಪಡಿತರ ಚೀಟಿ ತಾತ್ಕಾಲಿಕ ಸ್ಥಗಿತವಾದ ಕಾರಣ ಹಣ ಜಮಾ ಆಗಿಲ್ಲ. ಅಲ್ಲದೇ ಇದರಲ್ಲಿ 3 ಸದಸ್ಯರಿಗಿಂತ ಕಡಿಮೆ ಇರುವ ಪಡಿತದಾರರಿಗೂ ಹಣ ಜಮಾ ಆಗುವುದಿಲ್ಲ ಎಂದು ಹೇಳಲಾಗಿದೆ.

ಈ ಮೊದಲಿನಂತೆಯೇ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಕೊಡಬೇಕು. ಯಾವುದೇ ಷರತ್ತುಗಳಿಲ್ಲದೇ ಪಡಿತರ ಚೀಟಿದಾರರ ಖಾತೆಗೆ ಹಣ ಜಮಾ ಮಾಡಬೇಕು ಎಂದು ಸಿಯಾತಲಾಬ್ ಬಡಾವಣೆಯ ನಿವಾಸಿ ತಸ್ಲೀಂ ಬಾನು ಮನವಿ ಮಾಡುತ್ತಾರೆ.

ಷರತ್ತುಗಳೇ ಮುಳುವು: ಜಿಲ್ಲೆಯಲ್ಲಿ ಅನೇಕರು ಪ್ರಧಾನಮಂತ್ರಿ ಜನಧನ್ ಯೋಜನೆಯಡಿ ಉಚಿತ ಬ್ಯಾಂಕ್ ಖಾತೆ ತೆರೆದಿದ್ದರು. ಆದರೆ ಖಾತೆ ತೆರೆದ ನಂತರ ಯಾವುದೇ ವ್ಯವಹಾರ ನಡೆಸದ ಕಾರಣ ಆರ್‌ಬಿಐ ನಿಯಮ ಅನ್ವಯ ಎರಡು ವರ್ಷದ ಅವಧಿಯವರೆಗೆ ಬ್ಯಾಂಕ್ ವ್ಯವಹಾರ ನಡೆಸದಿದ್ದರೆ ಖಾತೆ ನಿಷ್ಕ್ರಿಯವಾಗಿದೆ ಎಂದು ಅನೇಕರಿಗೆ ತಿಳಿದಿಲ್ಲ. ಹೀಗಾಗಿ ಸಮಸ್ಯೆಯಾಗಿದೆ.

ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ, ಕೆವೈಸಿ ಮಾಡದ ಕಾರಣ ಕೆಲವು ಖಾತೆಗಳು ನಿಷ್ಕ್ರಿಯವಾಗಿದೆ. ಕೆಲವರ ಆಧಾರ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆ ಇಲ್ಲ, ನಮೂದಿಲ್ಲ, ಮೊಬೈಲ್ ಸಂಖ್ಯೆ ಬದಲು, ಇತರೆ ತಾಂತ್ರಿಕ ಸಮಸ್ಯೆಗಳಿಂದಲೂ ಆಧಾರ್‌ ಲಿಂಕ್‌ ಆಗದೇ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗಿಲ್ಲ ಎನ್ನುವುದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವಿವರಣೆ.

‘ಕೆಲವರು ದುಡಿಯಲು ಮಹಾನಗರಗಳಿಗೆ ಗುಳೆ ಹೋಗಿದ್ದಾರೆ. ಅವರು ಮೂರು ತಿಂಗಳ ಕಾಲ ಪಡಿತರ ಪಡೆಯದ ಕಾರಣ ತಾತ್ಕಾಲಿಕವಾಗಿ ರದ್ದಾಗಿದೆ. ಅನ್ನಭಾಗ್ಯ ಯೋಜನೆಯಡಿ ಫಲಾನುಭಿಗಳಿಗೆ ಹಣ ವರ್ಗಾವಣೆ ಮಾಡಲು ಎನ್ಐಸಿಯಿಂದ ನಮಗೆ ಸಿಕ್ಕ ಡಾಟಾ ಪ್ರಕಾರ ಹಣ ಜಮಾ ಮಾಡಲಾಗಿದೆ.

‘ಇಲಾಖೆಯ ನಿಯಮದ ಪ್ರಕಾರ ಕೇವಲ 1 ಸಾವಿರ ಪಡಿತರ ಚೀಟಿದಾರರಿಗೆ ಮಾತ್ರ ಹಣ ವರ್ಗಾವಣೆ ಬಾಕಿಯಿದೆ. ಉಳಿದ ಫಲಾನುಭವಿಗಳಿಗೂ ಶೀಘ್ರ ಹಣ ಜಮಾ ಮಾಡಲಾಗುವುದು’ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ರಾಯಚೂರಿನ ಎಲ್‌ಬಿಎಸ್ ನಗರದ ಉಮಾದೇವಿ ನ್ಯಾಯಬೆಲೆ ಅಂಗಡಿಯಲ್ಲಿ ಗ್ರಾಹಕರಿಗೆ ಪಡಿತರ ಧಾನ್ಯ ಹಂಚಿಕೆ ಮಾಡುತ್ತಿರುವುದು
ರಾಯಚೂರಿನ ಎಲ್‌ಬಿಎಸ್ ನಗರದ ಉಮಾದೇವಿ ನ್ಯಾಯಬೆಲೆ ಅಂಗಡಿಯಲ್ಲಿ ಗ್ರಾಹಕರಿಗೆ ಪಡಿತರ ಧಾನ್ಯ ಹಂಚಿಕೆ ಮಾಡುತ್ತಿರುವುದು
ಆನ್‌ಲೈನ್‌ನಲ್ಲಿ ಆಧಾರ್‌ ಲಿಂಕ್‌ಗೆ ವ್ಯವಸ್ಥೆ ಮಾಡಿಸಿ ಮೃತ ವ್ಯಕ್ತಿಯ ಹೆಸರು ತೆಗೆಯಲು ಸಾಧ್ಯವಾಗುತ್ತಿಲ್ಲ ಸರ್ವರ್‌ ತೆರೆದುಕೊಳ್ಳದ ಕಾರಣ ಹೆಚ್ಚಿದ ಸಮಸ್ಯೆ
ಬ್ಯಾಂಕ್ ಖಾತೆ ಹೊಂದಿಲ್ಲದವರಿಗೆ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆಯುವಂತೆ ಸೂಚಿಸಲಾಗಿದೆ. ಇದರ ಫಲವಾಗಿ ಒಂದೇ ತಿಂಗಳಲ್ಲಿ ನೂರಾರು ಜನ ಖಾತೆ ತೆರೆದಿದ್ದಾರೆ.
ಕೃಷ್ಣ ಆಹಾರ ಮತ್ತು ನಾಗರಕ ಸರಬರಾಜು ಇಲಾಖೆ ಜಿಲ್ಲಾ ಉಪ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT